ಕೆರೆಗಳ ಅಕ್ರಮ ಒತ್ತುವರಿ ಶೀಘ್ರವೇ ತೆರವು : ಡಿಸಿ

ಚಿತ್ರದುರ್ಗ:
     ಜಿಲ್ಲೆಯಲ್ಲಿನ ಕೆರೆಗಳ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಎಲ್ಲ ಕೆರೆಗಳ ವ್ಯಾಪ್ತಿಯ ಅಳತೆ ಮಾಡಿಸಿ, ಒತ್ತುವರಿಯನ್ನು ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.
   ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೊಜಿಸಲಾಗಿದ್ದ ಜನಸ್ಪಂದನ ಸಭೆಯಲ್ಲಿ, ರೈತ ಮುಖಂಡ ಭೂತಯ್ಯ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ವಿಷಯ ತಿಳಿಸಿದರು.  ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಎಲ್ಲ ಕೆರೆಗಳ ವ್ಯಾಪ್ತಿ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಅಳತೆ ಮಾಡಿಸಲಾಗುವುದು.  ಒಂದು ವೇಳೆ ಒತ್ತುವರಿ ಕಂಡುಬಂದಲ್ಲಿ, ಅದನ್ನು  ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
 
     ರೈತ ಮುಖಂಡ ಭೂತಯ್ಯ ಅವರು ಸಭೆಯಲ್ಲಿ ಮನವಿ ಅರ್ಜಿ ಸಲ್ಲಿಸಿ, ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಸಂತಸಗೊಂಡಿದ್ದಾರೆ.  ಶೇಂಗಾ ಬೆಳೆ ಉತ್ತಮವಾಗಿ ಬಂದಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಲಾಭ ದೊರೆಯುವಂತಾಗಬೇಕು.  ಸರ್ಕಾರ ಈಗಾಗಲೆ ಶೇಂಗಾಕ್ಕೆ ಬೆಂಬಲ ಬೆಲೆ ಘೋಷಿಸಿದ್ದು, ಇದರ ಅನ್ವಯ, ಜಿಲ್ಲೆಯಲ್ಲಿ ಕೂಡಲೆ ಶೇಂಗಾ ಖರೀದಿ ಕೇಂದ್ರ ಪ್ರಾರಂಭಿಸಬೇಕು.  
    ಜಿಲ್ಲೆಯಲ್ಲಿ ಕೆಎಸ್‍ಆರ್‍ಟಿಸಿ ವಿಭಾಗ ಪ್ರಾರಂಭವಾಗಿ 2 ವರ್ಷಗಳೇ ಆಗಿದ್ದರೂ, ಒಂದೂ ಹೊಸ ಬಸ್ ಬಿಟ್ಟಿಲ್ಲ.  ಇರುವ ಹಳೆಯ ಬಸ್‍ಗಳು ಪದೇ ಪದೇ ಅಪಘಾತಕ್ಕೆ ತುತ್ತಾಗುತ್ತಿವೆ.  ಇನ್ನಾದರೂ, ಜಿಲ್ಲೆಗೆ ಹೊಸ ಬಸ್‍ಗಳನ್ನು ಪಡೆಯಲು ಕ್ರಮ ಕೈಗೊಳ್ಳಬೇಕು.  2018 ನೇ ಸಾಲಿನ ಬೆಳೆ ವಿಮೆ ಇದುವರೆಗೂ ರೈತರ ಕೈ ಸೇರಿಲ್ಲ.  ಅಲ್ಲದೆ ಬೆಳೆ ನಷ್ಟ ಪರಿಹಾರದ ಇನ್‍ಪುಟ್ ಸಬ್ಸಿಡಿ ಮೊತ್ತ ಜಿಲ್ಲೆಯಲ್ಲಿ ಸುಮಾರು ಶೇ. 30 ರಷ್ಟು ರೈತರಿಗೆ ಪಾವತಿಯಾಗಿಲ್ಲ.  ಈ ನಿಟ್ಟಿನಲ್ಲಿ ಕೂಡಲೆ ಸಂಬಂಧಪಟ್ಟ ರೈತರಿಗೆ ಇನ್‍ಪುಟ್ ಸಬ್ಸಿಡಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಅರ್ಜಿ ಸಲ್ಲಿಸಿದರು.
 
    ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸೋಮವಾರದಂದು ಜಿಲ್ಲಾ ಕಾರ್ಯಪಡೆ ಸಮಿತಿ ಸಭೆ ಆಯೋಜಸಿದ್ದು, ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಕೇಂದ್ರ ಪ್ರಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು, ಉಳಿದಂತೆ ಬೆಳೆ ವಿಮೆ ಹಾಗೂ ಇನ್‍ಪುಟ್ ಸಬ್ಸಿಡಿ ಪಾವತಿ ಕುರಿತಂತೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
   
    ಜನಸ್ಪಂದನ ಸಭೆಗೆ ಆಗಮಿಸಿದ್ದ ಬಿ.ಎಸ್. ವೀರೇಶ್ ಎನ್ನುವವರು ತಾವು ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಿಲಿಂಡರ್ ಪಡೆದುಕೊಂಡಿದ್ದು, ತಮ್ಮ ಕುಟುಂಬ ಇದೀಗ ಚಿತ್ರದುರ್ಗದಿಂದ ಚಳ್ಳಕೆರೆಗೆ ಸ್ಥಳಾಂತರಗೊಂಡಿದೆ,  ಗ್ಯಾಸ್ ಏಜೆನ್ಸಿಯವರು ತಮ್ಮ ಸಿಲಿಂಡರ್ ಅನ್ನು ಚಳ್ಳಕೆರೆಗೆ ವರ್ಗಾವಣೆ ಮಾಡಿಕೊಡುತ್ತಿಲ್ಲ ಎಂದು ದೂರು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸಮಸ್ಯೆಯನ್ನು ಕೂಡಲೆ ಪರಿಹರಿಸಿ, ಸಿಲಿಂಡರ್ ಅನ್ನು ಚಳ್ಳಕೆರೆಗೆ ವರ್ಗಾಯಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದರು.
   
    ಚಳ್ಳಕೆರೆ ತಾಲ್ಲೂಕಿನ ಜಿ.ಟಿ ಪರಶುರಾಮ್ ಅವರು ‘ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಜಮೀನಿಗೆ ಮಂಜೂರು ಪತ್ರ’ ನೀಡುವಂತೆ ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಮಾಹಿತಿ ಪಡೆದು, ಕ್ರಮ ಜರುಗಿಸಲಾಗುವುದು ಎಂದರು. ಚಿತ್ರದುರ್ಗ ತಾಲ್ಲೂಕಿನ ಇಬ್ರಾಹಿಂ ಸಾಹೇಬ್ ಅವರು ‘ಕಟ್ಟಡ ಕಾರ್ಮಿಕರ ಮರಣದ ನಂತರ ನೀಡುವ ಸಹಾಯಧನ’ ಕ್ಕಾಗಿ ಸಲ್ಲಿಸಿದ ಅರ್ಜಿಗೆ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
 
    ಚಿತ್ರದುರ್ಗದ ತಿಪ್ಪಮ್ಮ ಅವರು  ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಗರಸಭೆಯಲ್ಲಿ ‘ಅಕ್ರಮವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವವರ ದಾಖಲೆ ಪರಿಶೀಲಿಸಿ, ಸೇವೆಯಿಂದ ಅಮಾನತು’ ಮಾಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಆಕ್ರಮವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ತನಿಖೆ ಕೈಗೊಂಡು ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದರು. 
   
     ಚಳ್ಳಕೆರೆಯಲ್ಲಿ ‘ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಶೌಚಾಲಯ ಮತ್ತು ಬಚ್ಚಲು ಗುಂಡಿಗಳೆರಡನ್ನು ತೆರವುಗೊಳಿಸಿ, ಚರಂಡಿ ನಿರ್ಮಿಸಿಕೊಡುವಂತೆ ಅಲುಮೇಲಮ್ಮ ಅವರು ಅರ್ಜಿ ಸಲ್ಲಿಸಿದರು.  ನಗರಸಭೆಯಿಂದ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಲಾಯಿತು.
   
     ಚಿತ್ರದುರ್ಗದ ಟಿ. ದುರುಗೇಶ್ ಅವರು ನಗರದಲ್ಲಿ ಪಾಳು ಬಿದ್ದಿರುವ ಕಟ್ಟಡಗಳನ್ನು ತೆರವುಗೊಳಿಸಬೇಕು. ಹಲವಾರು ಯೋಜನೆಗಳನ್ನು ರೂಪಿಸಿ, ನಗರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದಾಗಿ ಅರ್ಜಿ ಸಲ್ಲಿಸಿದರು. ಚಿತ್ರದುರ್ಗ ಆರ್. ವೆಂಕಟೇಶ್ ಅವರು ತೋಟಗಾರಿಕೆ ಇಲಾಖೆಯಲ್ಲಿ ಕಾಳು ಮೆಣಸಿನ ಬೆಳೆಗೆ ಸಹಾಯಧನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದರು.  ಚಿತ್ರದುರ್ಗದ ಚಿತ್ರಮ್ಮ ಅವರು  ಸ್ವಯಂ ಉದ್ಯೋಗ ಮಾಡುವ ಉದ್ದೇಶದಿಂದ ‘ಗ್ರಾಮೀಣ ಬ್ಯಾಂಕ್‍ನಲ್ಲಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸುವಂತೆ ಕೋರಿ ಅರ್ಜಿ ಸಲ್ಲಿಸಿದರು. 
   
    ಚಿತ್ರದುರ್ಗದ ಶಿವಮ್ಮ ಅವರು ‘ವಿಧವಾ ವೇತನ ಮಂಜೂರು ಹಾಗೂ ಕಾರ್ಮಿಕರಿಗೆ ವಿತರಿಸುವ ಕಾರ್ಡ್ ಇದ್ದರೂ ಕೂಡ ಹಣ ಸಂದಾಯವಾಗದಿರುವುದರ ಬಗ್ಗೆ’ ಅರ್ಜಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
 
     ವೆಂಕಟೇಶ್ವರ ಸ್ವಾಮಿ ದೇವಾಲಯದ ಸಮಿತಿಯ ಸದಸ್ಯರು ‘ಹಿರೇಹಳ್ಳಿ ಗೊಲ್ಲರ ಕಪಿಲೆಯ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಸ್ಥಳಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು’ ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದರು.ಜಯರಾಮರೆಡ್ಡಿ ಹಾಗೂ ಜಿ. ಚಿಂದಾನಂದ ರೆಡ್ಡಿ ಅವರು ಬೆಳೆಸಾಲ ಮನ್ನಾ ಯೋಜನೆ ಬಗ್ಗೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಸಂದಾಯವಾಗದಿರುವ ಬಗ್ಗೆ ಅರ್ಜಿ ಸಲ್ಲಿಸಿದರು.
     ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಅರ್ಜಿ ಹಾಕುವಾಗ ಮೂಲ ದಾಖಲಾತಿಗಳಲ್ಲಿ ದೋಷವಿಲ್ಲದಾಗ ಅರ್ಜಿ ಹಾಕಬೇಕು. ನಂತರ ಇದರ ಸೌಲಭ್ಯ ದೊರೆಯುತ್ತದೆ ಎಂದು ಅವರಿಗೆ ತಿಳಿಸಿದರು.ಸಾಗುವಳಿ ಮಾಡುತ್ತಿರುವ ಜಮೀನು ಮಂಜೂರಾತಿ, ಮರಳು ಪೂರೈಕೆ, ಖಾತೆ ಬದಲಾವಣೆ, ವೃದ್ಧಾಶ್ರಮ ಕಟ್ಟಡ ನಿರ್ಮಾಣಕ್ಕೆ ಅನುದಾನ, ಮನೆ ಮಂಜೂರಾತಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 38 ಅರ್ಜಿಗಳು ಜನಸ್ಪಂದನ ಸಭೆಯಲ್ಲಿ ಸ್ವೀಕೃತಗೊಂಡವು. ಅರ್ಜಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ವಿಚಾರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಹೇಳಿದರು. 

Recent Articles

spot_img

Related Stories

Share via
Copy link
Powered by Social Snap