ಚಿಕ್ಕನಾಯಕನಹಳ್ಳಿ:

ತಾಲೂಕಿನ ನಾಯಕನಹಟ್ಟಿ ಶಾಲೆಗೆ ಹೊಸ ಕೊಠಡಿ ನಿರ್ಮಿಸುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಸೂಚಿಸಿದ್ದಾರೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಆರ್. ಕಾಮಾಕ್ಷಿ ತಿಳಿಸಿದರು.
ತಾಲೂಕಿನ ನಾಯಕನಹಟ್ಟಿ(ದೊಡ್ಡಪಾಳ್ಯ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಆವರಣದಲ್ಲಿನ ಕಂಬ ಕುಸಿದು ಮೇಲ್ಚಾವಣಿ ಬಿದ್ದಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿದ ಉಪನಿರ್ದೇಶಕರು, ಗ್ರಾಮಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಈ ವಿಷಯ ತಿಳಿಸಿದರು, ಸ್ಥಳೀಯ ಗ್ರಾಮ ಪಂಚಾಯ್ತಿಗೆ ಕೊಠಡಿಯನ್ನು ನಿಯಮಾನುಸಾರ ನೆಲಸಮಗೊಳಿಸಲು ತಿಳಿಸಿದರು, ಕೊಠಡಿ ನಿರ್ಮಾಣಕ್ಕೆ ಅವಶ್ಯವಿರುವ ಅಂದಾಜು ಪಟ್ಟಿಯನ್ನು ಸಂಬಂಧಿಸಿದ ಇಂಜಿನಿಯವರಿಂದ ಪಡೆದು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಲಾಗುವುದು.
ಈಗಿರುವ ಶಾಲೆಯ ಸ್ಥಳವು ಗ್ರಾಮಠಾಣಾಕ್ಕೆ ಸೇರಿದ್ದು, ಅದನ್ನು ಶಾಲೆಯ ಹೆಸರಿಗೆ ಗ್ರಾಮ ಪಂಚಾಯ್ತಿಯಿಂದ ನೊಂದಾಯಿಸಿಕೊಂಡು ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.ಈ ಶಾಲೆಯಲ್ಲಿ ಒಟ್ಟು 16 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಎರಡು ಕೊಠಡಿಗಳಿವೆ, ಇದರಲ್ಲಿ ಈಗ ಒಂದು ಕೊಠಡಿ ಶಿಥಿಲಗೊಂಡಿರುವುದರಿಂದ ಇರುವ ಇನ್ನೊಂದು ಕೊಠಡಿಯಲ್ಲಿ ಬೋಧನೆ ನಡೆಸುವಂತೆ ಸೂಚಿಸಿದರು.
ಹಂದನಕೆರೆ ಜಿ.ಪಂ.ಸದಸ್ಯ ರಾಮಚಂದ್ರಯ್ಯ ಮಾತನಾಡಿ, ನೆಲಸಮಗೊಳಿಸಲು ಗ್ರಾ.ಪಂ.ಯಿಂದ ತಕ್ಷಣವೇ ಹತ್ತು ಸಾವಿರ ರೂಗಳನ್ನು ಬಿಡುಗಡೆಗೊಳಿಸುವಂತೆ ಸೂಚಿಸಿದ್ದು, ಕೊಠಡಿ ನಿರ್ಮಾಣಕ್ಕೆ ಅಗತ್ಯವಿರುವ ಜಮೀನನ ದಾಖಲೆಗಳನ್ನು ಶೀಘ್ರವೇ ಸಿದ್ದ ಪಡಿಸಲು ಸ್ಥಳದಲ್ಲಿದ್ದ ಪಿ.ಡಿ.ಓ.ರವರಿಗೆ ತಿಳಿಸಿದರು.
ಮತ್ತೊಂದು ಕೊಠಡಿಯ ಮೇಲ್ಚಾವಣಿ ದುರಸ್ಥಿ ಸ್ಥಿತಿಯಲ್ಲಿದ್ದು, ಇದಕ್ಕೆ ಜಿ.ಪಂ.ನ ಲಿಂಕ್ ಡಾಂಕ್ಯುಮೆಂಟ್ನ್ ಲ್ಲಿ ಒಂದುವರೆ ಲಕ್ಷ ರೂಗಳ ಮಂಜೂರಾತಿಗೆ ಸಲ್ಲಿಸಲಾಗಿದೆ ಎಂದರು.
ಸಭೆಯಲ್ಲಿ ಬಿ.ಇ.ಓ. ಕಾತ್ಯಾಯನಿ ಎಚ್, ಬಿ.ಆರ್.ಸಿ. ಸಂಗಮೇಶ್ ಬಿ.ಕೆ, ಇಂಗ್ಲೀಷ್ ವಿಷಯ ಪರಿವೀಕ್ಷಕ ರವೀಶ್, ಪಿ.ಡಿ.ಓ. ಮಲ್ಲೇಶಾಚಾರ್, ಎಸ್.ಡಿ.ಎಂ.ಸಿ.ಅಧ್ಯಕ್ಷ ಮಂಜುನಾಥ್, ಸಿ.ಆರ್.ಪಿ.ಗಳಾದ ರಮೇಶ್ ಎಚ್.ಪಿ, ನಾಗರಾಜ್ ಎಸ್.ಆರ್. ಸೇರಿದಂತೆ ಎಸ್.ಡಿ.ಎಂ.ಸಿ.ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
