ಬೆಂಗಳೂರು
ವೀಸಾ ಶುಲ್ಕ ಪಾವತಿಸಲು ಹೇಳಿದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ(ಇಮಿಗ್ರೇಷನ್)ಅಧಿಕಾರಿ ವೈ.ಎಸ್ ಶೈನ್ ಅವರ ಮುಖಕ್ಕೆ ಗುದ್ದಿ ಮಾರಾಣಾಂತಿಕ ಹಲ್ಲೆ ನಡೆಸಿದ ದಕ್ಷಿಣ ಕೊರಿಯಾದ ಪ್ರಜೆಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ
ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಶೈನ್ ಅವರ ಮುಖಕ್ಕೆ 12 ಹೊಲಿಗೆ ಹಾಕಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕೃತ್ಯ ನಡೆಸಿದ ದಕ್ಷಿಣ ಕೊರಿಯಾದ ಪ್ರಜೆ ಸಿಗ್ವಾನ್ ಪಾರ್ಕ್ (24)ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಬ್ರೆಜಿಲ್‍ನಿಂದ ಮಂಗಳವಾರ ರಾತ್ರಿ 11ರ ವೇಳೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಗ್ವಾನ್ ಪಾರ್ಕ್ ಅವರಿಗೆ ವಲಸೆ ಅಧಿಕಾರಿ ಶೈನ್ ಅವರು 2 ಸಾವಿರ ರೂ.ಗಳ ವೀಸಾ ಹಣ ಪಾವತಿಸುವಂತೆ ಸೂಚಿಸಿದ್ದಾರೆ.ಆರೋಪಿಯು ಕ್ರೆಡಿಕ್ ಕಾರ್ಡನ್ನು ನೀಡಿದ್ದು, ಅದರಲ್ಲಿ ಹಣವಿರಲಿಲ್ಲ .ಭಾರತೀಯ ರೂಪಾಯಿಯಲ್ಲಿ ಶುಲ್ಕವನ್ನು ಪಾವತಿಸುವಂತೆ ಸೂಚಿಸಿದ್ದು ನನ್ನ ಬಳಿ ಹಣವಿಲ್ಲವೆಂದು ಜಗಳ ತೆಗೆದ ಆರೋಪಿಯು ಶೈನ್ ಅವರ ಮುಖಕ್ಕೆ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ.
ರಕ್ತ ಸೋರುತ್ತಿದ್ದ ಶೈನ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಸಿಗ್ವಾನ್ ಪಾರ್ಕ್‍ನನ್ನು ಹಿಡಿದ ಇತರ ವಲಸೆ ವಿಭಾಗದ ಸಿಬ್ಬಂದಿ ದೇವನಹಳ್ಳಿ ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ವಲಸೆ ಅಧಿಕಾರಿ ಲಾಬುರಾಮ್ ಅವರು ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಗಾಯಗೊಂಡ ಶೈನ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ