ಬೆಂಗಳೂರು
ಜಯನಗರದ 11 ನೇ ಮುಖ್ಯರಸ್ತೆಯಲ್ಲಿರುವ ಗ್ರಂಥಾಲಯ ಆವರಣದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಜೇಜಸ್ವಿ ಸೂರ್ಯ ಅವರು ಸಂಸದರ ಕಚೇರಿ ತೆರೆದಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ಪ್ರಶಾಂತ ಸ್ಥಳದಲ್ಲಿ ಕಚೇರಿ ತೆರೆದು ಸಾರ್ವಜನಿಕರಿಗೆ ಕಿರಿ ಉಂಟುಮಾಡುವುದು ಖಂಡನೀಯ ಎಂದು ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಸೌಮ್ಯರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಈ ವಿಚಾರದಲ್ಲಿ ಶಾಸಕರಾದ ರಾಮಲಿಂಗಾ ರೆಡ್ಡಿ, ಪಾಲಿಕೆ ಸದಸ್ಯ ಎನ್. ನಾಗರಾಜ್ ಅವರನ್ನು ಗುರಿಯಾಗಿಸಿಕೊಂಡು ಟೀಕಿ ಮಾಡುತ್ತಿರುವುದು ಸಹ ಖಂಡನೀಯ ಎಂದಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗ್ರಂಥಾಲಯಕ್ಕೆ ಎಲ್ಲಾ ವಯೋಮಾನದವರು ಬರುತ್ತಾರೆ. ಕೆಲವರು ಪತ್ರಿಕೆ ಓದಲು ಬಂದರೆ, ಇನ್ನು ಕೆಲವರು ಪುಸ್ತಕಗಳ ಅಧ್ಯಯನಕ್ಕಾಗಿ ಬರುತ್ತಾರೆ. ಐಎಎಸ್ ಮತ್ತು ಕೆ.ಎ.ಎಸ್. ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಆಗಮಿಸುವವರ ಸಂಖ್ಯೆಯೂ ಹೆಚ್ಚಿದೆ. ಇವರ ಜ್ಞಾನಾರ್ಜನೆಗೆ ಸಂಸದರ ಕಚೇರಿ ಅಡ್ಡಿಯಾಗಿದೆ. ಭವಿಷ್ಯದ ಅಧಿಕಾರಿಗಳನ್ನು ಸೃಷ್ಟಿಸುವ, ಸಮಾಜಕ್ಕೆ ಆಸ್ತಿಯಾಗಬಲ್ಲ ಈ ಜ್ಞಾನಕೇಂದ್ರದ ಪಾವಿತ್ರ್ಯಕ್ಕೆ ಸಂಸದರ ಕಚೇರಿ ತೊಡರುಗಾಲು ಹಾಕಿದಂತಾಗಿದೆ. ಇಂತಹ ಸೂಕ್ಷ್ಮ ಜಾಗದಲ್ಲಿ ಕಚೇರಿ ತೆರೆದು ತೊಂದರೆ ಕೊಡುವ ಸಂಸದರ ದರ್ಪದ ಮನಸ್ಥಿತಿ ಖಂಡನೀಯ. ಜ್ಞಾನಾರ್ಜನೆ ಮಾಡುವವರ ಮೇಲೆ ಅವರು ಮಾನಸಿಕವಾಗಿ ದೌರ್ಜನ್ಯ ನಡೆಸುತ್ತಿರುವುದನ್ನು ಇದು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಯಾವುದೇ ಜಾತಿ, ಜನಾಂಗ, ಧರ್ಮದ ಬೇಧ ಭಾವವಿಲ್ಲದೇ ಎಲ್ಲರೂ ಒಂದು ಕಡೆ ಸೇರುವ ಗ್ರಂಥಾಲಯದಲ್ಲಿ ಜ್ಞಾನದ ಜ್ಯೋತಿ ಬೆಳಗುವ ಕೇಂದ್ರ. ಇಲ್ಲಿ ಬೆಳಕು ಹರಿಯಬೇಕೆ ಹೊರತು ಬೆಳಕನ್ನು ನಂದಿಸುವ ಕೆಲಸ ಆಗಬಾರದು. ಕಚೇರಿಗಾಗಿ ಪಾರ್ಕಿಂಗ್ ಸ್ಥಳವನ್ನು ಸಹ ಆಕ್ರಮಿಸಿಕೊಂಡಿರುವುದರಿಂದ ಎಲ್ಲಾ ನಾಗರಿಕರಿಗೂ ಇದರಿಂದ ತೊಂದರೆಯಾಗಿದೆ. ಹಿರಿಯ ನಾಗರಿಕರು ಈ ಬೆಳವಣಿಗೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸೌಮ್ಯ ರೆಡ್ಡಿ ಹೇಳಿದ್ದಾರೆ.
ನಾವು ಈ ಸ್ಥಳದಲ್ಲಿ ಶಾಸಕರ ಕಚೇರಿ ತೆರೆಯುವಂತೆ ಕೇಳಿರಲಿಲ್ಲ. ನಮಗೆ ಈಗಾಗಲೇ ಕಚೇರಿ ಇದೆ. ನಾವು ಈ ಹಿಂದೆ ದಿವಂಗತ ವಿಜಯ ಕುಮಾರ್ ಅವರು ಬಳಸುತ್ತಿದ್ದ ಕಚೇರಿಯನ್ನೇ ಶಾಸಕರ ಕಚೇರಿಯನ್ನಾಗಿ ಮುಂದುವರೆಸಿದ್ದೇವೆ. ಬಿಜೆಪಿ ಹಿರಿಯ ಮುಖಂಡರಾದ ದಿವಂಗತ ಅನಂತ ಕುಮಾರ್ ಅವರು ಸೌತ್ ಎಂಡ್ ವೃತ್ತದಲ್ಲಿ ಬಳಸುತ್ತಿದ್ದ ಕಚೇರಿಯನ್ನೇ ತೇಜಸ್ವಿ ಸೂರ್ಯ ಅವರು ಮುಂದುವರೆಸಿಕೊಂಡು ಹೋಗಬಹುದಿತ್ತು. ಇದರಿಂದ ಯಾರಿಗೂ ತೊಂದರೆ ಎದುರಾಗುತ್ತಿರಲಿಲ್ಲ. ಇದರ ಬದಲು ಗ್ರಂಥಾಲಯ ಆವರಣದಲ್ಲಿ ತಮ್ಮ ನೂತನ ಕಚೇರಿ ನಿರ್ಮಿಸಲು ಸಂಸದ ತೇಜಸ್ವಿ ಸೂರ್ಯ ಒಂದೇ ದಿನದಲ್ಲಿ ಪಾಲಿಕೆಯಿಂದ ಅನುಮತಿ ಪಡೆದು ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಇವರಿಗೆ ಅಂತಹ ತುರ್ತು ಅನಿವಾರ್ಯತೆ ಏನಿತ್ತು. ಎಲ್ಲವನ್ನೂ ತರಾತುರಿಯಲ್ಲಿ ಮಾಡಿಸಿಕೊಳ್ಳುವ ಅಗತ್ಯವಿತ್ತೆ ಎಂದು ಸೌಮ್ಯ ರೆಡ್ಡಿ ಪ್ರಶ್ನಿಸಿದ್ದಾರೆ.
ನಮ್ಮ ಕೌಸ್ತುಭ ಸಂಸ್ಥೆ ಅಂಗವಿಕಲರಿಗೆ ವಿದ್ಯಾಭ್ಯಾಸ ಒದಗಿಸುವ ಮಹತ್ವದ ಉದ್ದೇಶ ಹೊಂದಿದ್ದು, ಇಲ್ಲಿ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆ ನಡೆಸಲು ನಾವು ಉದ್ದೇಶಿಸಿದ್ದೇವು. ಇಲ್ಲಿ ಕಾಂಗ್ರೆಸ್ ಕಚೇರಿ ಮಾಡಲು ನಾವೇನು ಹೊರಟಿರಲಿಲ್ಲ. ಮಾಜಿ ಶಾಸಕ, ದಿವಂಗತ ವಿಜಯ್ ಕುಮಾರ್ ಅವರು ಇಲ್ಲಿ ಒಂದು ತಿಂಗಳ ಕಾಲ ಶೈಕ್ಷಣಿಕ ಸಮಿತಿ ಮೂಲಕ ಶಿಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅವರ ಆಶಯಗಳನ್ನು ನಾವು ಬೆಂಬಲಿಸುತ್ತಿದ್ದೇವು. ಇದಕ್ಕೆ ಪೂರಕವಾಗಿ ಕೌಸ್ತುಬ ಸಂಸ್ಥೆ ಮೂಲಕ ದಿವ್ಯಾಂಗರಿಗೆ ಶಿಕ್ಷಣ ಒದಗಿಸುವುದು ತಮ್ಮ ಆದ್ಯತೆಯಾಗಿತ್ತು. ಆದರೆ ಸಂಸದರು ನಮ್ಮ ನಮ್ಮ ಪ್ರಯತ್ನವನ್ನು ಹತ್ತಿಕ್ಕುವ ಮೂಲಕ ದಿವ್ಯಾಂಗರಿಗೂ ಅಪಮಾನ ಮಾಡಿದ್ದಾರೆ. ತಾವೇ ತಪ್ಪು ಹೆಜ್ಜೆ ಇಟ್ಟು ನಾವು ದಿವಂಗತ ವಿಜಯ ಕುಮಾರ್ ಅವರ ಆಶಯಗಳಿಗೆ ವಿರುದ್ಧವಾಗಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿರುವುದು ಕೇವಲ ರಾಜಕೀಯ ಟೀಕೆಯಾಗಿದೆ ಎಂದಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








