ಸಚಿವರಿಗೆ ಸಭಾಪತಿಯಿಂದ ಪಾಠ

ಬೆಳಗಾವಿ

       ಸಚಿವರು ಸದನಕ್ಕೆ ಬರುವ ಮೊದಲು ಪ್ರಶ್ನೋತ್ತರಕ್ಕೆ ಉತ್ತರಿಸಲು ತಯಾರಾಗಿ ಬರಬೇಕು, ಸಂಪೂರ್ಣ ಮಾಹಿತಿ ಪಡೆದುಕೊಂಡಿರಬೇಕು, ಅಧಿಕಾರಿಗಳು ಹೇಳಿಕೊಟ್ಟಿದ್ದನ್ನೇ ಒಪ್ಪಿಸುವುದನ್ನು ಬಿಟ್ಟು ಸ್ವತಃ ತಯಾರಾಗಿರಬೇಕು ಎಂದು ಮೇಲ್ಮನೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಪಾಠ ಮಾಡಿದ ಘಟನೆ ಜರುಗಿತು.

       ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್, ಕಾರ್ಮಿಕರ ಕಲ್ಯಾಣ ನಿಧಿಗೆ ಸೇರಿದ ಹಣವನ್ನು ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು.

        ರವಿಕುಮಾರ್ ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವಲ್ಲಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ತಡಬಡಾಯಿಸಿದರು. ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಹಣವನ್ನು ವಾಪಸು ಪಡೆಯಲು ಇಲಾಖೆಯಿಂದ ಮೇಲ್ಮನವಿ ದಾಖಲಿಸಿದ್ದು, ಪ್ರಕರಣ ವಿಚಾರಣಾ ಹಂತದಲ್ಲಿದೆ ಎಂದರು. ಇದಕ್ಕೆ ರವಿಕುಮಾರ್, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುತ್ತೀರಾ ಎಂದಾಗ, ಸಚಿವರು ಪರಿಶೀಲಿಸುತ್ತೇನೆ ಎಂಬ ಹಾರಿಕೆಯ ಉತ್ತರ ನೀಡಿದರು.

       ಸಚಿವರ ಅಸಮರ್ಪಕ ಉತ್ತರಕ್ಕೆ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಆಕ್ಷೇಪಿಸಿ, ನೋಟಿಸ್ ಕೊಟ್ಟಾಗಲೇ ಸರ್ಕಾರ ಉತ್ತರಿಸಬೇಕಿತ್ತು. ಸಚಿವರು ಅಧಿಕಾರಿಗಳು ನೀಡಿದ ಚೀಟಿಯ ಆಧಾರದ ಮೇಲೆ ಉತ್ತರ ಕೊಟ್ಟು, ಸದನಕ್ಕೆ ತಪ್ಪು ಮಾಹಿತಿ ನೀಡುತ್ತಾರೆ. ಸರಿಯಾಗಿ ಉತ್ತರ ನೀಡದೇ ಇರುವುದರಿಂದ ಪ್ರಶ್ನೋತ್ತರ ಕಲಾಪ ತಡವಾಗುತ್ತಿದೆ ಎಂದರು.

       ಆಗ ಸಚಿವರು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಕ್ರಮ ಜರುಗಿಸುವುದಾಗಿ ಹೇಳಿದರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಧ್ಯಪ್ರವೇಶಿಸಿ, ಸಚಿವರು ಕಲಾಪದಲ್ಲಿ ಪಾಲ್ಗೊಳ್ಳುವ ಮೊದಲು ಪೂರ್ವ ತಯಾರಿ ಮಾಡಿಕೊಂಡು ಬರಬೇಕು. ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಬೇಕು ಎಂದು ಪಾಠ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link