ಸ್ಪೀಕರ್ ಅಧಿಕಾರ ಮೊಟುಕಾಗಬಾರದು, ಅನರ್ಹರು ಹತ್ತು ವರ್ಷ ಚನಾವಣೆಗೆ ಸ್ಪರ್ಧಿಸಬಾರದು

ಬೆಂಗಳೂರು

      ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಅಧಿಕಾರ ವಿಧಾನಸಭೆಯ ಅಧ್ಯಕ್ಷರಿಗೇ ಇರಬೇಕು. ಅನರ್ಹಗೊಂಡ ಶಾಸಕರು ಹತ್ತು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಹಾಗೂ ಯಾವುದೇ ರಾಜಕೀಯ ಅಧಿಕಾರ ಅನುಭವಿಸದಂತೆ ನೋಡಿಕೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

     ಪಕ್ಷಾಂತರ ನಿಷೇಧ ಕಾಯಿದೆಯ ನಿಯಮಗಳ ಮರುಪರಿಶೀಲನೆಗೆ ಅಭಿಪ್ರಾಯ ಸಂಗ್ರಹಿಸಲು ವಿಧಾನಸಭೆಯ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕರೆದಿದ್ದ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಬೇರುಗಳಿಗೆ ಪಕ್ಷಾಂತರ ಎಂಬುದು ಮಾರಕ. ಆ ಬೇರುಗಳು ಗಟ್ಟಿಯಾಗಿ ಇರಬೇಕಾದರೆ ಪಕ್ಷಾಂತರವೆಂಬ ಪಿಡುಗು ನಿರ್ಮೂಲನೆ ಆಗಬೇಕು ಎಂದು ಹೇಳಿದರು.

     ಪಕ್ಷಾಂತರ ನಿಷೇಧ ಕಾಯಿದೆ ಅನ್ವಯ ಪಕ್ಷಾಂತರ ಮಾಡುವ ಶಾಸಕರನ್ನು ಅನರ್ಹಗೊಳಿಸಿ ಸಭಾಧ್ಯಕ್ಷರು ನೀಡುವ ಆದೇಶದ ಬಗ್ಗೆ ಅಪಸ್ವರ ಎತ್ತುವುದು ಸರಿಯಲ್ಲ. ಅದು ಸಭಾಧ್ಯಕ್ಷರಿಗೆ ಇರುವ ಅಧಿಕಾರದ ಮೇಲೆ ಗದಾ ಪ್ರಹಾರ ಮಾಡಿದಂತೆ ಎಂದು ತಿಳಿಸಿದರು. ಸಭಾಧ್ಯಕ್ಷರಿಂದ ಈ ಅಧಿಕಾರ ಕಸಿದು ಬೇರೆ ಸಂಸ್ಥೆ ಅಥವಾ ವ್ಯಕ್ತಿಗೆ ನೀಡಿದರೆ ನ್ಯಾಯ ಸಿಗುವ ವಿಶ್ವಾಸ ಇಲ್ಲ ಎಂದು ಹೇಳಿದ ಸಿದ್ದರಾಮಯ್ಯ ಅವರು, ಇದು ಸಂವಿಧಾನ ಬಾಹಿರವೂ ಆಗುತ್ತದೆ ಎಂದು ತಿಳಿಸಿದರು.

     ಆದರೆ ಅನರ್ಹತೆಗೊಳಿಸುವಂತೆ ಯಾರಾದರೂ ಅರ್ಜಿ ಸಲ್ಲಿಸಿದರೆ ಆ ಅರ್ಜಿಯನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸುವಂತೆ ನೋಡಿ ಕೊಳ್ಳಬೇಕು. ಎರಡು, ಮೂರು ತಿಂಗಳೊಳಗೆ ಅರ್ಜಿ ವಿಲೇವಾರಿ ಆಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕಾಗಿದೆ ಎಂದರು.

     ಪಕ್ಷಾಂತರದ ಮೂಲಕ ಚುನಾಯಿತ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ಮತದಾರರಿಗೆ ಮಾಡುವ ದ್ರೋಹ. ಹೀಗಾಗಿ ಅನರ್ಹರಾದವರು ಹತ್ತು ವರ್ಷ, ಅಂದರೆ ಎರಡು ಅವಧಿಗೆ ಚುನಾವಣೆಗೆ ಸ್ಪರ್ಧೆ ಮಾಡದಂತೆ, ಜೊತೆಗೆ ಯಾವುದೇ ರೀತಿಯಲ್ಲೂ ರಾಜಕೀಯ ಅಧಿಕಾರ ಅನುಭವಿಸದಂತೆ ನೋಡಿಕೊಳ್ಳಬೇಕಿದೆ.

      ಅನರ್ಹರಾದವರು ಮರು ಚುನಾವಣೆಯಲ್ಲಿ ಗೆದ್ದು ಮಂತ್ರಿಗಳಾದರೆ ನೈತಿಕತೆ ಎಲ್ಲಿ ಉಳಿಯುತ್ತದೆ. ಹತ್ತು ವರ್ಷಗಳ ಕಾಲ ಅಂಥವರು ಸದನವನ್ನೇ ಪ್ರವೇಶ ಮಾಡಬಾರದು. ನಿಯಮಾವಳಗಳಲ್ಲಿ ಬದಲಾವಣೆ ತರುವುದರ ಜೊತೆಗೆ ಚುನಾವಣಾ ಪ್ರಕ್ರಿಯೆಗಳಲ್ಲಿಯೂ ಸುಧಾರಣೆ ತರಬೇಕಿದೆ. ಇಲ್ಲದಿದ್ದರೆ ಪಕ್ಷಾಂತರದ ಪಿಡುಗನ್ನು ನಿರ್ಮೂಲನೆ ಮಾಡುವುದು ಅಸಾಧ್ಯ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap