ಹುಳಿಯಾರು
ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಹುಳಿಯಾರನ್ನು ಏಕೆ ತಾವು ತಾಲೂಕು ಮಾಡಲಿಲ್ಲ, ತಾಲೂಕು ಮಾಡಿರೆಂದು ಕೇಳದ ಹಾಸನ ಜಿಲ್ಲೆಯ ಶಾಂತಿಗ್ರಾಮವನ್ನು ತಾವು ತಾಲೂಕು ಮಾಡಿದ್ದೀರಿ. ಆದರೆ ಮೂರ್ನಲ್ಕು ದಶಕಗಳಿಂದ ಹೋರಾಟ ಮಾಡುತ್ತಿರುವ ಹುಳಿಯಾರನ್ನು ಏಕೆ ಕಡೆಗಣಿಸಿದ್ದೀರಿ ಎಂಬುದು ಹುಳಿಯಾರು ಜನರ ಪ್ರಶ್ನೆಯಾಗಿದೆ.
ಹೌದು, ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1902 ರವರೆವಿಗೂ ತಾಲ್ಲೂಕು ಕೇಂದ್ರವಾಗಿದ್ದ ಹುಳಿಯಾರು ನಂತರದ ದಿನಗಳಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಸೇರ್ಪಡೆಗೊಂಡು ಹೋಬಳಿ ಕೇಂದ್ರವಾಯಿತು. ಅಲ್ಲಿಂದ ಇತ್ತ ತಾಲೂಕು ಕೇಂದ್ರವನ್ನೇ ಮೀರಿಸುವ ಮಟ್ಟಿಗೆ ವ್ಯಾಪಾರವಹಿವಾಟಿನಲ್ಲಿ ಹುಳಿಯಾರು ಬೆಳೆದು ನಿಂತಿತು. ಹಾಗಾಗಿ ಹುಳಿಯಾರಿನಲ್ಲಿ ಪ್ರತ್ಯೇಕ ತಾಲೂಕಿನ ಕೂಗು ಆರಂಭವಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಚಲಪತಶೆಟ್ಟಿ ಅವರ ನೇತೃತ್ವದಲ್ಲಿ ಹೊರಾಟ ಸಮಿತಿ ರಚಿಸಿ ಅನೇಕ ಹೋರಾಟಗಳನ್ನು ಮಾಡಲಾಯಿತು.
ಹೊಸ ತಾಲೂಕು ರಚನೆಗಾಗಿ ರಚನೆಗೊಂಡ ವಾಸುದೇವರಾವ್, ಹುಂಡೇಕರ್, ಗದ್ದಿಗೌಡರ್, ಎಂ.ಬಿ.ಪ್ರಕಾಶ್ ಹೀಗೆ 4 ಆಯೋಗಗಳು ಮುಂದೆ ಅಹವಾಲು ಸಲ್ಲಿಸಲಾಯಿತು. ಹುಳಿಯಾರು ತಾಲ್ಲೂಕು ಆಗುವುದಕ್ಕೆ ಸೂಕ್ತ ಎಂದು ಅಯೋಗಗಳೂ ವರದಿ ಸಹ ಮಾಡಿದ್ದರು. ಅಲ್ಲಿಂದಿತ್ತ ನೂರಕ್ಕೂ ಹೆಚ್ಚು ಹೊಸ ತಾಲೂಕುಗಳು ರಚನೆಯಾದರೂ ಹುಳಿಯಾರನ್ನು ಕೈ ಬಿಡಲಾಯಿತು. ಆದರೂ ಇಲ್ಲಿನ ಜನ ಛಲ ಬಿಡದ ತ್ರಿವಿಕ್ರಮನಂತೆ ಅನೇಕ ಧರಣಿ, ಪ್ರತಿಭಟನೆ, ಹೋರಾಟ ನಡೆಸುತ್ತಾ ಬಂದಿದ್ದಾರೆ.
ಎರಡನೇ ಬಾರಿ ಮುಖ್ಯಮಂತ್ರಿಯಾಗಿ ತಾವು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಹೊಸ ತಾಲೂಕು ಘೋಷಣೆಯಲ್ಲಿ ಹುಳಿಯಾರೂ ಸಹ ಸೇರುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ತಾವು ಇಲ್ಲಿನ ಜನ ನಿರೀಕ್ಷೆಗೆ ಹುಸಿ ಮಾಡಿಬಿಟ್ಟಿರಿ. ಇದು ಸಾಲದೆಂಬಂತೆ ಹುಳಿಯಾರನ್ನು ಎಂದಿನಂತೆ ನಿರ್ಲಕ್ಷ್ಯಿಸಿ ಮತ್ತೆ 5 ಹೊಸ ತಾಲೂಕು ಘೋಷಿಸಿದ್ದಿರಿ. ಈ ಸಂದರ್ಭದಲ್ಲಿ ತಾಲೂಕು ಮಾಡಿರೆಂದು ಕೇಳದ, ಇದಕ್ಕಾಗಿ ಜನ ಬೀದಿಗಿಳಿಯದ ಅದೂ ಜಿಲ್ಲಾ ಕೇಂದ್ರಕ್ಕೆ ಹತ್ತಿರದಲ್ಲೇ ಇರುವ ಶಾಂತಿಗ್ರಾಮವನ್ನು ತಾಲೂಕು ಮಾಡಿ ಹುಳಿಯಾರು ಜನರ ಆಕ್ರೋಶಕ್ಕೆ ಕಾರಣರಾಗಿದ್ದೀರಿ.
ತಾವು ಈಗ ಘೋಷಣೆ ಮಾಡಿರುವ ಶಾಂತಿಗ್ರಾಮಕ್ಕೆ ಓಲಿಸಿದರೆ ಜನಸಂಖ್ಯೆ ದೃಷ್ಠಿಯಿಂದಲೂ, ಸರ್ಕಾರಿ ಕಛೇರಿಗಳು, ಶಾಲಾಕಾಲೇಜುಗಳು, ರಾಷ್ಟ್ರೀಯ ಹೆದ್ದಾರಿಗಳ ದೃಷ್ಟಿಯಿಂದಲೂ ಹುಳಿಯಾರು ಅರ್ಹತೆಯಲ್ಲಿ ಮುಂದಿದೆ. ಅಷ್ಟೆಯಲ್ಲದೆ ಶಾಂತಿ ಗ್ರಾಮ ಜಿಲ್ಲಾ ಕೇಂದ್ರಕ್ಕೆ ಹತ್ತಿರದಲ್ಲಿದ್ದರೆ ಹುಳಿಯಾರು ಜಿಲ್ಲಾ ಕೇಂದ್ರಕ್ಕೆ ಎಪ್ಪತ್ತೆಂಭತ್ತು ಕಿ.ಮೀ.ದೂರವಿದೆ. ಅಲ್ಲದೆ ಇಲ್ಲಿದ ಅನೇಕ ಗ್ರಾಮಗಳು ತಾಲೂಕು ಕೇಂದ್ರಕ್ಕೆ 30 ಕಿ.ಮೀ ದೂರದಲ್ಲಿವೆ. ಶಾಂತಿಗ್ರಾಮಕ್ಕಿಂತಲೂ ಅರ್ಹವಾಗಿರುವ ಹುಳಿಯಾರನ್ನು ತಾವು ತಾಲೂಕು ಮಾಡಿದ್ದರೆ ಈ ಭಾಗದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಿದ್ದಿರಿ.
ಈಗಲೂ ಕಾಲ ಮಿಂಚಿಲ್ಲ. ತಾವು ತಮ್ಮ ಇಚ್ಚಾಶಕ್ತಿ ಪ್ರದರ್ಶಿಸಿದರೆ ಖಂಡಿತ ಹುಳಿಯಾರು ತಾಲೂಕು ಆಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಹುಳಿಯಾರು ಹೋಬಳಿ ಸೇರಿದಂತೆ ಹುಳಿಯಾರಿಗೆ ಹೊಂದಿಕೊಂಡಿರುವ ಚಿತ್ರದುರ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಗಡಿ ಗ್ರಾಮ ಪಂಚಾಯ್ತಿಗಳು ಹಾಗೂ ಶಿರಾ ತಾಲೂಕಿನ ಬುಕ್ಕಾಪಟ್ಟಣ ಮತ್ತು ಕಂದಿಕೆರೆ, ಹಂದನಕೆರೆ ಹೋಬಳಿಯ ಹೋಬಳಿಯ ಗಡಿ ಗ್ರಾಮ ಪಂಚಾಯ್ತಿಗಳನ್ನು ಸೇರಿಸಿಕೊಂಡು ಹುಳಿಯಾರನ್ನು ತಾಲೂಕು ಮಾಡಬಹುದಾಗಿದೆ. ಮೊದಲೇ ಬರಪೀಡಿತ ಪ್ರದೇಶವಾಗಿರುವ ಈ ಭಾಗದ ಅಭಿವೃದ್ಧಿ ದೃಷ್ಠಿಯಿಂದ ಹುಳಿಯಾರು ತಾಲೂಕು ಮಾಡಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
