ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ನೀರು-ಮೇವಿಗೆ ಹಾಹಾಕಾರ

ತುಮಕೂರು

        ಬಿರುಬಿಸಿಲು ಜನತೆಯನ್ನು ಹೈರಾಣಾಗಿಸುತ್ತಿದೆ. ಕೆರೆಕಟ್ಟೆಗಳು ಖಾಲಿಯಾಗಿವೆ. ಅಂತರ್ಜಲ ಬತ್ತಿ ಹೋಗಿದೆ. ಬರದ ಛಾಯೆ ಎಲ್ಲೆಲ್ಲೂ ತಾಂಡವವಾಡುತ್ತಿದೆ. ಬಿಸಿಲಿನ ತೀವ್ರತೆ ಹೆಚ್ಚಾದ ಈ ಸಮಯದಲ್ಲೇ ಲೋಕಸಭಾ ಚುನಾವಣೆಗಳು ಎದುರಾಗಿವೆ. ಚುನಾವಣೆಗೂ ಮುನ್ನ ಬರದ ಸಿದ್ಧತೆಗಳ ಬಗ್ಗೆ ಚರ್ಚೆಗಳು ನಡೆದಿದ್ದವು. ಜಿಲ್ಲಾ ಪಂಚಾಯತಿಯಿಂದ ಹಿಡಿದು ಸ್ಥಳೀಯ ಆಡಳಿತದವರೆಗೆ ಎಲ್ಲ ಕಡೆಯೂ ಬರ ನಿರ್ವಹಣೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಾ ಬರಲಾಗಿತ್ತು.

        ಆದರೆ ಚುನಾವಣೆ ಘೋಷಣೆಯಾದ ಕೂಡಲೇ ಬರಗಾಲದ ಸಮಸ್ಯೆಗಳ ಬಗ್ಗೆ ಆಲಿಸುವವರೇ ಇಲ್ಲದಂತಾಗಿದೆ. ಜಿಲ್ಲೆಯ ಬಹುತೇಕ ಕಡೆ ನೀರಿನ ಸಮಸ್ಯೆ ಬಿಗಡಾಯಿಸಿದೆ. ಜನಜನಾನುವಾರುಗಳ ನಿರ್ವಹಣೆ – ಕುಡಿಯುವ ನೀರಿನ ಸಮಸ್ಯೆಗೆ ಚುನಾವಣೆ ಅಡ್ಡಿಯಾಗದು. ಆದರೂ ಎಲ್ಲಿ ಲೋಪವಾಗುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.

       ಯಾವುದೇ ಕಚೇರಿಗಳಿಗೆ ಹೋದರೂ ಚುನಾವಣೆಯ ಕಾರ್ಯದ ನೆಪ ಹೇಳಲಾಗುತ್ತದೆ. ಕಚೇರಿಗಳಿಗೆ ಹೋದವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಡಿ ಶಾಪ ಹಾಕಿ ವಾಪಸ್ಸಾಗುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಪ್ರತಿಭಟನೆಗಳು ನಡೆದಿವೆ. ಜಾನುವಾರುಗಳಿಗೆ ಮೇವು ವಿತರಿಸುವಂತೆ ಆಗ್ರಹಿಸಲಾಗಿದೆ. ಬರಗಾಲದ ಈ ಸಂಕಷ್ಟದಲ್ಲಿ ಇಂತಹ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಆದ್ಯ ಕರ್ತವ್ಯವಾಗಬೇಕು.

ಚುನಾವಣೆಯ ನೆಪ ಹೇಳಿ ಕುಳಿತರೆ ಬರಗಾಲದ ದವಡೆಗೆ ಸಿಲುಕಿರುವ ಜನರನ್ನು ರಕ್ಷಿಸುವವರು ಯಾರು?

     ನೀರಿನ ಸಮಸ್ಯೆ ಒಂದು ಊರಿನದ್ದಲ್ಲ. ಜಿಲ್ಲೆಯ ಎಲ್ಲ ಕಡೆಯೂ ಈ ಸಮಸ್ಯೆ ಇದ್ದೇ ಇದೆ. ಶಿರಾ ತಾಲ್ಲೂಕು ಕರೇಕ್ಯಾತನಹಳ್ಳಿಯಲ್ಲಿ ಮಾ.19 ರಂದು ಅಲ್ಲಿನ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದರು. 120 ಕುಟುಂಬಗಳ್ಳುಳ್ಳ ಆ ಗ್ರಾಮದಲ್ಲಿ ಕೊಳವೆ ಬಾವಿ ಬತ್ತಿ ಹೋಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಕಳೆದ ಎರಡು ತಿಂಗಳಿನಿಂದ ಈ ಸಮಸ್ಯೆ ಬಿಗಡಾಯಿಸುತ್ತಿದ್ದು, ಗ್ರಾಮಸ್ಥರ ಮನವಿಯ ಮೇರೆಗೆ ಖಾಸಗಿ ವ್ಯಕ್ತಿಯೊಬ್ಬರು ತನ್ನ ಜಮೀನಿನಿಂದ ನೀರು ಸರಬರಾಜು ಮಾಡುತ್ತಿದ್ದಾರೆ.

ಪಾವಗಡ ತಾಲ್ಲೂಕಿನ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಬವಣೆ ಮಿತಿಮೀರಿದೆ. ವೈ.ಎನ್.ಹೊಸಕೋಟೆ ಗ್ರಾಮ ಪಂಚಾಯತಿಗೆ ಅಲ್ಲಿನ ಸುತ್ತಮುತ್ತಲ ಸಾರ್ವಜನಿಕರು ನೀರಿಗಾಗಿ ಪ್ರತಿಭಟಿಸಿ ಪಂಚಾಯತಿಗೆ ಮುತ್ತಿಗೆ ಹಾಕಿದ್ದರು. ಆದರೆ ಅಲ್ಲಿ ಮನವಿ ಸ್ವೀಕರಿಸುವವರೇ ಇರಲಿಲ್ಲ ಎಂಬುದು ಆರೋಪ. ಸಿ.ಕೆ.ಪುರ ಗ್ರಾ.ಪಂ.ನ ಚನ್ನಸಾಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಅಲ್ಲಿನ ಪಂಚಾಯತಿ ಗೇಟ್‍ಗೆ ಗ್ರಾಮಸ್ಥರು ಮುಳ್ಳಿನ ಗಿಡ ಹಾಕಿ ಪ್ರತಿಭಟಿಸಿದ್ದಾರೆ.

       ತುಮಕೂರು ತಾಲ್ಲೂಕು ಕೋರಾ ಹೋಬಳಿ ವ್ಯಾಪ್ತಿಯ ಹಂಚಿಹಳ್ಳಿ, ಬ್ರಹ್ಮಸಂದ್ರ, ಮುದ್ದೇನಹಳ್ಳಿ ಮೊದಲಾದ ಗ್ರಾಮಗಳಲ್ಲಿ ನೀರಿನ ತೊಂದರೆ ಉಂಟಾದ ಪರಿಣಾಮವಾಗಿ ಟ್ಯಾಂಕರ್‍ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಬತ್ತಿದ ಕಾರಣ ಕುಡಿಯುವ ನೀರಿಗೆ ಸರಬರಾಜು ಮಾಡುತ್ತಿದ್ದ ಕೊಳವೆ ಬಾವಿ ಇಲ್ಲಿ ಸ್ಥಗಿತಗೊಂಡಿದೆ.

      ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿ ಕೆಂಕೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿಗೋಸ್ಕರ ಪ್ರತಿಭಟನೆಗಳು ಆರಂಭವಾಗಿವೆ. ಕೆಂಕೆರೆ ಗೊಲ್ಲರಹಟ್ಟಿ ಗ್ರಾಮಸ್ಥರು ಪಂಚಾಯತಿ ಮುಂದೆ ಧರಣಿ ಕೂತಿದ್ದರು. ಇದಾದ ನಂತರ ಸದರಿ ಗ್ರಾಮಕ್ಕೆ ಬೋರ್‍ವೆಲ್ ಕೊರೆಸುವ ಪ್ರಯತ್ನ ಮಾಡಲಾಯಿತಾದರೂ ನೀರು ಸಿಗಲಿಲ್ಲ. ಈ ಹಿಂದೆ ಇದ್ದ ಕೊಳವೆ ಬಾವಿಯನ್ನೇ ರೀಬೋರ್ ಮಾಡಿಸುವ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ನೀರಿಗೆ ಹಾಹಾಕಾರ ಹೆಚ್ಚಿರುವ ಈ ಸಂದರ್ಭದಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪೀಠೋಪಕರಣ ಖರೀದಿ ಮಾಡುವ ಅಗತ್ಯವಿತ್ತೆ ಎಂದು ಅಲ್ಲಿನ ಗ್ರಾಮಸ್ಥರು ಪಂಚಾಯತಿ ವಿರುದ್ಧ ಕಿಡಿಕಾರಿದರು.

       ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯಲ್ಲಿ ಮೇವು ವಿತರಣೆಯಲ್ಲಿ ಕಳಪೆ ಆಗುತ್ತಿದೆ ಎಂದು ಅಲ್ಲಿನ ರೈತರು ಪ್ರತಿಭಟಿಸಿದ್ದರು. ನಂತರ ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಒಂದು ಕಡೆ ನೀರಿನ ಸಮಸ್ಯೆ. ಮತ್ತೊಂದು ಕಡೆ ಜಾನುವಾರುಗಳಿಗೆ ಮೇವಿನ ಸಮಸ್ಯೆ. ಯಾವಾಗಲೋ ಬಂದು ಮತ್ಯಾವಗಲೋ ಹೋಗುವ ವಿದ್ಯುತ್ ಅಸಮರ್ಪಕತೆ ಮತ್ತೊಂದು ಸಮಸ್ಯೆ. ಬೋರ್‍ವೆಲ್‍ಗಳಲ್ಲಿ ನೀರು ಇರುವವರು, ತೋಟಗಳಿಗೆ, ಬೆಳೆಗಳಿಗೆ ನೀರು ಹಾಯಿಸಿಕೊಳ್ಳುವವರು, ಕುಡಿಯುವ ನೀರಿಗೆ ಆಶ್ರಯಿಸಿರುವವರು ವಿದ್ಯುತ್ ಬರುವ ಸಮಯವನ್ನೇ ಕಾದು ಕುಳಿತಿರಬೇಕಾದ ಪರಿಸ್ಥಿತಿ.

        ಸತತವಾಗಿ ಎದುರಾಗುತ್ತಿರುವ ಬರಗಾಲ, ಈ ನಡುವೆ ದಿನೆ ದಿನೆ ಏರಿಕೆಯಾಗುತ್ತಿರುವ ಬಿಸಿಲಿನ ತಾಪ ಇದೆಲ್ಲದರಿಂದ ತತ್ತರಿಸಿ ಹೋಗಿರುವ ಗ್ರಾಮೀಣ ಸಮುದಾಯದ ರೈತಾಪಿ ವರ್ಗ ಯಾವಾಗ ಮಳೆ ಬರುವುದೋ ಎಂಬ ನಿರೀಕ್ಷೆಯಲ್ಲಿದ್ದಾರೆ. ಮಾರ್ಚ್ 26 ರಿಂದ ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಏರಲಿದೆ. ಜನಪ್ರತಿನಿಧಿಗಳು ಹಳ್ಳಿಗಳತ್ತ ಪ್ರಯಾಣ ಬೆಳೆಸಲೇ ಬೇಕಾಗಿದೆ. ಬರದ ಸಂಕಷ್ಟ ಏನೆಂಬುದು ತಿಳಿಯಲು ಈಗ ಕಾಲ ಸನ್ನಿಹಿತ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap