ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ

ಗುಬ್ಬಿ

         ಗ್ರಾಮೀಣ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಗ್ರಾಮಾಭಿವೃದ್ಧಿಯ ಪರಿಕಲ್ಪನೆಯನ್ನು ರೂಢಿಸಿಕೊಂಡು ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರ ಗ್ರಾಮಗಳನ್ನಾಗಿ ಪರಿವರ್ತಿಸುವತ್ತ ಪ್ರಾಮಾಣಿಕ ಪ್ರಯತ್ನಮಾಡುವಂತೆ ಜಿಲ್ಲಾ ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಿದ್ಧಲಿಂಗಪ್ಪ ಕರೆ ನೀಡಿದರು.

       ತಾಲ್ಲೂಕಿನ ಕಡಬ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಹೊಸಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಸ್ತೆಯಲ್ಲಿರುವ ಕಸಕಡ್ಡಿ ಮುಳ್ಳುಗಳನ್ನು ತೆಗೆದು ಹಾಕುವುದು ಒಳ್ಳೆಯ ಕೆಲಸ. ಆದರೆ ರಸ್ತೆಗೆ ನಾವು ಕಸಕಡ್ಡಿಮುಳ್ಳುಗಳನ್ನು ಹಾಕದಿರುವುದು ಇನ್ನೂ ಒಳ್ಳೆಯ ಕೆಲಸ. ಅದೇ ನಮ್ಮ ನೈಜವಾದ ಸಮಾಜಸೇವೆ ಎಂದು ತಿಳಿಸಿದರು.

        ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್.ಶಿಬಿರಗಳು ಜೀವನ ಕೌಶಲ್ಯಗಳನ್ನು ಕಲಿಸುತ್ತದೆ. ಅದನ್ನು ಹಳ್ಳಿಯಲ್ಲಿ ಗಮನಿಸಬಹುದು. ಬುದ್ಧ ಬಸವ ಗಾಂಧೀಜಿಯವರ ಹಾದಿಯಲ್ಲಿ ನಡೆದರೆ ಕಲ್ಯಾಣ ರಾಷ್ಟ್ರ ಕಟ್ಟುವುದರಲ್ಲಿ ಸಂಶಯವಿಲ್ಲ. ಆ ದಿಶೆಯಲ್ಲಿ ನಾವೆಲ್ಲ ಮುಂದೆ ಸಾಗಬೇಕು ಎಂದು ತಿಳಿಸಿದ ಅವರು, ವಿದ್ಯಾರ್ಥಿಗಳು ಸಾಮಾಜಿಕ ಮೌಲ್ಯಗಳನ್ನು ಶಿಬಿರದ ಮೂಲಕ ಕಲಿಯುವುದರ ಜೊತೆಗೆ ಗ್ರಾಮ ನೈರ್ಮಲ್ಯತೆ ಮತ್ತು ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.

        ಪ್ರಾಚಾರ್ಯ ಹೆಚ್.ಕೆ.ನರಸಿಂಹಮೂರ್ತಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನಗೊಳಿಸುವುದರ ಜೊತೆಗೆ ಸಹ ಬಾಳ್ವೆ, ಸಂಘಟನೆ, ಶ್ರಮದಾನ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಕಲಿಸುತ್ತವೆ ಎಂದು ತಿಳಿಸಿದರು

      ಪ್ರಾಚಾರ್ಯ ಪಿ.ರಮೇಶ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಮಾಜ ಸೇವಾ ಮನೋಭಾವ ಅತ್ಯಗತ್ಯವಿದ್ದು ಪ್ರತಿಯೊಬ್ಬರೂ ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ತಿಳಿಸಿದರು.
ಪ್ರಾಚಾರ್ಯ ವಿ.ಎನ್.ರಾಮಣ್ಣ ಮಾತನಾಡಿ ತ್ಯಾಗ ಮತ್ತು ಪ್ರಾಮಾಣಿಕತೆಗಳು ಬದುಕಿನ ಆಸ್ತಿಯಾಗಬೇಕೆಂದ ಅವರು, ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಸಹಬಾಳ್ವೆ ಮತ್ತು ಶ್ರಮದಾನದಂತಹ ಮಹತ್ವದ ಚಿಂತನೆಗಳನ್ನು ಕಲಿಸುತ್ತವೆ.

         ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವ ಮೂಲಕ ಆದರ್ಶ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತೆ ಕರೆನೀಡಿದರು.

       ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಸ್.ಸತೀಶ್ ಮಾತನಾಡಿ ಶಿಬಿರದ ಮೂಲಕ ವಿದ್ಯಾರ್ಥಿಗಳು ಗ್ರಾಮೀಣ ಭಾರತದ ಸಮಗ್ರ ಅಂಶಗಳನ್ನು ಸೂಕ್ಷ್ಮವಾಗಿ ಅರಿತು ಮುನ್ನಡೆಯುವುದು ತುರ್ತು ಅಗತ್ಯವಾಗಿದೆಯೆಂದ ಅವರು ವಿದ್ಯಾರ್ಥಿ ಜೀವನ ಅಮೂಲ್ಯವಾದುದಾಗಿದ್ದು ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವತ್ತ ಮುಂದಾಗಬೇಕಿದೆ ಎಂದು ತಿಳಿಸಿದರು.

        ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟೇಶ್ ಮತ್ತು ಗ್ರಾಮದ ಹಿರಿಯರಾದ ಲಕ್ಕಣ್ಣ, ರಾಜಣ್ಣ ಮೊದಲಾದ ಹಿರಿಯರು ಶಿಬಿರಕ್ಕೆ ಸಕಲ ರೀತಿಯಲ್ಲಿ ನೆರವಾಗುವುದು ಮಾತ್ರವಲ್ಲ ಬೇರೆ ಊರಿನ ಹಿರಿಯರಿಗೆ ಮಾದರಿಯಾಗಿ ಸೇವೆ ಸಲ್ಲಿಸಿದರು. ಜನಪ್ರಿಯ ರಂಗಸಂಘಟಕ ಮೆಳೆಕಲ್ಲಹಳ್ಳಿ ರಮೇಶ್ ರವರು ತಾವೇ ರಚಿಸಿ ನಿರ್ದೇಶಿಸಿದ ನಾಟಕಗಳನ್ನು ಶಿಬಿರದಲ್ಲಿ ಕಲಿಸಿ ಪ್ರಯೋಗ ಮಾಡಿ ಗ್ರಾಮಸ್ಥರ ಮನಗೆದ್ದರು.

         ಇದೆ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಲಾವಿದ ಶಿಕ್ಷಕ ಬಿ.ಸಿ.ಶಿವಣ್ಣನವರ ಪೌರಾಣಿಕ ರಂಗಗೀತೆಗಳು ಸಭಿಕರನ್ನು ಬೇರೆ ಲೋಕಕ್ಕೆ ಕರೆದೊಯ್ದವು. ಶಿಬಿರಾಧಿಕಾರಿ ಎಲ್.ಎಚ್.ಮಲ್ಲಿಕಾರ್ಜುನಯ್ಯ ಶಿಬಿರದ ಸಿಂಹಾವಲೋಕನ ಮಾಡಿದರು. ಸಂಚಾಲಕಿ ಅನಸೂಯಕುಮಾರಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಉಪನ್ಯಾಸಕರು ಕಾ.ಅ.ಸ.ಸದಸ್ಯರು ಗ್ರಾ.ಪಂ.ಸದಸ್ಯರು ಪೋಷಕರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಪಿ.ಕೆ.ನಂದೀಶ್ ಸ್ವಾಗತಿಸಿದರು. ಎಚ್.ಆರ್.ಪಾಲಾಕ್ಷ ನಿರೂಪಿಸಿದರು.ಕೆ.ಶಿವಪ್ಪ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link