ಹಂದನಕೆರೆ ಸಿದ್ದೇಶ್ವರ ಸನ್ನಿಧಿಯಲ್ಲಿ ಡಿಕೆಶಿ ವಿಶೇಷ ಪೂಜೆ

ಹುಳಿಯಾರು

       ಹುಳಿಯಾರು ಸಮೀಪದ ಹಂದನಕೆರೆಯ ಇತಿಹಾಸ ಪ್ರಸಿದ್ಧ ಶ್ರೀ ಗುರು ಗಿರಿಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿ ಮಳೆಬೆಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

       ಸರ್ಕಾರಿ ಭದ್ರತೆ ಇಲ್ಲದೆ ಖಾಸಗಿ ಕಾರಿನಲ್ಲಿ ತಮ್ಮ ಆಪ್ತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಬರೋಬ್ಬರಿ 2 ಗಂಟೆಗಳ ಕಾಲ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಕಾಲ ಕಳೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಮುಂದಿನ ಬಾರಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳೆಲ್ಲ ತುಂಬಿ ಉತ್ತಮ ಬೆಳೆಯಾಗಿ ರೈತನ ಬಾಳು ಹಸನಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

         ಆದರೆ ಡಿ.ಕೆ.ಶಿವಕುಮಾರ್ ಅವರು ಐಟಿ ಪ್ರಕರಣ ಎದುರಿಸುತ್ತಿರುವ ಜೊತೆಗೆ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಅವರು ಪೂಜೆ ಸಲ್ಲಿಸಿರಬಹುದು, ಅದಕ್ಕಾಗಿಯೇ ಸರ್ಕಾರಿ ಭದ್ರತೆ ಇಲ್ಲದೆ ಖಾಸಗಿ ವಾಹನದಲ್ಲಿ ಬಂದಿದ್ದಾರೆಂದು ಹೇಳಲಾಗುತ್ತಿದೆ.

         ಶ್ರೀ ಸಿದ್ದೇಶ್ವರಸ್ವಾಮಿಗಳು 2000 ವರ್ಷಗಳ ಹಿಂದೆ ಪವಾಡ ಪುರುಷರಾಗಿದ್ದರು. ಅನೇಕ ಪವಾಡಗಳನ್ನು ಮಾಡಿ ಪ್ರಸಿದ್ಧರಾಗಿದ್ದ ಇವರು ಈ ಸ್ಥಳದಲ್ಲಿ ಐಕ್ಯರಾದರು. ಈ ದೇವಾಲಯಕ್ಕೆ ಸಿದ್ದರ ಮಠ ಎಂದು ಕರೆಯುತ್ತಿದ್ದು ಭಕ್ತರ ಪ್ರಶ್ನೆಗಳಿಗೆ ಸಿದ್ದಪ್ಪದೇವರ ಪೀಠಕ್ಕೆ ಒಂದು ಬಳಪ ಕಟ್ಟಲಾಗುತ್ತದೆ. ದೇವರನ್ನು ಹಿಡಿದಿರುವ ಅರ್ಚಕರು ಭಕ್ತರ ಕೋರಿಕೆಗೆ ಉತ್ತರವನ್ನು ಸ್ಲೇಟಿನ ಮೇಲೆ ಮೋಡಿ ಅಕ್ಷರದಲ್ಲಿ ಬರೆಯುತ್ತಾರೆ.

          ಸಿದ್ದಪ್ಪ ದೇವರು ಬರೆದ ಬರಹದ ಆಧಾರದ ಮೇಲೆ ಭಕ್ತರ ಭವಿಷ್ಯ ನಿರ್ಧಾರವಾಗುತ್ತದೆ ಎಂಬ ನಂಬಿಕೆ ಇದೆ. ಹೇಳಿಕೆಗಳು ಸತ್ಯವಾಗಿರುವ ನಿದರ್ಶನಗಳು ಸಾಕಷ್ಠಿದೆ. ಹಾಗಾಗಿಯೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ ಶೋಭಾಕರಂದ್ಲಾಜೆ, ವಿ.ಸೋಮಣ್ಣ, ಚಲುವರಾಯಸ್ವಾಮಿ ಹೀಗೆ ಘಟಾನುಘಟಿ ನಾಯಕರು ಇಲ್ಲಿಗೆ ಬಂದು ಭವಿಷ್ಯ ಕೇಳಿದ್ದಾರೆ.

          ಈಗ ಡಿ.ಕೆ.ಶಿವಕುಮಾರ್ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವ ರಾಜಕಾರಣಿಗಳ ಪಟ್ಟಿ ಸೇರ್ಪಡೆಗೊಂಡಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಹೋಮದಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ದೇವರ ಬಳಿ ಅಪ್ಪಣೆ ಕೇಳಲಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ದೇವಾಲಯದ ಸ್ವಾಮೀಜಿಗಳಾದ ರುದ್ರೇಶ್ ಸ್ವಾಮೀಜಿ ಪತ್ರಿಕೆಗೆ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link