ತುಮಕೂರು
ವಿಶೇಷ ವರದಿ: ರಾಕೇಶ್ ವಿ
ಹಣ್ಣುಗಳ ರಾಜ ಎಂದೇ ಪ್ರಸಿದ್ಧವಾದ ಮಾವಿನ ಹಣ್ಣು ಈಗಾಗಲೇ ತುಮಕೂರು ನಗರ ಹೊರತು ಪಡಿಸಿ ಉಳಿದ ಭಾಗಗಳಲ್ಲಿ ಆಗಮಿಸಿತ್ತು. ಇದೀಗ ತುಮಕೂರು ನಗರಕ್ಕೂ ಆಗಮಿಸಿದೆಯಾದರೂ ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಪರದಾಡುತ್ತಿದ್ದಾರೆ.
ನಗರದ ಹೊರ ಹೊಲಯದ ಅಂತರಸನಹಳ್ಳಿ ಕೃಷಿ ಮಾರುಕಟ್ಟೆಗೆ ಮಾವು ಆಗಮಿಸಿದ್ದು, ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣಿನ ಫಸಲು ಬರುತ್ತದೆ. ಆದರೆ ಈ ಬಾರಿ ಸರಿಯಾದ ಮಳೆಯಿಲ್ಲದೆ, ಮಾವಿನ ಫಸಲು ಸರಿಯಾಗಿ ಕೈಗೆ ಬಾರದೆ ರೈತರು ಕಂಗೆಟ್ಟಿದ್ದರು. ಅಂತೂ ಹೇಗೋ ಮಾವಿನ ಫಸಲು ಕೈಗೆ ಬಂದಿದ್ದು, ಮಾರುಕಟ್ಟೆಗೆ ಲಗ್ಗೆಯಿಟ್ಟರೆ, ಇಲ್ಲಿ ಕೊಂಡುಕೊಳ್ಳುವವರೇ ಇಲ್ಲದಂತಾಗಿದೆ.
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣುಗಳ ಮೇಳ ಆಯೋಜನೆ ಆಗುತ್ತಿತ್ತು. ಕಳೆದ ವರ್ಷ ಮೇ ತಿಂಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಮಾವು ಹಣ್ಣುಗಳ ಮೇಳ ಆಯೋಜನೆಗೊಂಡಿತ್ತು. ಅಲ್ಲಿ ಸುಮಾರು 35ಕ್ಕೂ ಹೆಚ್ಚು ವಿವಿಧ ರೀತಿಯ ಮಾವಿನ ಹಣ್ಣುಗಳು ಜನರನ್ನು ಆಕರ್ಷಿಸಿತ್ತು. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಂದಿ ಬೆಟ್ಟದಲ್ಲಿ ಮಾವು ಹಣ್ಣುಗಳ ಮೇಳ ಆಯೋಜನೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ.
ಕಳೆದ ವರ್ಷ ಇದ್ದ ಮಾರುಕಟ್ಟೆ ಬೆಲೆಗಿಂತ ಈ ಬಾರಿ ಬೆಲೆ ಕುಸಿದಿದೆ. ಮಾವು ತಿನ್ನುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವಂತೆ ಈ ಬಾರಿ ಮಾವು ಕೊಂಡುಕೊಳ್ಳುವವರು ಕೂಡ ಕಡಿಮೆಯಾಗಿದ್ದಾರೆ. ಈ ಮುಂಚೆ ಮಾವು ಹಣ್ಣು ಬಂತೆಂದರೆ ಸಾಕು, ಹಣ್ಣು ಖರೀದಿಸಲು ನುಗ್ಗುತ್ತಿದ್ದರು. ಆದರೆ ಇಂದು ಮಾವು ವ್ಯಾಪಾರಸ್ಥರು ನೊಣ ಬಡಿಯುವಂತಾಗಿದೆ.
ಜಿಲ್ಲೆಯಲ್ಲಿ ಬರ ತಾಂಡವವಾಡುತ್ತಿದ್ದು, ಮುಂಗಾರು ಮಳೆಯ ಆಗಮನಕ್ಕಿಂತಲೂ ಮುಂಚೆಯೇ ಗುಬ್ಬಿ, ಕೊರಟಗೆರೆ, ತುರುವೇಕೆರೆ ಸೇರಿದಂತೆ ಕೆಲವೆಡೆ ಮಾವಿನ ಫಸಲು ತೆಗೆದು ಸಾಧನೆ ಮಾಡಿದಷ್ಟೇ ಸಂತಸದಲ್ಲಿದ್ದರೆ, ಇನ್ನೂ ಕೆಲವರು ಮಾವಿನ ಫಸಲು ಕೈ ಸೇರದೆ ಕಂಗಾಲಾಗಿದ್ದಾರೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬೆಳೆದ ಮಾವಿನ ಫಸಲು ಸೇರಿದಂತೆ ಇತರ ಪ್ರದೇಶಗಳಿಂದಲೂ ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಂಡು ವ್ಯಾಪಾರ ಮಾಡಲು ಮುಂದಾಗಿದ್ದಾರೆ. ನಗರದ ಭದ್ರಮ್ಮ ವೃತ್ತದ ಬಳಿ, ಹನುಮಂತಪುರದ ಬಳಿ, ಹಣ್ಣಿನ ಮಾರುಕಟ್ಟೆ ಬಳಿ, ಎಸ್‍ಐಟಿ ಕಾಲೇಜು ಬ್ಯಾಕ್ ಗೇಟ್ ಬಳಿ, ಬಟವಾಡಿ ವೃತ್ತ, ಎಪಿಎಂಸಿ ಸೇರಿದಂತೆ ಕೆಲವೊಂದು ಪ್ರಮುಖ ವೃತ್ತಗಳಲ್ಲಿ ಮಾತ್ರ ಮಾವಿನ ಹಣ್ಣು ಮಾರುವವರು ಕಂಡು ಬರುತ್ತಿದ್ದಾರೆ ಹೊರತು ಉಳಿದ ಕಡೆ ಮಾವು ಮಾರಾಟ ಕಡಿಮೆಯಾಗಿರುವುದು ಗೋಚರಿಸುತ್ತಿದೆ.
ಕಾಲದಲ್ಲೂ ಮಾವಿನ ಜ್ಯೂಸ್ ಫೇಮಸ್. ಆದರೂ ಬೇಸಿಗೆಯಲ್ಲಿ ಬರುವ ಮಾವಿನ ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆಯಿರುತ್ತಿತ್ತು. ಇಂದಿಗೂ ಬೇಡಿಕೆ ಇದ್ದರೂ ಮಾವು ಹಣ್ಣುಗಳ ಕೊಳ್ಳುವಿಕೆ ಕಡೆಗೆ ಹೆಚ್ಚಿನದಾಗಿ ಮುಖ ಮಾಡುತ್ತಿಲ್ಲ. ಇದರಿಂದ ವ್ಯಾಪಾರಿಗಳ ಮುಖದಲ್ಲಿಯೂ ಆತಂಕ ಕಾಡುತ್ತಿದೆ. ಮಾವು ಪ್ರಿಯರಲ್ಲಿ ಕೆಲವರು ಮಾತ್ರ ಆಗಾಗ್ಗೆ ಮಾವು ಕೊಂಡು ಅದರ ರುಚಿಯನ್ನು ಸಿವಿಯುತ್ತಿದ್ದಾರೆ ಹೊರತು ಉಳಿದಂತೆ ಶೇ.80ರಷ್ಟು ಜನ ಮಾವಿನ ಕಡೆಗೆ ಗಮನ ಹರಿಸುತ್ತಿಲ್ಲ ಎಂಬುದು ವ್ಯಾಪಾರಸ್ಥರ ಮಾತಾಗಿದೆ.
ಅಷ್ಟಕಷ್ಟೇ ಇರುವ ಹಣ್ಣಿನ ಬೆಲೆ
ಮಾವಿನ ಹಣ್ಣುಗಳ ವಿಧಗಳಾದ ಬಾದಾಮಿ, ರಸಪುರಿ, ಚಿತ್ತುರ್ ಬಾದಾಮಿ, ತೋತಪುರಿ, ಕೇಸರ್, ಜೀರೆ ಮಾವಿನಹಣ್ಣು, ಕಾಲಾ ಪಹಾಡ್ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಒಂದು ಕಿಲೋ ಬಾದಾಮಿಗೆ 70 ರಿಂದ 90 ರೂ., ಒಂದು ಕಿಲೋ ರಸಪುರಿ ಹಣ್ಣಿಗೆ 50ರಿಂದ 60 ರೂ., ಒಂದು ಕಿಲೋ ಮಲಗೋಬಾ ಹಣ್ಣಿಗೆ 150 ರಿಂದ 200 ರೂ.ಗೆ ಬೆಲೆ ಇರುವುದಾಗಿ ಮಾರಾಟಗಾರರು ತಿಳಿಸುತ್ತಾರೆ.
ಜಿಲ್ಲೆಯ ವಿವಿಧೆಡೆಯಿಂದ ಆಮದು
ಜಿಲ್ಲೆಯ ಗುಬ್ಬಿ, ಕೆಜಿ ಟೆಂಪಲ್, ತುರುವೇಕೆರೆ, ಚೇಳೂರು, ಕೊರಟಗೆರೆ, ಮಧುಗಿರಿ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಮಾವಿನ ಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಉಳಿದಂತೆ ಮಾರುಕಟ್ಟೆಗೆ ವಿವಿಧ ಜಿಲ್ಲೆಗಳಿಂದಲೂ ಸಹ ಹಣ್ಣುಗಳು ಬರುತ್ತಿರುವುದಾಗಿ ಹಣ್ಣಿನ ವ್ಯಾಪಾರಿಗಳು ಹೇಳುತ್ತಾರೆ.
ಸಾಮಾನ್ಯವಾಗಿ ಮಾವು ಎಂದರೆ ಇಷ್ಟ ಪಡದವರು ಯಾರು ಇರುವುದಿಲ್ಲ. ಆದರೆ ಸರಿಯಾದ ಮಳೆಯಿಲ್ಲದ ಕಾರಣ ಮಾರುಕಟ್ಟೆಗೆ ಬಂದ ಮಾವಿನ ಹಣ್ಣಿಗೆ ವಿವಿಧ ರಸಾಯನ ಹಾಕಿ ಹಣ್ಣಾಗಿಸಿರುವ ಅನುಮಾನಗಳು ಇಂದು ಜನರನ್ನು ಕಾಡುತ್ತಿದೆ. ಇಂತಹ ಹಣ್ಣುಗಳನ್ನು ತಿಂದರೆ ಆರೋಗ್ಯದಲ್ಲಿ ಏರು ಪೇರು ಉಂಟಾಗಬಹುದೇನೋ ಎಂಬ ಅನುಮಾನವೂ ಕಾಡುತ್ತಿದೆ. ಹೀಗಾಗಿಯೇ ಹಣ್ಣುಗಳನ್ನು ಖರೀದಿ ಮಾಡಲು ಹಿಂಜರಿಯುತ್ತಿದ್ದಾರೆ.
ನಾರಾಯಣಸ್ವಾಮಿ, ಹಣ್ಣು ಕಂಡುಕೊಳ್ಳುತ್ತಿದ್ದ ವ್ಯಕ್ತಿ
ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಹಣ್ಣುಗಳನ್ನು ತಂದು ಮಾರಾಟ ಮಾಡಲು ಇಟ್ಟರೆ ಈ ಬಾರಿ ಜನ ಮಾವಿನ ಹಣ್ಣುಗಳನ್ನು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಈ ಮೊದಲು ಹಣ್ಣುಗಳನ್ನು ಮಾರಾಟಕ್ಕೆ ಇಡುತ್ತಿದ್ದಂತೆಯೇ ಕೇವಲ ಒಂದೆರಡು ದಿನಗಳಲ್ಲಿ ಖಾಲಿಯಾಗುತ್ತಿತ್ತು. ಆದರೆ ಈಗ ತಿಂಗಳಾಗುತ್ತಿದ್ದರೂ ಇಲ್ಲಿಯವೆರೆಗೆ ಹಣ್ಣುಗಳು ಹಾಗೇ ಉಳಿದಿವೆ. ಇಟ್ಟಲ್ಲೇ ಹಣ್ಣುಗಳು ಕೊಳೆತು ಚರಂಡಿಗೆ ಬೀಸಾಡುವ ಪರಿಸ್ಥಿತಿ ಬಂದಿದೆ.
ನಜೀರ್, ಹಣ್ಣು ವ್ಯಾಪಾರಿ
ತಳ್ಳುವ ಬಂಡಿಗಳಲ್ಲಿ ಮಾರಾಟ
ಮೊದಲು ನಗರದಲ್ಲಿ ಮಾವಿನ ಹಣ್ಣುಗಳು ಬಂದಿವೆ ಎಂದು ತಿಳಿಯುತ್ತಿದ್ದಂತೆಯೇ ಮಾರುಕಟ್ಟೆಯ ಕಡೆಗೆ ಜನ ವಾಲುತ್ತಿದ್ದರು. ಆದರೆ ಈ ಬಾರಿ ಮನೆಗಳ ಮುಂದಕ್ಕೆ ತಳ್ಳು ಗಾಡಿಯಲ್ಲಿ ಹಣ್ಣುಗಳನ್ನು ತಂದರೂ ಯಾರೂ ಇತ್ತ ನೋಡುತ್ತಲೇ ಇಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಓಡಾಡಿದರೂ ಐದು ನೂರು ರೂಪಾಯಿ ಸಂಪಾದನೆ ಮಾಡುವುದು ಕಷ್ಟಕರವಾಗಿದೆ.
ರಾಮಾಂಜಿನಪ್ಪ, ಹಣ್ಣು ಮಾರಾಟಗಾರ