ತುಮಕೂರು
ವಿಶೇಷ ವರದಿ: ರಾಕೇಶ .ವಿ
ತುಮಕೂರು ನಗರವು ಸ್ಮಾರ್ಟ್ ಸಿಟಿ ಆಗುತ್ತಿರುವುದು ಒಂದು ಕಡೆ ಹೆಮ್ಮೆ ಎನಿಸಿದರೆ ನಗರದ ಕೆಲವು ಪ್ರಮುಖ ಸ್ಥಳಗಳಲ್ಲಿ ಕಸದ ರಾಶಿ ರಾರಾಜಿಸುತ್ತಿರುವುದು ಇದಕ್ಕೆ ಒಂದು ಕಳಂಕ ಎನ್ನುವಂತಿದೆ. ನಗರದ ಹನುಮಂತಪುರ, ಉಪ್ಪಾರಹಳ್ಳಿ ಸೇತುವೆ ಬಳಿ, ಧೋಬಿಘಾಟ್‍ನ ಬಳಿ ಕಸದ ರಾಶಿಗಳು ತುಂಬಿಕೊಂಡಿರುವುದರಿಂದ ಸ್ಥಳೀಯ ನಾಗರಿಕರು ಇಲ್ಲಿ ಏಕೆ ಇಷ್ಟೊಂದು ಕಸ ಸಂಗ್ರಹಣೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಹಲವರು ಗೊಂದಲದಲ್ಲಿಯೂ ಇದ್ದಾರೆ.
ನಗರದಲ್ಲಿ ದಿನವೊಂದಕ್ಕೆ ಹತ್ತು ಟನ್ ವರೆಗೆ ಕಸ ಶೇಖರಣೆ ಆಗುತ್ತಿದೆ. ಇದಕ್ಕೆ ಹಲವು ಕಾರಣಗಳಿದ್ದು, ಕೆಲವರು ಕಸವನ್ನು ತಂದೆ ಎರಚಿದರೆ, ಇನ್ನೂ ಕೆಲವು ಜನ ರಾತ್ರೋ ರಾತ್ರಿ ಕಸ ತುಂಬಿದ ಮೂಟೆಗಳನ್ನು ತಂದು ಬೀಸಾಡಿ ಹೋಗುತ್ತಾರೆ. ಇದರಲ್ಲಿ ಒಣ ಕಸ ಹಸಿ ಕಸ ಎರಡು ಮಿಶ್ರಿತಗೊಳ್ಳುವುದರಿಂದ ಇನ್ನಿತರ ಸಮಸ್ಯೆಗಳು ಎದುರಾಗುತಲಿದ್ದು, ಪಾಲಿಕೆಯ ಪೌರ ಕಾರ್ಮಿಕರು ಕಸವನ್ನು ಬೇರ್ಪಡಿಸಿ ನೀಡುವಂತೆ ಸಾರ್ವಜನಿಕರ ಮೊರೆಹೋಗುತ್ತಿದ್ದಾರೆ.
ನಗರದಲ್ಲಿ ಪ್ರತಿ ದಿನ ಕಸವನ್ನು ತೆಗೆದುಕೊಂಡು ಹೋಗಲು ಬರುವ ಪೌರ ಕಾರ್ಮಿಕರು ತಮ್ಮ ಕೆಲಸದ ನಿರ್ದಿಷ್ಠ ವೇಳೆಗಿಂತ ಹೆಚ್ಚಿನ ಸಮಯ ಕೆಲಸ ಮಾಡುವಂತಾಗಿದೆ. ಅದಕ್ಕೆ ಅವರು ಹೇಳುವ ಕಾರಣ ಸಾರ್ವಜನಿಕರು ಕಸ ನೀಡುವಾಗ ಹಸಿಕಸ ಮತ್ತು ಒಣ ಕಸ ವಿಂಗಡಣೆ ಮಾಡಿ ನೀಡಬೇಕು.
ಆ ಕೆಲಸ ಸಂಪೂರ್ಣವಾಗಿ ಆಗುತ್ತಿಲ್ಲ ಇದರಿಂದ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳುತ್ತಾರೆ.ಮಹಾನಗರ ಪಾಲಿಕೆಯಲ್ಲಿ ವಾರ್ಡ್‍ವಾರು ಒಟ್ಟು 9 ಲಾರಿಗಳು ಮತ್ತು 105 ಟಿಪ್ಪರ್ ಆಟೋಗಳು ಇವೆ. ಆಟೋಗೆ ಒಬ್ಬ ಚಾಲಕ ಮತ್ತು ಸಹಾಯಕರಿದ್ದು, ಹೀಗೆ ನೂರಾರು ಮಂದಿ ನಿತ್ಯ ಕೆಲಸ ಮಾಡುತ್ತಾರೆ. ಸಣ್ಣ ವಾರ್ಡ್‍ಗಳಿಗೆ 2 ಆಟೋಗಳನ್ನು ಕಳುಹಿಸಿದರೆ, ದೊಡ್ಡ ವಾರ್ಡ್‍ಗಳಿಗೆ ಮೂರ್ನಾಲ್ಕು ಆಟೋಗಳನ್ನು ಕಳುಹಿಸಲಾಗುತ್ತಿದೆ.
ಇದರಿಂದ ಪ್ರತಿ ಮನೆ ಮನೆಯ ಕಸವನ್ನು ಶೇಖರಿಸಿಕೊಂಡು ನಗರದ ಹನುಮಂತಪುರ, ಧೋಬಿಘಾಟ್, ಉಪ್ಪಾರಹಳ್ಳಿ ರೈಲ್ವೇ ಕೆಳಸೇತುವೆ ಬಳಿ, ದಾನಃಪ್ಯಾಲೆಸ್ ಬಳಿ, ಕ್ಯಾತ್ಸಂದ್ರ ರಿಂಗ್ ರಸ್ತೆಯಬಳಿ, ಸರ್ಕಾರಿ ಬಸ್ ಡಿಪೋ ಬಳಿ, ಶಿರಾಗೇಟ್ ಬಳಿ, ದಿಬ್ಬೂರು ಬಳಿ, ಗುಬ್ಬಿ ರಿಂಗ್ ರಸ್ತೆ ಬಳಿ ಒಟ್ಟು ಒಂಬತ್ತು ಪಾಯಿಂಟ್‍ಗಳನ್ನು ಮಾಡಿಕೊಂಡು ಆ ಪಾಯಿಂಟ್‍ಗೆ ಹತ್ತಿರವಾಗುವ ವಾರ್ಡ್‍ಗಳಿಂದ ತಂದ ಕಸವನ್ನು ಅಲ್ಲಿ ವಿಂಗಡಣೆ ಮಾಡಿ ಅಲ್ಲಿಂದ ಅಜ್ಜಗೊಂಡನಹಳ್ಳಿ ತಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಲಾಗುತ್ತಿದೆ.
ಸಾರ್ವಜನಿಕರ ಬೇಜವಾಬ್ದಾರಿ
ಈ ಮುಂಚೆ ಕಸವನ್ನು ಹೇಗೊ ಬೇಕೋ ಹಾಗೆಯೇ ತುಂಬಿ ಕಸದ ವಾಹನಗಳಿಗೆ ಹಾಕುತ್ತಿದ್ದರು. ಅದನ್ನು ಹಾಗೆಯೇ ಅಜ್ಜಗೊಂಡನಹಳ್ಳಿ ಘಟಕಕ್ಕೆ ಕಳುಹಿಸಿ ಶೇಖರಣೆ ಮಾಡಲಾಗುತ್ತಿತ್ತು. ಇದರಿಂದ ನೂರಾರು ಟನ್ ಕಸ ವಿಂಗಡಣೆ ಆಗದೆ ಹಾಗೇ ಉಳಿದುಕೊಂಡಿದೆ. ಈ ನಿಟ್ಟಿನಲ್ಲಿ ಹಸಿ ಕಸವನ್ನು ಮಾತ್ರ ಘಟಕಕ್ಕೆ ಕಳುಹಿಸಬೇಕು ಎಂಬ ಆಲೋಚನೆಯಿಂದ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಕೊಡಲು ಆಯುಕ್ತರು ಹಾಗೂ ಪಾಲಿಕೆ ಸಿಬ್ಬಂದಿ ಅರಿವು ಮೂಡಿಸಿದರೂ ಶೇ.80ರಷ್ಟು ಮಂದಿ ಕಸವನ್ನು ಬೇರ್ಪಡಿಸದೆ ಒಂದರಲ್ಲೇ ಬೆರಕೆ ಮಾಡಿ ನೀಡುತ್ತಿದ್ದಾರೆ. ಇದರಿಂದ ಕೆಲಸ ಸುಲಭವಾಗುವದರ ಬದಲಾಗಿ ಹೆಚ್ಚಾಗುತ್ತಿದೆ.
ಆಯುಕ್ತರ ಆದೇಶಕ್ಕೂ ಬೆಲೆ ಇಲ್ಲ
ಮಹಾನಗರ ಪಾಲಿಕೆ ಆಯುಕ್ತರು ಕಸದ ಸಮಸ್ಯೆ ಪರಿಹಾರದ ದೃಷ್ಠಿಯಿಂದ ಕಸವನ್ನು ತಮ್ಮ ತಮ್ಮ ಮನೆಯಲ್ಲಿಯೇ ಹಸಿ ಕಸ ಮತ್ತು ಒಣಕಸ ವಿಂಗಡಣೆ ಮಾಡಿ ನೀಡಬೇಕು ಎಂದು ಆದೇಶ ನೀಡಿದ್ದಾರೆ. ಆದರೆ ಇಲ್ಲಿ ಆಯುಕ್ತರ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಸಮಸ್ಯೆ ಬಂದಾಗ ಅಧಿಕಾರಿಗಳ ವಿರುದ್ಧ ಮಾತನಾಡುವ ಜನರು ಅಧಿಕಾರಿಗಳ ಆದೇಶವನ್ನು ಪಾಲಿಸುವಂತಾಗಬೇಕು. ಆಗ ಮಾತ್ರ ಕಸದ ಸಮಸ್ಯೆ ಪರಿಹಾರಕ್ಕೆ ನಾಂದಿ ಹಾಡಬಹುದು.
ದಂಢ ವಿಧಿಸಿದರೂ ಎಚ್ಚೆತ್ತುಕೊಳ್ಳದ ಸಾರ್ವಜನಿಕರು
ಧೋಬಿಘಾಟ್ ಬಳಿ ಇರುವ ಕಸದ ಪಾಯಿಂಟ್ ಬಳಿ ರಾತ್ರಿ ಒಂದು ಗಂಟೆಯವರೆಗೆ ಕಾಯುತ್ತಾ ಕುಳಿತುಕೊಂಡು ರಾತ್ರಿ ವೇಳೆ ಕಸ ತಂದು ಸುರಿಯುವವರನ್ನು ಹಿಡಿದು ಪಾಲಿಕೆಯ ಮೇಲ್ವಿಚಾರಕರು ದಂಢ ವಿಧಿಸಿದರೂ ಯಾರು ಎಚ್ಚೆತ್ತುಕೊಳ್ಳದೆ, ಹಳೆಯ ಛಾಳಿಯನ್ನೇ ಮುಂದುವರೆಸಿದ್ದಾರೆ. ಕಸವನ್ನು ಹಾಕಿದರೆ ದಂಢ ವಿಧಿಸಲಾಗುವುದು. ಇದು ಸಿಸಿಟಿವಿ ವ್ಯಾಪ್ತಿಯಲ್ಲಿದೆ ಎಂದು ಆಯುಕ್ತರು ಆದೇಶ ಹೊರಡಿಸಿರುವ ಬ್ಯಾನರ್‍ಅನ್ನು ಅಳವಡಿಸಿದರೂ ಜನ ಸಹಕಾರ ನೀಡುತ್ತಿಲ್ಲ ಎಂದು 25-26ನೇ ವಾರ್ಡ್‍ನ ಮೇಲ್ವಿಚಾರಕ ಸತ್ಯ ಆರೋಪಿಸಿದ್ದಾರೆ.
ಸಿಮೆಂಟ್ ಫ್ಯಾಕ್ಟರಿಗಳಿಗೆ ಹೋಗುವ ಪ್ಲಾಸ್ಟಿಕ್ ವಸ್ತುಗಳು
ಕಸವನ್ನು ಶೇಖರಿಸಿ ಪಾಯಿಂಟ್‍ಗಳಲ್ಲಿ ವಿಂಗಡಣೆ ಮಾಡುವ ಪೌರ ಕಾರ್ಮಿಕರು ಹಸಿಕಸವನ್ನು ಕಸದ ವಾಹನಗಳ ಮೂಲಕ ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ಗೊಬ್ಬರವಾಗಿ ಪರಿವರ್ತಿಸಿದರೆ, ಬಳಕೆಗೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಹಸಿರುದಳ ( ಚಿಂದಿಆಯುವವರು ) ಸಂಸ್ಥೆಗೆ ಇಂತಿಷ್ಟು ಹಣಕ್ಕೆ ನೀಡಲಾಗುತ್ತದೆ. ಅದನ್ನು ಹಸಿರುದಳದವರು ಪ್ಲಾಸ್ಟಿಕ್ ವಸ್ತುಗಳಲ್ಲಿ ಬೇರ್ಪಡಿಕೆ ಮಾಡಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಅನ್ನು ಅಮ್ಮಸಂದ್ರದ ಸಿಮೆಂಟ್ ಕಾರ್ಖಾನೆಗಳಿಗೆ ಹಾಗೂ ಟೈಲ್ಸ್ ತಯಾರಿಕಾ ಕಾರ್ಖಾನೆಗಳಿಗೆ ನೀಡಲಾಗುತ್ತದೆ ಎಂದು ಮೇಲ್ವಿಚಾರಕ ಹನುಮಂತ ತಿಳಿಸಿದರು.
ಜನರ ಸಹಕಾರ ಮುಖ್ಯ
ಕಸದ ಸಮಸ್ಯೆ ನಿವಾರಿಸುವಲ್ಲಿ ಜನರ ಸಹಕಾರವೂ ಅಗತ್ಯವಾಗಿದೆ. ಜನರು ಸಹಕಾರ ನೀಡಿದ್ದಲ್ಲಿ ಕಸದ ಸಮಸ್ಯೆ ನಿವಾರಣೆಯಾಗುವಲ್ಲಿ ಯಾವುದೇ ಸಂಶಯವಿಲ್ಲ. ಈ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗಿದ್ದರೂ ಜನರು ಗಮನ ಹರಿಸುತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಹಸಿಕಸ ಮತ್ತು ಒಣಕಸ ವಿಂಗಡಣೆ ಮಾಡಿ ಬೇರ್ಪಡಿಸಿ ವಿತರಿಸಿದರೆ ಅನುಕೂಲವಾಗುವುದರ ಜೊತೆಗೆ ಕಸದ ಸಮಸ್ಯೆ ನಿವಾರಿಸಬಹುದು.
ಕಸವನ್ನು ವಿಂಗಡಣೆ ಮಾಡುವುದು ಒಳ್ಳೆಯ ಕೆಲಸವೇ ಸರಿ. ಆದರೆ ಅದನ್ನು ನಿರ್ಜನ ಪ್ರದೇಶಗಳಲ್ಲಿ ಮಾಡಿದರೆ ಯಾವುದೇ ಸಮಸ್ಯೆಯಿಲ್ಲ . ಆದರೆ ದಿನನಿತ್ಯ ಸಾವಿರಾರು ಮಂದಿ ಓಡಾಡುವ ಪ್ರದೇಶದಲ್ಲಿ, ರಸ್ತೆಯ ಪಕ್ಕದಲ್ಲಿ ಮಾಡುವುದರಿಂದ ಸುತ್ತಮುತ್ತಲಿನ ಜನಕ್ಕೆ ತೊಂದರೆಗಳಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿದರೆ ಅನುಕೂಲವಾಗಲಿದೆ.
ಪರಮೇಶ್ವರ, ಉಪ್ಪಾರಹಳ್ಳಿ
ಪ್ರತಿನಿತ್ಯ ಬೆಳಗಾಗುತ್ತಿದ್ದಂತೆಯೇ ವಾಹನಗಳಲ್ಲಿ ಕಸ ಶೇಖರಣೆ ಮಾಡಲು ಪ್ರತಿ ವಾರ್ಡ್‍ಗಳಿಗೆ ತೆರಳುತ್ತೇವೆ. ಅಲ್ಲಿ ಕೆಲವರು ಕಸವನ್ನು ಬೇರ್ಪಡಿಸಿ ನೀಡಿದರೆ ಇನ್ನೂ ಕೆಲವರು ಒಂದರಲ್ಲಿಯೇ ಹಾಕಿ ಕೊಡುತ್ತಾರೆ. ಈ ಬಗ್ಗೆ ಕೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಇನ್ನೂ ಕೆಲವರಂತೂ ಚಾಕುಗಳನ್ನು ತೋರಿಸಿ ಬೆದರಿಸುತ್ತಾರೆ. ನಮಗೇನು ಕೆಲಸ ಇರುವುದಿಲ್ಲ ಅಂದುಕೊಂಡಿದ್ದೀರಾ, ನೀವೇ ಕಸವನ್ನು ಬೇರ್ಪಡಿಸಿಕೊಳ್ಳಿ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಾರೆ.
ಪೌರಕಾರ್ಮಿಕರು
ಪ್ರತಿನಿತ್ಯ 5.30ಗಂಟೆಗೆ ಕಸದ ಶೇಖರಣೆಗೆ ತೆರಳುತ್ತಾರೆ. ವಾರ್ಡ್‍ಗಳಲ್ಲಿ ಕಸವನ್ನು ಶೇಖರಣೆ ಮಾಡಿಕೊಂಡು ಪಾಯಿಂಟ್‍ಗಳಲ್ಲಿ ಹಾಕಿಕೊಂಡು ಸಂಪೂರ್ಣವಾಗಿ ವಿಂಗಡಣೆ ಮಾಡುತ್ತಾರೆ. ಅದರಲ್ಲಿ ವಿವಿಧ ರೀತಿಯ ತ್ಯಾಜ್ಯ ವಸ್ತುಗಳು ಹಾಕಿರುತ್ತಾರೆ. ಅದನ್ನು ಬೇರ್ಪಡಿಸಿ ಹಸಿಕಸವನ್ನು ವಾಹನದ ಮೂಲಕ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಿದರೆ ಒಣ ಕಸವನ್ನು ಮೂಟೆಗಳ ರೂಪದಲ್ಲಿ ಕಟ್ಟಿ ಅದನ್ನು ಹಸಿರು ದಳದವರಿಗೆ ನೀಡಲಾಗುತ್ತದೆ. ಅದನ್ನು ಅವರು ವಿಂಗಡಣೆ ಮಾಡಿಕೊಂಡು ಮಾರಾಟ ಮಾಡಿಕೊಳ್ಳುತ್ತಾರೆ. ಇಲ್ಲಿ ಕಸದ ವಿಂಗಡಣೆ ಮಾಡುವಷ್ಟರಲ್ಲಿ ಸಂಜೆ 4.30 ಯಿಂದ 6 ಗಂಟೆಯಾಗುತ್ತದೆ. ಬೆಳಗ್ಗೆ ಬಂದ ಪೌರ ಕಾರ್ಮಿಕರು ತಮ್ಮ ಅವಧಿ ಮೀರಿ ಕೆಲಸ ಮಾಡುತ್ತಿದ್ದಾರೆ.
ಗಂಗಾಧರ್, ಮೇಲ್ವಿಚಾರಕ