ಪಾವಗಡ
ಮೈತ್ರಿ ಸರ್ಕಾರದ ಅಪವಿತ್ರ ಮೈತ್ರಿಗೆ ನೊಂದು ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ತಕ್ಕ ಪಾಠ ಕಲಿಸಿ ಮತ್ತೊಮ್ಮೆ ಮೋದಿ ಕೈಗೆ ದೇಶ ನೀಡಿದ ಮತದಾರರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಅಭಿನಂದನೆ ಸಲ್ಲಿಸಿದರು.
ಪಟ್ಟಣದ ಪುರಸಭೆಯ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತ ನೀಡಿದ ಮತದಾರರಿಗೆ ಅಭಿನಂದನೆ ಸಲ್ಲಿಸಲು ರಾಯಲ್ ರೆಸಾರ್ಟ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾಘಟ್ ಬಂಧನದ ಪ್ರಮುಖರಾದ ದೇವೆಗೌಡರು, ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಹೆಚ್. ಮುನಿಯಪ್ಪರವರ ಆಡಳಿತ ವೈಫಲ್ಯದಿಂದ ನೊಂದ ನಾಡಿನ ಜನತೆ ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ ನೀಡಿದ್ದಾರೆ ಎಂದರು.
ರಾಜ್ಯದ ಅಪವಿತ್ರ ಮೈತ್ರಿಯಿಂದ ಅಭಿವೃದ್ದಿ ಕುಂಠಿತವಾಗಿದೆ. ಸಾಲಮನ್ನಾ ಆಗದೆ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡುತ್ತಿವೆ. ಸಾಲವು ದೊರೆಯದೆ ಹೊಸ ಸಾಲವು ಸಿಗದೆ ಬೇಸತ್ತ ಜನತೆ ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಅವರು, ನಾಡಿನ ಮುಖ್ಯಮಂತ್ರಿಗಳಿಗೆ ಜನಾಶೀರ್ವಾದದ ಮೇಲೆ ಬದ್ದತೆ ಇದ್ದರೆ ಇಂದೋ, ನಾಳೆಯೋ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಜಿ.ಟಿ.ಗಿರೀಶ್, ಹಾಲಿ ಸಚಿವರ ಮತ್ತು ಮಾಜಿ ಶಾಸಕರ ಕ್ಷೇತ್ರ ಕಡೆಗಣನೆಯಿಂದ ಈ ಬಾರಿ 50 ಸಾವಿರ ಮತಗಳ ಗಡಿಯನ್ನು ನಾವು ದಾಟಿದ್ದೇವೆ. ತಾಲ್ಲೂಕಿನ ಜನತೆ ಶುದ್ದಕುಡಿಯುವ ನೀರು ಮತ್ತು ದನಕರುಗಳಿಗೆ ಮೇವು ಸಿಗದೆ ಪರದಾಡುವಂತಾಗಿದ್ದು ಬಿಜೆಪಿಯಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ತಿಳಿದ ತಾಲ್ಲೂಕಿನ ಮತದಾರರು ಈ ತೀರ್ಪು ನೀಡಿದ್ದು, ಪಕ್ಷದ ಕಾರ್ಯಕರ್ತರಿಗೆ ಮತದಾರರಿಗೆ ಅನಂತ ಧನ್ಯವಾದಗಳೆಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಸಪ್ತಗಿರಿ ಬಾಲಾಜಿ, ಉಮೇಶ್, ರವಿಶಂಕರ್ ನಾಯ್ಕ್, ತಿಪ್ಪೆಸ್ವಾಮಿ, ಶಿವಕುಮಾರ್ ಸಾಕೇಲ್, ರಂಗಣ್ಣ, ಪಾಲಯ್ಯ, ಗುಂಡಾರ್ಲಹಳ್ಳಿ ತಿಪ್ಪೆಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
