ಶಾಖಾ ಕಾಲುವೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಿ

ಚಿತ್ರದುರ್ಗ

    ಜಿಲ್ಲೆಯ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯಡಿ ತುಮಕೂರು ಹಾಗೂ ಚಿತ್ರದುರ್ಗ ಶಾಖಾ ಕಾಲುವೆಗೆ ಸಂಬಂಧಿಸಿದಂತೆ ಅನಗತ್ಯ ವಿಳಂಬ ಮಾಡದೆ ಭೂಸ್ವಾಧೀನ ಪ್ರಕ್ರಿಯೆಗೆ ಹೆಚ್ಚಿನ ವೇಗ ನೀಡುವಂತೆ ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಭದ್ರಾ ಮೇಲ್ದಂಡೆ ಯೋಜನೆಯಡಿ ಅಜ್ಜಂಪುರ ಬಳಿಯ ವೈ ಜಂಕ್ಷನ್‍ನಿಂದ 0-150 ಕಿ.ಮೀ. ತುಮಕೂರು ಶಾಖಾ ಕಾಲುವೆ ಮತ್ತು 0-135 ಕಿ.ಮೀ. ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣ ಕಾರ್ಯ ಆಗಬೇಕಿದ್ದು, ಚಿತ್ರದುರ್ಗ ಶಾಖಾ ಕಾಲುವೆಗೆ ಸಂಬಂಧಿಸಿದಂತೆ ಬಹುತೇಕ ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ವಿವಿಧ ಇಲಾಖೆಗಳ ಜಂಟಿ ಅಳತೆ ಕಾರ್ಯ ಮಾತ್ರ ಬಾಕಿ ಇದೆ.

    ಮರಡಿ ದೇವಿಗೆರೆ ಹಾಗೂ ಚಿಕ್ಕಸಿದ್ದವ್ವನಹಳ್ಳಿ ಗ್ರಾಮಗಳಲ್ಲಿ ಮಾತ್ರ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕುರಿತ ಸಭೆ ಆಗಬೇಕಿದ್ದು, ಜುಲೈ ಮೊದಲನೆ ವಾರದಲ್ಲಿ ನಡೆಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದರು ತುಮಕೂರು ಶಾಖಾ ಕಾಲುವೆಗೆ ಸಂಬಂಧಿಸಿದಂತೆ ಗರಗ ದಲ್ಲಿ 71 ಎಕರೆ, ಮೈಲಾಪುರ-27 ಎಕರೆ, ಗೋಗುದ್ದು-25 ಹಾಗೂ ಕಬ್ಬಿನಕೆರೆ-07 ಎಕರೆ ಸೇರಿದಂತೆ 130 ಎಕರೆಗೆ 11(1) ಪ್ರಾಥಮಿಕ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.

   ಎರಡೂ ಶಾಖಾ ಕಾಲುವೆಗಳಲ್ಲಿ ಕೆಲವೆಡೆ ಅರಣ್ಯ ಇಲಾಖೆ ಭೂಮಿ ಹಾಗೂ ಸರ್ಕಾರಿ ಸರ್ವೆ ನಂಬರ್‍ಗಳ ದಾಖಲೆ ಪರಿಶೀಲನೆ ಕಾರ್ಯದಲ್ಲಿ ಪಹಣಿಗಳ ವ್ಯತ್ಯಸ, ಭೂ ಮಾಲೀಕತ್ವ, ಮೌಲ್ಯಮಾಪನ ಕಾರ್ಯದಲ್ಲಿ ತೊಂದರೆಗಳಿವೆ. ಅಧಿಕಾರಿಗಳು ಪಹಣಿಯಲ್ಲಿ ಸಮಸ್ಯೆ, ಮಾಲೀಕತ್ವ, ಸರ್ಕಾರಿ ಭೂಮಿ ಒತ್ತುವರಿಯ ವಿವಾದಗಳನ್ನು ಪರಿಹರಿಸಿಕೊಳ್ಳದೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಕಡತಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುತ್ತೀರಿ. ಆದರೆ ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಇಂತಹ ಕಡತಗಳು ಅನುಮೋದನೆಗೊಳ್ಳದೆ ಹಾಗೆಯೇ ಉಳಿಯಲು ಕಾರಣವಾಗುತ್ತವೆ ಎಂದು ಹೇಳೀದರು

    ಕಡತಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ವಿಳಂಬವಾಗುತ್ತಿವೆ ಎನ್ನುವ ಆರೋಪವನ್ನು ನಾವು ಎದುರಿಸುವ ಪರಿಸ್ಥಿತಿ ಇದೆ. ಪಹಣಿ ಮುಂತಾದ ಸಮಸ್ಯೆಗಳಿದ್ದಲ್ಲಿ ಭೂದಾಖಲೆಗಳ ಉಪನಿರ್ದೇಶಕರ ಗಮನಕ್ಕೆ ತಂದು, ಆದಷ್ಟು ಪರಿಹರಿಸಿಕೊಳ್ಳಲು ಯತ್ನಿಸಬೇಕು. ಹೀಗಾಗಿ ಅಧಿಕಾರಿಗಳು ಕಡತಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಆದಷ್ಟು ಸಮಸ್ಯೆ ಪರಿಹರಿಸಿಯೇ ಸಲ್ಲಿಸಬೇಕು. ರೈತರ ಭೂಮಿ ಅಥವಾ ಆಸ್ತಿ ಮೌಲ್ಯಮಾಪನ ಸಂದರ್ಭದಲ್ಲಿ ಕಾಮಗಾರಿಗೂ ಮುನ್ನ ಅಧಿಕಾರಿಗಳು ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು.

    ರೈತರಿಗೆ ಅನ್ಯಾಯವಾಗಬಾರದು. ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಅವಾರ್ಡ್ ಆಗಿರುವ ಪ್ರಕರಣಗಳಲ್ಲಿ ಹಣ ಪಾವತಿಯಾಗದಿದ್ದ ಸಂದರ್ಭದಲ್ಲಿ ರೈತರು ಅಸಹಕಾರ ತೋರುವ ಸಾಧ್ಯತೆಗಳಿರುವುದರಿಂದ ರೈತರಿಗೆ ಕೂಡಲೆ ಹಣ ಪಾವತಿಯಾಗಬೇಕು. ಜುಲೈ ಮೊದಲನೆ ವಾರದಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕುರಿತ ಸಭೆ ನಡೆಸಲು ಕೋವಿಡ್-19 ಹರಡದಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಸಭೆಯಲ್ಲಿ ಭೂದಾಖಲೆಗಳ ಉಪನಿರ್ದೇಶಕ ಕೃಷ್ಣಪ್ರಸಾದ್, ಸಹಾಯಕ ನಿರ್ದೇಶಕ ಎಲ್. ಪ್ರಸಾದ್ ಸೇರಿದಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರರು, ವಿಶೇಷ ಭೂಸ್ವಾಧೀನ ಅಧಿಕಾರಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link