ಚಿತ್ರದುರ್ಗ:
ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆಗೆ ಸಂಬಂಧಿಸಿದಂತೆ ರೈತರ ಒಪ್ಪಿಗೆಯನ್ನು ಪಡೆದು ಈಗಾಗಲೆ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಕಾಮಗಾರಿಯ ಜೊತೆ ಜೊತೆಗೆ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳ್ಳಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಒಮ್ಮತವಾಗಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಭದ್ರಾ ಮೇಲ್ದಂಡೆ ಯೋಜನೆಯ ಕಛೇರಿ ಸಭಾಂಗಣದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ರೈತರಿಗೆ ಭೂ ಪರಿಹಾರ ನೀಡುವ ಹಾಗೂ ಭೂಸ್ವಾಧೀನ ಕುರಿತು ಹಮ್ಮಿಕೊಂಡಿದ್ದ ರೈತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಗೆ ಸಂಬಂಧಿಸಿದಂತೆ ಈಗಾಗಲೆ ಕೆಲವೆಡೆ ಗುತ್ತಿಗೆದಾರರು ರೈತರ ಒಪ್ಪಿಗೆ ಪಡೆದು ಕಾಮಗಾರಿ ಪ್ರಾರಂಭಿಸಿದ್ದಾರೆ. ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕು ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಇಂತಹ ರೈತರಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕಿಯೆ ಹಾಗೂ ಭೂ ಪರಿಹಾರ ನಿಗದಿ ಕಾರ್ಯ ತ್ವರಿತವಾಗಿ ಆಗಬೇಕು ಎಂದರು ಭೂಮಿ ಕಳೆದುಕೊಂಡ ರೈತರಿಗೆ ಶೀಘ್ರವಾಗಿ ಪರಿಹಾರ ಸಿಗುವ ಕೆಲಸವಾಗಬೇಕು.
ಭೂಮಿ ಕಳೆದುಕೊಂಡ ರೈತರು ಈಗಾಗಲೆ ಮುಂಗಾರು ಹಾಗೂ ಹಿಂಗಾರು ಬೆಳೆಯನ್ನು ಕಳೆದುಕೊಂಡಿದ್ದು, ಸಂಬಂಧಪಟ್ಟ ಗುತ್ತಿಗೆದಾರರೆ, ಸ್ವಯಂ ಪ್ರೇರಿತವಾಗಿ ಆಯಾ ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರೂ. ಗಳಂತೆ ಪರಿಹಾರ ನೀಡಿದ್ದಾರೆ. ಹೀಗಾಗಿ ಇಂತಹ ರೈತರಿಗೆ ಸಂಬಂಧಿಸಿದ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳ್ಳಬೇಕು. ಇದರ ಜೊತೆ ಜೊತೆಗೆ ಕಾಲುವೆ ಕಾಮಗಾರಿಯೂ ವೇಗವಾಗಿ ನಡೆಯಬೇಕು ಎಂದು ಹೇಳಿದರು.
ಸಂಬಂಧಪಟ್ಟ ಯಾವೊಬ್ಬ ರೈತರಿಗೂ ಅನ್ಯಾಯವಾಗದ ರೀತಿಯಲ್ಲಿ ನಾವು ಜನಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದ ಉಭಯ ಶಾಸಕರು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕಾಲುವೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಂದಾಯ, ಕೃಷಿ, ತೋಟಗಾರಿಕೆ, ಅರಣ್ಯ, ಸರ್ವೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಪ್ರತಿ ತಿಂಗಳು ಜಿಲ್ಲಾಡಳಿತದ ಜೊತೆಗೂಡಿ ಸಮನ್ವಯ ಸಭೆ ನಡೆಸಿ, ಯಾವುದೇ ಸಮಸ್ಯೆಗಳು ಬಂದರೂ ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ವ್ಯಾಪ್ತಿಗೆ ಬರುವ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕಿನ ರೈತರನ್ನು ಕರೆದು, ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಕೆಲವು ರೈತರಿಗೆ ಭೂಸ್ವಾಧೀನ ಹಾಗೂ ಪರಿಹಾರ ಹಣ ನೀಡಿಕೆಯ ಬಗ್ಗೆ ಇದ್ದ ಆತಂಕವನ್ನು ಬಗೆಹರಿಸಲಾಗಿದೆ ಎಂದರು.
ಮುಖ್ಯ ಎಂಜಿನಿಯರ್, ಇಲಾಖೆಯ ತಹಶೀಲ್ದಾರ್, ಸಬ್ ರಿಜಿಸ್ಟರ್ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಂದ ಭೂಸ್ವಾಧೀನದ ಕುರಿತು ಮಾಹಿತಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಇಲಾಖೆಯವರೊಂದಿಗೆ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಲಾಗುವುದು ಎಂದರು. ಭೂಸ್ವಾಧೀನ ಪ್ರಕ್ರಿಯೆಗೆ ತ್ವರಿತವಾಗಿ ಆಗಬೇಕು ಎಂದು ಉದ್ದೇಶದಿಂದ ನಡಾವಳಿ ಬರೆಯಿಸಿ, ನಡಾವಳಿ ಪ್ರಕಾರವೇ ನಿಗದಿಪಡಿಸಿದ ದಿನಾಂಕದಂತೆ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು. ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಒಳಪಟ್ಟ ಎಲ್ಲ ರೈತರು ಕಾಮಗಾರಿಯ ಪ್ರಗತಿಗೆ ಸಹಕಾರ ನೀಡಿದ್ದಾರೆ. ರೈತರ ಕೆಲವು ವೈಯಕ್ತಿಕ ಸಮಸ್ಯೆಗಳಿದ್ದು, ಅವುಗಳನ್ನು ಅಧಿಕಾರಗಳ ಗಮನಕ್ಕೆ ತಂದು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬರದ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯು ಶೀಘ್ರವಾಗಿ ಕಾರ್ಯವಾಗಬೇಕು. ತಾಲ್ಲೂಕುಗಳಿಗೆ ನಿಗಧಿಪಡಿಸಿರುವ ನೀರಿನ ಪ್ರಮಾಣವನ್ನು ಯಾವುದೇ ಕಾರಣಕ್ಕೆ ಮೊಟಕುಗೊಳಿಸಬಾರದು. ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕುಗಳಿಗೆ ಹಂಚಿಕೆಯಾದ ನೀರಿನ ಪ್ರಮಾಣವನ್ನು ಕಡ್ಡಾಯವಾಗಿ ಕೊಡಬೇಕು ಎಂದರು.
ಬಿಟ್ಟು ಹೋದ ಕೆರೆಗಳಿಗೆ ನೀರು ಹರಿಸಬೇಕು:
ಭದ್ರಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಯಿಂದ ಬಿಟ್ಟು ಹೋದ ಕೆರೆಗಳಿಗೂ ನೀರು ಹರಿಸಬೇಕು. ಹಿರಿಯೂರು ತಾಲ್ಲೂಕಿನ ಚಿಕ್ಕಸಿದ್ದವ್ವನಹಳ್ಳಿ, ಚಿತ್ರದುರ್ಗ ತಾಲ್ಲೂಕಿನ ಕುರುಮರಡಿಕೆರೆ, ನಂದಿಪುರ, ಅನ್ನೇಹಾಳ್, ಗೊಡಬನಾಳ್, ಹುಲ್ಲೂರು ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಆದರೆ ಈ ಸಂದರ್ಭದಲ್ಲಿ ಆಯಾ ತಾಲ್ಲೂಕುಗಳಿಗೆ ಹಂಚಿಕೆಯಾದ ನೀರಿನ ಪ್ರಮಾಣದ ಮಿತಿಯೊಳಗೇ ಈ ಎಲ್ಲ ಕೆರೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು. ಆಯಾ ತಾಲ್ಲೂಕುಗಳಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣದಲ್ಲಿ ವ್ಯತ್ಯಾಸ ಆಗುವುದು ಬೇಡ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‍ಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ರೈತರನ್ನು ನಿರ್ಲಕ್ಷೆ ಮಾಡದೇ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ರೈತರ ಒಪ್ಪಿಗೆ ಇಲ್ಲದೆ, ಅಧಿಸೂಚನೆ ಹೊರಡಿಸದೇ, ಕಾಮಗಾರಿ ಪ್ರಾರಂಭಿಸುವಂತಿಲ್ಲ. ಅಧಿಕಾರಿಗಳು ಸ್ವ ಇಚ್ಛೆಯಿಂದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಂವಹನ ನಡೆಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ರೈತರು ಮನವಿ ಮಾಡಿದರು. ರೈತ ಮುಖಂಡ ನುಲೇನೂರು ಶಂಕರಪ್ಪ ಮಾತನಾಡಿ, ಕೃಷಿ, ಕಂದಾಯ, ಅರಣ್ಯ ಇಲಾಖೆ ಒಳಗೊಂಡಂತೆ ತಿಂಗಳಿಗೊಮ್ಮೆ ಸಭೆ ನಡೆಸಿ, ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಗೊಳ್ಳಲು ಸಹಾಯಕವಾಗುತ್ತದೆ ಎಂದು ಮನವಿ ಮಾಡಿದಾಗ ಎಲ್ಲ ರೈತರು ಒಕ್ಕೂರಲ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಶಿವಕುಮಾರ್, ಅಧಿಕಾರಿಗಳಾದ ಸತ್ಯನಾರಾಯಣ, ಸೋಮಶೇಖರ್, ಕಲಾವತಿ, ಕುಲಕರ್ಣಿ, ವೆಂಕಟೇಶ್, ತಿಪ್ಪೇರುದ್ರಪ್ಪ, ಶ್ರೀಧರ್, ರಾಮಚಂದ್ರ, ರೈತ ಮುಖಂಡರಾದ ಕೊಂಚೆ ಶಿವರುದ್ರಪ್ಪ, ಡಾ. ಮಂಜುಳಾಸ್ವಾಮಿ ಸೇರಿದಂತೆ ಹಲವು ರೈತ ಮುಖಂಡರು, ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
