ಚಳ್ಳಕೆರೆ
ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಗೋಡೆ ಕುಸಿತದಿಂದ ನಾಲ್ವರು ಸಾವನಪ್ಪಿದ ಘಟನೆ ತಿಳಿಯುತ್ತಿದ್ದಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಗ್ರಾಮಕ್ಕೆ ಭೇಟಿ ನೀಡಿ ಗೋಡೆ ಕುಸಿದ ಮನೆ ವೀಕ್ಷಣೆ ನಡೆಸಿ, ಘಟನೆಯ ಬಗ್ಗೆ ಗಾಯಾಳು ಚಂದ್ರಶೇಖರನ ಬಳಿ ಮಾಹಿತಿ ಪಡೆದರು. ಈ ದುರಂತ ಆಕಸ್ಮಿಕವಾಗಿದ್ದು, ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿ ನೊಂದ ಕುಟುಂಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವನ್ನು ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಗ್ರಾಮದ ಹಿರಿಯ ಮುಖಂಡ ಗೋಪಾಲರೆಡ್ಡಿ ಮಾತನಾಡಿ, ಗ್ರಾಮದಲ್ಲಿ ಸುಮಾರು200ಕ್ಕೂ ಹೆಚ್ಚು ಹಳೆಯ ಮನೆಗಳಿದ್ದು, ಇವುಗಳೆಲ್ಲವೂ ಕಡಪ ಕಲ್ಲು ಮತ್ತು ಕರಲು ಮಣ್ಣಿನಿಂದ ಕೂಡಿವೆ. ಮಳೆ ಗಾಳಿ ಬಂದಾಗ ಇವುಗಳಿಂದ ಅಪಾಯವನ್ನು ಎದುರಿಸಬೇಕಿದೆ.
ಅದ್ದರಿಂದ ಎಲ್ಲಾ ಮನೆಗಳ ದುರಸ್ಥಿತಿಗೆ ಸರ್ಕಾರದ ವತಿಯಿಂದ ನೆರವು ಕೊಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಗಾಯಾಳು ಚಂದ್ರಶೇಖರವರನ್ನು ಘಟನೆಯ ಬಗ್ಗೆ ಪ್ರಶ್ನಿಸಿದರು. ನಮ್ಮ ತಂದೆ ಹನುಮಂತಪ್ಪ ಕಳೆದ ಎರಡ್ಮೂರು ವರ್ಷಗಳ ಹಿಂದೆ ವಾಲಿದ ಗೋಡೆಗೆ ಆಧಾರವಾಗಿ ಕಂಬನ್ನಿಟ್ಟಿದ್ದು, ಶುಕ್ರವಾರ ರಾತ್ರಿ ನಾವೆಲ್ಲರೂ ಊಟ ಮಾಡಿ ಅಲ್ಲೇ ಮಲಗಿದ್ದೆವು. ಆದರೆ, ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಅಕ್ಕಪಕ್ಕದವರು ದಾವಿಸಿ ನೆರವು ನೀಡಿದರಾದರೂ ನನ್ನ ಹೆಂಡತಿ ಮತ್ತು ನನ್ನ ಮೂರು ಮಕ್ಕಳು ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮನೆಯ ತುರ್ತು ರಿಪೇರಿಗಾಗಿ ಗ್ರಾಮ ಪಂಚಾಯಿತಿಯನ್ನು ಹಲವಾರು ಬಾರಿ ಸಂಪರ್ಕಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದರು.
ಕೂಡಲೇ ಶಾಸಕ ಟಿ.ರಘುಮೂರ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಈಶ್ವರಪ್ರಸಾದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜು ಮಾಹಿತಿ ನೀಡಿ ಗ್ರಾಮದಲ್ಲಿರುವ ಹಳೆಯ ಎಲ್ಲಾ ಮನೆಗಳನ್ನು ಸರ್ವೆ ಮಾಡಿಸಿ ಅವುಗಳ ಸ್ಥಿತಿಯ ಬಗ್ಗೆ ವರದಿ ಮಾಡುವಂತೆ ಸೂಚನೆ ನೀಡಿದರು. ಪ್ರಸ್ತುತ ಹಾಲಿ ಬಿದಿರುವ ಮನೆಯ ದುರಸ್ಥಿ ಕಾರ್ಯಕ್ಕಿಂತ ಮೊದಲು ಯಾವುದಾದರೂ ಒಂದು ವಸತಿ ಯೋಜನೆಯಲ್ಲಿ ಮನೆ ನೀಡುವ ಭರವಸೆಯನ್ನು ಶಾಸಕರು ನೀಡಿದರು.
ಗ್ರಾಮೀಣ ಭಾಗಗಳಲ್ಲಿ ಹಳೆಯ ಕಾಲದ ಮನೆಗಳಿರುವ ಬಗ್ಗೆ ಪಿಡಿಒಗಳಿಂದ ಮಾಹಿತಿ ಪಡೆಯುವಂತೆ ಇಒರವರಿಗೆ ಸೂಚನೆ ನೀಡಿದರು. ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ಸೌಲಭ್ಯಗಳನ್ನು ನೀಡುವುದಲ್ಲದೆ ಸದರಿ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ ನೀರಾವರಿ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದರು.
ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಾತನಾಡಿ, ನೊಂದ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಪೂರ್ಣ ವರದಿಯನ್ನು ಕಳುಹಿಸಿದ್ದು, ಅವರಿಂದ ಹೆಚ್ಚಿನ ನೆರವನ್ನು ನಿರೀಕ್ಷಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ವರದಿ ನೀಡುವುದಾಗಿ ತಿಳಿಸಿದರು. ಈಗಾಗಲೇ ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಿ, ವರದಿ ಸಿದ್ದಪಡಿಸಲು ಆದೇಶ ನೀಡಿರುವುದಾಗಿ ತಿಳಿಸಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಸಂಸದ ಬಿ.ಎನ್.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ ನೊಂದಕುಟುಂಬಕ್ಕೆ ನೆರವು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಬಗ್ಗೆ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ಆಗಮಿಸಿ, ಘಟನೆಯ ಬಗ್ಗೆ ಸಂಪೂರ್ಣ ವರದಿ ಪಡೆದು ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಕುಟುಂಬ ವರ್ಗಕ್ಕೆ ಸದಸ್ಯರಿಗೆ ಸಾಂತ್ವನ ತಿಳಿಸಿದರು. ಈ ಆಕಸ್ಮಿಕ ಘಟನೆಯಲ್ಲಿ ಹೆಂಡತಿ ಮತ್ತು ಮಕ್ಕಳನ್ನು ಕಳೆದುಕೊಂಡ ಚಂದ್ರಶೇಖರ್ ರೋಧಿಸುತ್ತಲೇ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
