ಕೊರಚ ಸಮಾಜದ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡುವುದು ಅಗತ್ಯ

ಶಿರಾ

     ರಾಜ್ಯದಲ್ಲಿ ಕೊರಚ ಸಮಾಜವು ಅತ್ಯಂತ ಹಿಂದುಳಿದಿದ್ದು ಸದರಿ ಸಮಾಜದ ಸಮಾಜಮುಖಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡುವುದು ಅಗತ್ಯ ಎಂದು ದಲಿತ ಮುಖಂಡ ಜೆ.ಎನ್.ರಾಜಸಿಂಹ ಹೇಳಿದರು.

       ಶಿರಾ ನಗರದ ಜ್ಯೋತಿ ನಗರ ಬಡಾವಣೆಯ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಕೊರಚ ಮಹಾಸಂಘದ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

     ರಾಜ್ಯದಲ್ಲಿ ಅತ್ಯಂತ ಕಡಿಮೆ ಹಾಗೂ ಅತ್ಯಂತ ಹಿಂದುಳಿದ ಸಮುದಾಯವೆಂದರೆ ಕೊರಚರಾಗಿದ್ದಾರೆ. ತಮ್ಮದೇ ಜೀವನದ ಸಣ್ಣಪುಟ್ಟ ಸ್ವ-ಉದ್ಯೋಗಗಳಿಂದ ಬದುಕಿನಲ್ಲಿ ಆರ್ಥಿಕ ಸದೃಢತೆಯನ್ನು ಈವರೆಗೂ ಈ ಸಮಾಜ ಕಾಣಲಾಗಿಲ್ಲ. ಹಂದಿ ಸಾಕಾಣಿಕೆ ಸೇರಿದಂತೆ ಬುಟ್ಟಿ ಹೆಣೆಯುವುದು ಈ ಸಮಾಜದ ಕಸುಬಾಗಿದ್ದು ಈ ಸಮಾಜದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕಿದೆ ಎಂದರು.

        ಕರ್ನಾಟಕ ರಾಜ್ಯ ಕೊರಚರ ಮಹಾ ಸಂಘದ ಅಧ್ಯಕ್ಷ ಎಂ.ಆರ್.ರಾಮಚಂದ್ರಪ್ಪ ಮಾತನಾಡಿ, ಕೊರಚ ಸಮುದಾಯದಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದು, ಅಂತಹ ಕುಟುಂಬಗಳು ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ. ರಾಜಕೀಯ ಮೀಸಲಾತಿಯೂ ಸೇರಿದಂತೆ ಶೈಕ್ಷಣಿಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

       ಉಪಾಧ್ಯಕ್ಷ ಕೆ.ಬಾಲಪ್ಪ, ಕಾರ್ಯದರ್ಶಿ ಗಂಗಾಧರ್, ಕೊಪ್ಪಳ ಜಿಲ್ಲಾಧ್ಯಕ್ಷ ಆಂಜಿನಪ್ಪ, ರಾಯಚೂರು ಜಿಲ್ಲಾಧ್ಯಕ್ಷ ವೈ.ಕುಮಾರ್, ಗಂಗಪ್ಪ, ಸಣ್ಣಪ್ಪ, ನಾಗಪ್ಪ, ಗಂಗಣ್ಣ, ನಾಗರಾಜು, ವೆಂಕಟೇಶ್, ಸುಬ್ಬರಾಯಪ್ಪ ಮುಂತಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ