ಬಂಡೆದ್ದ ಎಸ್‍ಪಿಎಂ: ಚುನಾವಣೆ ಸ್ಪರ್ಧೆಗೆ ನಿರ್ಧಾರ

ತುಮಕೂರು

       ತಮಗೆ ಲೋಕಸಭಾ ಟಿಕೆಟ್ ತಪ್ಪಿದ್ದಕ್ಕೆ ಕೆಂಡಮಂಡಲವಾಗಿರುವ ಹಾಲಿ ಸಂಸದ ಎಸ್ ಪಿ ಮುದ್ದಹನುಮೇಗೌಡರು ಮೈತ್ರಿ ನಾಯಕರ ವಿರುದ್ಧ ಸಿಡಿದೆದ್ದು ಸೋಮವಾರ ಬಂಡಾಯ ಅಭ್ಯಥಿಯಾಗಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ. ತಮಗಾದ ಅನ್ಯಾಯದ ವಿರುದ್ಧ ಜನತಾ ನ್ಯಾಯಾಲಯಕ್ಕೆ ಹೋಗುತ್ತಿರುವುದಾಗಿ ಘೋಷಿಸಿದ್ದಾರೆ. ಮುದ್ದಹನುಮೇಗೌಡರನ್ನು ಬೆಂಬಲಿಸಿದ ಮಾಜಿ ಶಾಸಕ ಕೆ ಎನ್ ರಾಜಣ್ಣನವರು, ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವೂ ಬದ್ದ ಎಂದು ಹೇಳಿದ್ದಾರೆ.

        ಶನಿವಾರ ಹೆಬ್ಬೂರು ಬಳಿ ತೋಟದ ಮನೆಯಲ್ಲಿ ಮುದ್ದಹನುಮೇಗೌಡರು ತಮ್ಮ ಬೆಂಬಲಿಗರೊಂದಿಗೆ ನಡೆಸಿದ ಸಭೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬಾರದು ಎಂಬ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣಾ ಅಖಾಡಕ್ಕೆ ಇಳಿಯಲು ನಿರ್ಧರಿಸಿದ್ದಾರೆ.
ತಮಗೆ ಟಿಕೆಟ್ ತಪ್ಪಿಸಲು ಏನು ಕಾರಣ ಕೊಡಿ ಎಂದು ಮೈತ್ರಿ ನಾಯಕರನ್ನು ಕೇಳಿದ ಮುದ್ದಹನುಮೇಗೌಡರು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಹಾಲಿ ಸಂಸದರಾದ ತಮಗೆ ಟಿಕೆಟ್ ದೊರೆಯುವ ನಿರೀಕ್ಷೆ ಇತ್ತು. ಆದರೆ ಏನಾಯಿತು, ಯಾರು ಕಾರಣವೋ ತಿಳಿಯದು ತಮಗೆ ಟಿಕೆಟ್ ಕೈತಪ್ಪಿದೆ ಎಂದು ಆಕ್ರೋಶಗೊಂಡರು.

        ನಾನು ಉತ್ತಮ ಕೆಲಸ ಮಾಡಿದ್ದೇನೆ, ಹಾಲಿ ಸಂಸದನಾಗಿದ್ದೇನೆ, ಆದರೂ ನನಗೆ ಯಾಕೆ ಅನ್ಯಾಯ ಮಾಡುತ್ತಿದ್ದೀರಿ, ನನ್ನಿಂದಾಗಿರುವ ಲೋಪವೇನು ಎಂಬುದನ್ನು ಮೈತ್ರಿ ನಾಯಕರು ಬಹಿರಂಗಪಡಿಸಲಿ. ಎಲ್ಲ ಹಾಲಿ ಸಂಸದರಿಗೆ ಟಿಕೆಟ್ ನೀಡಿ ನನ್ನೊಬ್ಬನಿಗೇ ಏಕೆ ಈ ವಂಚನೆ ಎಂದು ಪ್ರಶ್ನಿಸಿದ ಮುದ್ದಹನುಮೇಗೌಡರು, ಸೋಮವಾರ ತಾವು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿ ಮೈತ್ರಿ ನಾಯಕರ ವಿರುದ್ಧ ಸಮರ ಸಾರಿದರು..

        ನಾನು ಚುನಾವಣಾ ಕಣದಲ್ಲಿ ಇರಲೇಬೇಕು ಎಂಬುದು ಬೆಂಬಲಿಗರ ಒತ್ತಾಯವಾಗಿದೆ. ಇದಕ್ಕೆ ಜಿಲ್ಲೆಯ ಕೆಲವು ನಾಯಕರು ಬೆಂಬಲವಾಗಿ ನಿಂತಿದ್ದಾರೆ. ಸೋಲು, ಗೆಲುವು ಜನರ ನಡುವೆಯೇ ನಡೆಯಲಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದರು.
ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ನನ್ನನ್ನು ಒಂದು ಅಭಿಪ್ರಾಯ ಕೇಳದೆ ನನಗೆ ಟಿಕೆಟ್ ತಪ್ಪಿಸಿರುವುದು ಯಾವ ನ್ಯಾಯ, ಆದರೆ ಮೈತ್ರಿ ಧರ್ಮ ಪಾಲನೆ ವಿಚಾರವನ್ನು ನನ್ನ ಬಳಿಯೂ ಚರ್ಚಿಸಬೇಕಿತ್ತಲ್ಲವೆ, ಯಾವ ಕಾರಣದಿಂದ ನನಗೆ ಟಿಕೆಟ್ ಕೊಡಿಸಲು ನಿರಾಕರಿಸಿದ್ದಾರೆ ಎಂಬುದನ್ನು ಹೇಳಲಿ ಎಂದು ಕಿಡಿಕಾರಿದರು.

        ಸೋಮವಾರ ಮೈತ್ರಿ ಅಭ್ಯರ್ಥಿಯಾಗಿರುವ ಹೆಚ್.ಡಿ.ದೇವೇಗೌಡರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ, ಅದೇ ದಿನ ನಾನು ಕೂಡ ನನ್ನ ಬೆಂಬಲಿಗರೊಂದಿಗೆ ನಗರದ ಟೌನ್ ಹಾಲ್ ವೃತ್ತದಿಂದ ಮೆರವಣಿಗೆ ಸಾಗಿ ಕಾಂಗ್ರೆಸ್‍ನಿಂದ ನಾಮಪತ್ರ ಸಲ್ಲಿಸುತ್ತೇನೆ, ಇನ್ನೊಂದು ದಿನದಲ್ಲಿ ಹೈಕಮಾಂಡ್ ಟಿಕೆಟ್ ಕೊಡುವ ವಿಚಾರದಲ್ಲಿ ಪರಿಶೀಲನೆ ನಡೆಸಿ ನನಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ ಮುದ್ದಹನುಮೇಗೌಡರು, ಪಕ್ಷ ಮರುಪರಿಶೀಲನೆ ಮಾಡಿ ತಮಗೇ ಟಿಕೆಟ್ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

       ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಪ್ರಯತ್ನಪಟ್ಟಿದ್ದರು, ಆದರೂ ಟಿಕೆಟ್ ಸಿಕ್ಕಿರಲಿಲ್ಲ, ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕ್ಷೇತ್ರ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು, ಆ ಪ್ರಯತ್ನವೂ ಫಲಿಸಲಿಲ್ಲ. ತಮಗಾದ ಅನ್ಯಾಯಕ್ಕೆ ಜನರೇ ತೀರ್ಪು ನೀಡಲಿ ಎನ್ನುವಂತೆ ಮುದ್ದಹನುಮೇಗೌಡರು ಚುನಾವಣಾ ಕಣಕ್ಕೀಲಿಯಲು ತೀಮಾನ ಮಾಡಿದ್ದಾರೆ.ಕಾಂಗ್ರೆಸ್ ಮುಖಂಡರಾದ ಕೆಂಕೆರೆ ಸತೀಶ್, ಚೌದ್ರಿ ರಂಗಪ್ಪ, ಕಲ್ಲಹಳ್ಳಿ ದೇವರಾಜು, ಗೂಳೂರು ವಿಜಯಕುಮಾರ್, ರಾಯಸಂದ್ರ ರವಿಕುಮಾರ್, ಜಯರಾಮ್ ಮೊದಲಾದರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕೆ ಎನ್ ಆರ್ ಬೆಂಬಲ:

       ಸಂಸದ ಎಸ್ ಪಿ ಮುದ್ದಹನುಮೇಗೌಡರ ಬೆಂಬಲಿಗರ ಸಭೆಗೆ ಆಗಮಿಸಿದ್ದ ಮಾಜಿ ಶಾಸಕ ಕೆ ಎನ್ ರಾಜಣ್ಣನವರು, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಉಳಿವಿಗಾಗಿ ಮುದ್ದಹನುಮೇಗೌಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಮ್ಮ ಸಹಮತವಿದೆ ಎಂದರು.

       ಕೇಂದ್ರದಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು, ಜಾತ್ಯಾತೀತ ಪಕ್ಷಗಳು ಒಂದಾಗಬೇಕೆಂಬ ತೀರ್ಮಾನದಂತೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಾಗಿದೆ. ಆದರೆ, ಮೈತ್ರಿ ಧರ್ಮದಂತೆ ರಾಜ್ಯದ ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್ ನೀಡಿ ಮುದ್ದಹನುಮೇಗೌಡರಿಗೆ ತಪ್ಪಿಸಿರುವುದು ಸರಿಯಲ್ಲ ಎಂದರು.ಮುದ್ದಹನುಮೇಗೌಡರು ಲೋಕಸಭೆಯಲ್ಲಿ ರಾಜ್ಯದ ಸಮಸ್ಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸರ್ಕಾರದ ಗಮನಕ್ಕೆ ತಂದವರು. ಅಷ್ಟು ಸಕ್ರಿಯವಾಗಿದ್ದ ಇವರಿಗೆ ಟಿಕೆಟ್ ತಪ್ಪಬಾರದಾಗಿತ್ತು ಎಂದು ಹೇಳಿದರು.ಮುದ್ದಹನುಮೇಗೌಡರು ಒಪ್ಪಿದರೆ ಈಗಲೂ ಇವರಿಗೆ ಜೆಡಿಎಸ್‍ನವರು ಮನೆಗೆ ಬಿ ಫಾರಂ ಕಳಿಸುತ್ತಾರೆ.ಜೆಡಿಎಸ್‍ನವರಿಗೆ ನಾವೇ ಕ್ಷೇತ್ರ ಬಿಟ್ಟುಕೊಟ್ಟು ನಾವೇ ಅಭ್ಯರ್ಥಿಗಳನ್ನು ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಕೆಎನ್‍ಆರ್ ವ್ಯಂಗ್ಯವಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap