ಕ್ರೀಡಾಪಟುಗಳಿಗೆ ಆರ್ಥಿಕ ಸಹಕಾರ ಅಗತ್ಯ : ಶ್ರೀರಾಮುಲು

ಚಿತ್ರದುರ್ಗ:

     ಸ್ಥಳೀಯ ಸಂಸ್ಥೆಗಳಾದ ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳು ಕ್ರೀಡಾಪಟುಗಳಿಗೆ ಅನುದಾನ ಮೀಸಲಿರಿಸುವಂತೆ ಕ್ರಮ ವಹಿಸಲು ಸೂಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ತಿಳಿಸಿದರು.

    ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

    ಸಣ್ಣ ಪುಟ್ಟ ರಾಷ್ಟ್ರಗಳು ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುತ್ತಿವೆ. ನಮ್ಮ ದೇಶ ಜನಸಂಖ್ಯೆಯಲ್ಲಿ ಹೆಚ್ಚಿದ್ದರು ಅಥ್ಲೆಟಿಕ್ಸ್ ಕ್ರೀಡೆಯೊಳಗೆ ಚಿನ್ನದ ಪದಕಗಳನ್ನು ಪಡೆಯಲು ಆಗುತ್ತಿಲ್ಲ ಇದೊಂದು ಬೇಸರದ ಸಂಗತಿ. ಕ್ರೀಡೆಗೆ ಹೆಚ್ಚು ಒತ್ತು ನೀಡಿ, ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಪ್ರೋತ್ಸಾಹಿಸಲಾಗುವುದು ಎಂದರು ಕ್ರೀಡಾಳುಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರಬೇಕು. ಅತಿ ಹೆಚ್ಚು ಮಳೆಯಿಂದಾಗಿ ಬರದ ಜಿಲ್ಲೆ ಚಿತ್ರದುರ್ಗ ಕೂಡ ನೆರೆಹಾವಳಿಗೆ ತುತ್ತಾಗಿದೆ. ನೆರೆಗೆ ತುತ್ತಾಗಿ ಪ್ರಾಣಹಾನಿ ಆದವರಿಗೆ, ಪೂರ್ಣ ಮನೆ ಕಳೆದುಕೊಂಡವರಿಗೆ ಸರ್ಕಾರ 5 ಲಕ್ಷ ರೂ. ಹಾಗೂ ಭಾಗಶಃ ಮನೆ ಕಳೆದುಕೊಂಡವರಿಗೆ 1 ಲಕ್ಷ ರೂ. ಪರಿಹಾರ ಧನ ಘೋಷಿಸಿದೆ ಎಂದು ಅವರು ಹೇಳಿದರು.

     ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಗೆ ಒತ್ತು ನೀಡಲು ಸರ್ಕಾರದ ಕ್ಯಾಬಿನೆಟ್‍ನಲ್ಲಿ ಚರ್ಚೆ ನಡೆಸಬೇಕು. ರಾಜ್ಯ, ಕೇಂದ್ರ ಸರ್ಕಾರಗಳು ಕ್ರೀಡೆಗೆ ಹೆಚ್ಚಿನ ಅನುದಾನ ನೀಡಿ, ಉತ್ತೇಜಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇಂದಿನ ಮಕ್ಕಳಲ್ಲಿ ಕ್ರೀಡಾಸಕ್ತಿ ಕಡಿಮೆಯಾಗಿದೆ ಕಾರಣ ರಾಜ್ಯದಲ್ಲಿ 48 ಸಾವಿರ ಶಾಲೆಗಳಿದ್ದು, ದೈಹಿಕ ಶಿಕ್ಷಕರನ್ನು ನೇಮಿಸುತ್ತಿಲ್ಲ. ಕೆಲವು ಶಾಲೆಗಳಲ್ಲಿ ದೈಹಿಕ ಶಿಕ್ಷಕರಿದ್ದರೂ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಇದು ದುರಂತ. ಚಿತ್ರದುರ್ಗ ಬಡ ಜಿಲ್ಲೆಯಾಗಿದ್ದು, ಕೆಲವು ಮಕ್ಕಳು ಸರಿಯಾಗಿ ಚಪ್ಪಲಿ, ಶೂ, ಸಮವಸ್ತ್ರ ಹಾಗೂ ದೈಹಿಕ ಶಕ್ತಿ ನೀಡುವಂತಹ ಪೌಷ್ಠಿಕಾಂಶಗಳುಳ್ಳ ಆಹಾರ ಕೊರತೆಯಿಂದ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಜಮೈಕಾ ಎಂಬ ಬಡ ರಾಷ್ಟ್ರದಲ್ಲಿ ಹುಸೇನ್ ಬೋಲ್ಟ್ 3 ಬಾರಿ ಒಲಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗಳಿಸಿರುವ ಅವರ ಸಾಧನೆಗೆ ಆ ದೇಶದ ಸರ್ಕಾರದ ಸಹಕಾರ ಶ್ಲಾಘನೀಯ ಎಂದರು

     ಜಿಲ್ಲೆಯು ವಾಲಿಬಾಲ್, ಬಾಸ್ಕೆಟ್‍ಬಾಲ್‍ನಲ್ಲಿ ದಕ್ಷಿಣ ಭಾರತದಲ್ಲಿಯೇ ಉತ್ತಮ ಸಾಧನೆ ಮಾಡಿದೆ. ದೇಶದಲ್ಲಿ ಎಲ್ಲರು ಕ್ರಿಕೆಟ್‍ಗೆ ಹೆಚ್ಚು ಮಾನ್ಯತೆ ನೀಡುತ್ತಿದ್ದಾರೆ. ದೇಶಿಯ ಕ್ರೀಡೆಗಳಿಗೆ ಮಾನ್ಯತೆ ನೀಡಲು ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಿ.ಎಂ ವಿಶಾಲಾಕ್ಷಿ ನಟರಾಜ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಕೆ. ಅನಂತ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿ.ಪಂ ಸಿಇಒ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ಅರುಣ್, ಉಪವಿಭಾಗಾಧಿಕಾರಿ ವಿ.ಪ್ರಸನ್ನ, ಡಿಡಿಪಿಐ ಕೆ. ರವಿಶಂಕರ್‍ರೆಡ್ಡಿ, ಡಯಟ್‍ನ ಉಪನಿರ್ದೇಶಕ ಕೆ. ಕೋದಂಡರಾಮ, ಕ್ರೀಡಾಕೂಟದ ಕಾರ್ಯದರ್ಶಿ ಹೆಚ್.ಆರ್ ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link