ಕ್ರೀಡೆ ಆರೋಗ್ಯ ವೃದ್ಧಿ ಜೊತೆಗೆ ಓದಿಗೂ ಪೂರಕ

 ದಾವಣಗೆರೆ

        ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗುವುದರಿಂದ ಆರೋಗ್ಯ ವೃದ್ಧಿಯ ಜೊತೆಗೆ ಓದಿನ ಮೇಲೂ ಪೂರಕ ಪರಿಣಾಮ ಬೀರಲಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ  ಪಿ.ಕಣ್ಣನ್ ಅಭಿಪ್ರಾಯಪಟ್ಟರು.

        ನಗರದ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ದಾವಣಗೆರೆ ವಿ.ವಿ. ಅಂತರ ಕಾಲೇಜುಗಳ ಮಹಿಳಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತೊಡಗಿಸಿಕೊಂಡಷ್ಟೂ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯ ಜೊತೆಗೆ ಓದಿನ ಮೇಲೂ ಪೂರಕ ಪರಿಣಾಮವಾಗಲಿದೆ ಎಂದು ಹೇಳಿದರು.

         ಆಟೋಟಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದು ಅತ್ಯವಶ್ಯವಾಗಿದೆ. ಅದರಲ್ಲೂ ಓಟವು ಎಲ್ಲ ಕ್ರೀಡೆಗಳ ಆತ್ಮ ಇದ್ದಂತೆ. ಓಡುವುದರಿಂದ ದೇಹದ ಸಕಲ ಭಾಗಗಳಿಗೂ ಅಗತ್ಯ ಚೈತನ್ಯ ದೊರೆಯಲಿದೆ. ವಯಸ್ಸಾದಂತೆ ಓಡಲು ಸಾಧ್ಯವಾಗದಿದ್ದರೂ ನಡಿಗೆ(ವಾಕ್)ಯ ಮೊರೆ ಹೋಗಬಹುದು ಎಂದರು.

         ಅಧ್ಯಕ್ಷತೆ ವಹಿಸಿದ್ದ ಜವಳಿ ವರ್ತಕ ಹಾಗೂ ಎಸ್‍ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ, ಪ್ರಸ್ತುತ ದಿನಗಳಲ್ಲಿ ಊಟದಿಂದ ಹಿಡಿದು ಗಾಳಿ, ನೀರಿನ ವರೆಗೆ ಎಲ್ಲವೂ ವಿಷಮಯವಾಗಿ, ಪರಿಶುದ್ಧತೆ ಕಳೆದುಕೊಳ್ಳುತ್ತಿವೆ. ಆದ್ದರಿಂದ ಕ್ರೀಡೆಗಳ ಮೊರೆ ಹೋಗಿ ಆರೋಗ್ಯ ವೃದ್ಧಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

          ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ 20ಕ್ಕೂ ಹೆಚ್ಚು ಕಾಲೇಜು ತಂಡಗಳ 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದು, ಕ್ರೀಡಾಕೂಟದಲ್ಲಿ ಕಬಡ್ಡಿ, ವಾಲಿಬಾಲ್, ಟೆನಿಕಾಟ್, ಹ್ಯಾಂಡ್‍ಬಾಲ್, ಥ್ರೋಬಾಲ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಪಂದ್ಯಗಳು ನಡೆಯಲಿವೆ.

          ಕಾರ್ಯಕ್ರಮದಲ್ಲಿ ವಿನಾಯಕ ಎಜುಕೇಷನ್ ಟ್ರಸ್ಟ್‍ನ ಕಾರ್ಯದರ್ಶಿ ಎಂ.ಹೆಚ್.ನಿಜಾನಂದ, ದಾವಣಗೆರೆ ವಿ.ವಿ. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ರಾಜ್‍ಕುಮಾರ್, ದಾವಣಗೆರೆ ವಿ.ವಿ. ದೈಹಿಕ ಶಿಕ್ಷಕರ ಒಕ್ಕೂಟದ ಉಪಾಧ್ಯಕ್ಷ ಸಾಧಿಕ್ ಸಾಬ್, ಬಿ.ಎಸ್.ಸಿ. ಕಾಲೇಜಿನ ಪ್ರಾಶಂಪಾಲ ಬೇತೂರುಮಠ, ಅಥಣಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಕೆ.ರಾಜಶೇಖರ್, ಎಸ್.ಬಿ.ಸಿ. ಕಾಲೇಜಿನ ದೈಹಿಕ ನಿರ್ದೇಶಕ ಅಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು. ಎಸ್.ಬಿ.ಸಿ. ಕಾಲೇಜು ಪ್ರಾಂಶುಪಾಲ ಡಾ.ಕೆ.ಷಣ್ಮುಖ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ವಾತಿ ಪ್ರಾರ್ಥಿಸಿದರು. ಎಂ.ಹೆಚ್.ಪ್ರಸನ್ನರೆಡ್ಡಿ ಸ್ವಾಗತಿಸಿದರು. ಕೃತಿಕಾ ನಿರೂಪಿಸಿದರು. ಮಂಜುನಾಥ್ ಶ್ಯಾಗಲೆ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link