ತುಮಕೂರು
ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ “ವೆಂಡರ್ ಜೋನ್” (ವ್ಯಾಪಾರಿ ವಲಯ) ಸಿದ್ಧಗೊಳಿಸಬೇಕೆಂಬ ಆಶಯದಿಂದ ತುಮಕೂರು ಮಹಾನಗರ ಪಾಲಿಕೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ನಲ್ಮ್) ವಿಭಾಗದ ಅಧಿಕಾರಿಗಳು ಮತ್ತು ಪಟ್ಟಣ ವ್ಯಾಪಾರಿಗಳ ಸಮಿತಿ (ಟಿವಿಸಿ) ಸದಸ್ಯರುಗಳ ತಂಡವು ಸ್ಥಳಪರಿಶೀಲನೆ ನಡೆಸಿ, ಕೆಲವೊಂದು ಸ್ಥಳಗಳನ್ನು ಗುರುತಿಸಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತರಿಗೆ ವರದಿ ಸಲ್ಲಿಸಿದೆ.
ಈ ವರದಿ ಆಧರಿಸಿ ಪಾಲಿಕೆಯ ಆಯುಕ್ತ ಟಿ.ಭೂಬಾಲನ್ ಅವರು ಸದ್ಯದಲ್ಲೇ ಮತ್ತೊಮ್ಮೆ ಸ್ಥಳಪರಿಶೀಲನೆ ನಡೆಸಿ ಬಳಿಕ “ವೆಂಡರ್ ಜೋನ್” ಸ್ಥಳಗಳಿಗೆ ಅನುಮೋದನೆ ನೀಡುವರು. ನಂತರದಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯು “ವೆಂಡರ್ ಜೋನ್” ಸ್ಥಳವನ್ನು ಆಯಾ ವ್ಯಾಪಾರಕ್ಕೆ ಅನುಗುಣವಾಗಿ ಅತ್ಯಾಧುನಿಕ ವಿನ್ಯಾಸ ರೂಪಿಸಿ, ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಿದೆ.
ಗುರುತಿಸಲಾದ ಸ್ಥಳಗಳು
ಡೇ-ನಲ್ಮ್ ವಿಭಾಗದ ಸಮುದಾಯ ಸಂಘಟನಾಧಿಕಾರಿ ರಾಮಾಂಜಿನಪ್ಪ, ಅಭಿಯಾನ ವ್ಯವಸ್ಥಾಪಕ ಅಂಜನಮೂರ್ತಿ, ಸ್ಮಾರ್ಟ್‍ಸಿಟಿ ಕಂಪನಿಯ ಸಹಾಯಕ ಎಕ್ಸಿಕ್ಯುಟೀವ್ ಇಂಜಿನಿಯರ್ ರಶ್ಮಿ, ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯರುಗಳಾದ ನರಸಿಂಹಮೂರ್ತಿ, ಸುಬ್ರಹ್ಮಣ್ಯ, ಸೈಯದ್ ಅಲ್ತಾಫ್, ಭದ್ರೇಗೌಡ, ಅಹಮದ್ ಇಬ್ರಾಹಿಂ ಅವರುಗಳನ್ನೊಳಗೊಂಡ ತಂಡವು ಜುಲೈ 10 ರಂದು ನಗರದಲ್ಲಿ ಸ್ಥಳಪರಿಶೀಲನೆ ಮಾಡಿದೆ. ನಂತರ ವರದಿ ನೀಡಿದ್ದು, ಸ್ಥಳ, ವ್ಯಾಪಾರದ ಸಮಯ, ಆ ಸ್ಥಳದಲ್ಲಿ ಮಾಡಬಹುದಾದ ವ್ಯಾಪಾರದ ಸ್ವರೂಪ ಕುರಿತು ಅದರಲ್ಲಿ ಪ್ರಸ್ತಾಪಿಸಲಾಗಿದೆ. ಸದರಿ ವರದಿಯಲ್ಲಿರುವ ಮಾಹಿತಿ ಕೆಳಕಂಡಂತಿದೆ:-
1) ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ವಿ.ಎಸ್.ಸಭಾ ಭವನದ ಮುಂದೆ ಫುಟ್‍ಪಾತ್‍ನಲ್ಲಿ ತರಕಾರಿ, ಹಣ್ಣು ಮತ್ತು ಇತರೆ ಸಾಮಗ್ರಿ ಮಾರಾಟಕ್ಕೆ ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಅವಕಾಶ,
2) ಸೋಮೇಶ್ವರಪುರಂ ಮುಖ್ಯರಸ್ತೆಯ ಕೆಂಪಣ್ಣನ ಅಂಗಡಿ ಸರ್ಕಲ್ ಬಳಿ ಪಾಲಿಕೆಗೆ ಸೇರಿದ ಹಳೆಯ ಕಾಂಪ್ಲೆಕ್ಸ್,
3) ಇದೇ ಕೆಂಪಣ್ಣನ ಅಂಗಡಿ ಎದುರು ಬದಿ ಬಸ್ ಸ್ಟಾಪ್ ಇರುವ ಖಾಲಿ ಜಾಗ,
4) ಮಹಾತ್ಮಗಾಂಧಿ ರಸ್ತೆಯಲ್ಲಿ ಬಾಲಭವನದ ಎದುರು ಸಾಗರ್ ಮಾರ್ಕೆಟ್ ಪಕ್ಕದ ಜಾಗದಲ್ಲಿ ಚಪ್ಪಲಿ, ಬ್ಯಾಗ್, ಬಟ್ಟೆ ವ್ಯಾಪಾರಕ್ಕೆ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ ಅವಕಾಶ,
5)ಮಹಾತ್ಮ ಗಾಂಧಿ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ತೆರಳುವ ಕ್ರಾಸ್‍ನಲ್ಲಿ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಮಹಿಳೆಯರಿಗೆ ಸಂಬಂಧಿಸಿದ ಸಾಮಗ್ರಿಗಳ ಮತ್ತು ದಿನಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ,
6)ಮಂಡಿಪೇಟೆಯ ಮಾರಿಯಮ್ಮ ನಗರದ ಇಂದಿರಾಕ್ಯಾಂಟೀನ್ ಹತ್ತಿರ ಸ್ಕ್ರಾಪ್ ವಸ್ತುಗಳು, ತರಕಾರಿ , ಟೀ ಅಂಗಡಿ ಇತ್ಯಾದಿಗೆ ಅವಕಾಶ,
7)ಕೃಷ್ಣರಾಜೇಂದ್ರ ಬಡಾವಣೆಯ ಕಾರಿಯಪ್ಪ ರಸ್ತೆಯಲ್ಲಿ ಶ್ರೀರಾಮ ಮಂದಿರದ ಪಕ್ಕದ ಕನ್ಸರ್‍ವೆನ್ಸಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಅವಕಾಶ,
8)ಕೋತಿತೋಪು ರಸ್ತೆಯ ಬೆಸ್ಕಾಂ ಕಚೇರಿ ಕಾಂಪೌಂಡ್ ಮುಂಭಾ
ಗ ಅಪರಾಹ್ನ 12 ಗಂಟೆಯಿಂದ ರಾತ್ರಿ 10-30 ರವರೆಗೆ ಊಟ, ತಿಂಡಿ, ಚಾಟ್ಸ್ ಮತ್ತು ಹಣ್ಣುಗಳ ಮಾರಾಟಕ್ಕೆ ಅವಕಾಶ,
9)ಜಿಲ್ಲಾಧಿಕಾರಿ ಕಚೇರಿ ಬಳಿ ಅಮಾನಿಕೆರೆ ಬದಿಯಲ್ಲಿ ಊಟ-ತಿಂಡಿ ಮಾರಾಟಕ್ಕೆ ಅವಕಾಶ,
10)ಅಶೋಕ ರಸ್ತೆಯ ಖಾಸಗಿ ಬಸ್ ನಿಲ್ದಾಣದಲ್ಲಿ (ಬಾಂಬೆ ಶಾಪಿಂಗ್ ಸೆಂಟರ್) ಬಟ್ಟೆ ವ್ಯಾಪಾರಕ್ಕೆ ಅವಕಾಶ,
11) ಖಾಸಗಿ ಬಸ್ ನಿಲ್ದಾಣದ ನಿರ್ಗಮನ ದ್ವಾರದ ಪಕ್ಕ ಇರುವ ಖಾಲಿ ಜಾಗದಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 9 ಗಂಟೆಯವರೆಗೆ ಊಟ-ತಿಂಡಿಗೆ ಅವಕಾಶ,
12)ಶಿರಾಗೇಟ್‍ನ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಊಟ-ತಿಂಡಿಗೆ ಅವಕಾಶ.