ಚಳ್ಳಕೆರೆ
ವಿದ್ಯಾರ್ಥಿಗಳಲ್ಲಿ ಹಲವಾರು ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಅವುಗಳನ್ನು ಗುರುತಿಸಿ ಹೊರ ತರುವ ಕಾರ್ಯವನ್ನು ಶಿಕ್ಷಕ ವೃಂದ ಮಾಡಬೇಕಿದೆ. ವಿಶೇಷವಾಗಿ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ವಿವಿಧ ಕಲೆಯ ರೂಢಿಸಿಕೊಂಡಿರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿದಲ್ಲಿ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ರೂಪಗೊಳ್ಳುತ್ತಾರೆ. ಇಂತಹ ಹಲವಾರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಂಪೂರ್ಣ ಹೊಣೆಯನ್ನು ಶಿಕ್ಷಣ ಇಲಾಖೆ ಹೊರಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.
ಅವರು, ಶನಿವಾರ ತಾಲ್ಲೂಕಿನ ತಳಕು ಹೋಬಳಿಯ ಮಿಟ್ಲಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಎಸ್.ರಮೇಶ್ ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿ ನಡೆದ ಪ್ರತಿಭಾಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಕಂಠಪಾಠ ತೃತೀಯ, ಲಘು ಸಂಗೀತ ದ್ವಿತೀಯ ಮತ್ತು ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಈ ವಿದ್ಯಾರ್ಥಿಯನ್ನು ಅಭಿನಂದಿಸಿದರು.
ಮುಖ್ಯ ಶಿಕ್ಷಕ ಟಿ.ಹರೀಶ್‍ಕುಮಾರ್ ಮಾತನಾಡಿ, ತಾಲ್ಲೂಕಿನ ಗಡಿಭಾಗದಲ್ಲಿರುವ ನಮ್ಮ ಈ ಶಾಲೆ ಆಂಧ್ರ ಪ್ರದೇಶದ ಗಡಿಗೆ ಕೆಲವೇ ಕಿ.ಮೀ.ದೂರವಿದೆ. ಆದರೂ ಸಹ ಶಾಲೆಯ ಅನೇಕ ಬಡ ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕತಿಕ ಹಾಗೂ ಶಿಕ್ಷಣ ಕಲಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುವುದು ನಮಗೆಲ್ಲಾ ಹೆಮ್ಮೆ ಎಂದರು. ಶಿಕ್ಷಕ ಕೆ.ತಿರುಮಲ ಸ್ವಾಗತಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








