ಸಾಂಕ್ರಾಮಿಕ ರೋಗ ತಡೆಗೆ ಸ್ವಚ್ಚತೆಯ ಅರಿವು ಮೂಡಿಸಿ : ವಿನೋತ್ ಪ್ರಿಯಾ

ಚಿತ್ರದುರ್ಗ

  ಮನೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು, ಕೀಟಜನ್ಯ ರೋಗಗಳು ಹಾಗೂ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಕರೆನೀಡಿದರು.

   ನಗರದ 09ನೇ ವಾರ್ಡ್ ತಿಪ್ಪಾರೆಡ್ಡಿನಗರದ ಕೊಳಚೆ ಪ್ರದೇಶದಲ್ಲಿ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಆರೋಗ್ಯ ಇಲಾಖೆ ಏರ್ಪಡಿಸಿದ ” ನಾಗರೀಕರಿಗೊಂದು ಸವಾಲ್ ” ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಈ ಮೊದಲು ತಿಂಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಇದೀಗ ಕನಿಷ್ಟ ವಾರಕ್ಕೊಮ್ಮೆಯಾದರೂ ನೀರು ಬಿಡಲಾಗುತ್ತಿದೆ. ರಸ್ತೆಗಳ ಬದಿ ಬಾಕ್ಸ್ ಚರಂಡಿ ಕೂಡ ನಿರ್ಮಾಣವಾಗಿದೆ.

     ಈಗ ನಿಮ್ಮ ಮುಂದಿರುವ ಸವಾಲು ಎಂದರೆ ಸ್ವಚ್ಛತೆಯನ್ನು ಕಾಪಾಡಿಕೊಂಡು, ಸಾಂಕ್ರಾಮಿಕ ರೋಗಗಳು ಬಾರದ ಹಾಗೆ ಮನೆಯ ಸುತ್ತಮುತ್ತ ಸ್ವಚ್ಛ ವಾತವಾರಣ ನಿರ್ಮಿಸುವುದು. ಸೊಳ್ಳೆ ಚಿಕ್ಕದಾದರೂ ಇವುಗಳು ಹರಡುವ ಡೆಂಗ್ಯೂ ಚಿಕುಂಗುನಿಯ ರೋಗಗಳು ಅಪಾಯಕಾರಿ. ನಿರ್ಲಕ್ಷ ತೋರಿದರೆ ಮಾರಣಾಂತಿಕ.

    ಸೊಳ್ಳೆಗಳನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಯವರು ನೀಡುವ ಸಂದೇಶಗಳನ್ನು ತಪ್ಪದೇ ಪಾಲಿಸಬೇಕು. ಕೀಟಜನ್ಯ ರೋಗಗಳು ನಿಯಂತ್ರಿಸಲು ನಿಮ್ಮ ಸಹಭಾಗಿತ್ವ, ಸಹಕಾರ ಅವಶ್ಯಕತೆ ಇದೆ. ಇದರಿಂದ ನಿಮ್ಮ ಕುಟುಂಬಕ್ಕೆ ಆರ್ಥಿಕ ಹೊರೆಯನ್ನು ತಪ್ಪಿಸಬಹುದು ಎಂದರು.

    ನಗರಸಭಾ ಸದಸ್ಯೆ ಬಾಲಮ್ಮ ಅವರು ಮಾತನಾಡಿ, ಮನೆಯಲ್ಲಿ ಮಹಿಳೆಯರು ನೀರು ಸಂಗ್ರಹ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ರೋಗಮುಕ್ತವಾಗಿಸಿ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷಾ ಮಾತನಾಡಿ, ಚೇಳುಗುಡ್ಡ ಪ್ರದೇಶದಲ್ಲಿ ಸೊಳ್ಳೆಗಳ ಲಾರ್ವಾ ಸಾಂದ್ರತೆ ಹೆಚ್ಚಾಗಿರುವ ಕಾರಣ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬಂರುತ್ತಿದೆ, ನಾಗರೀಕರಿಗೊಂದು ಸವಾಲ್ ಕಾರ್ಯಕ್ರಮದ ಮೂಲಕ ಮನೆ ಮನೆ ಭೇಟಿ ಲಾರ್ವಾ ಸಮೀಕ್ಷೆ, ಜ್ವರ ಸಮೀಕ್ಷೆಯೊಂದಿಗೆ ಕೀಟಜನ್ಯ ರೋಗಗಳ ಮಾಹಿತಿ ಸೊಳ್ಳೆನಿಯಂತ್ರಣ ಕ್ರಮಗಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.

    ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ. ಜಯಮ್ಮ ಮಾತನಾಡಿ, 2018 ರಲ್ಲಿ 108 ಡೆಂಗ್ಯೂ , 161 ಚಿಕುಂಗುನಿಯ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ 436 ಡೆಂಗ್ಯೂ, 196 ಚಿಕುಂಗುನಿಯ ಪ್ರಕರಣ ವರದಿಯಾಗಿದೆ ಹಾಗಾಗಿ ಸೊಳ್ಳೆ ಉತ್ಪತ್ತಿ ತಾಣಗಳಾದ ನೀರು ಸಂಗ್ರಹಿಸುವ ಡ್ರಮ್, ತೊಟ್ಟಿ ಇತರ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆದು ನೀರು ಸಂಗ್ರಹಿಸಿ ಮುಚ್ಚಳವನ್ನು ಮುಚ್ಚಿರಿ, ಘನತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ, ಮಲಗುವಾಗ ತಪ್ಪದೇ ಸೊಳ್ಳೆಪರದೆಗಳನ್ನು ಉಪಯೋಗಿಸಿ ಎಂದರು.

    ಕಾರ್ಯಕ್ರಮದಲ್ಲಿ ಕೊಳಚೆ ಪ್ರದೇಶದ ಸುತ್ತ ಜಿಲ್ಲಾಧಿಕಾರಿಗಳವರ ಮುಂದಾಳತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಾಗರೀಕರು ಒಂದು ಸುತ್ತು ಜಾಥ ನಡೆಸಿ ಜಾಗೃತಿ ಮೂಡಿಸಲಾಯಿತು. ನಂತರ ಡಿ.ಹೆಚ್.ಒ., ಕಾರ್ಯಕ್ರಮ ಅನುಷ್ಠಾನಧಿಕಾರಿಗಳು, ಆರೋಗ್ಯ ಸಹಾಯಕರು ಮನೆ ಮನೆ ಭೇಟಿ ಮಾಡಿ ಅಂತರ್ ವೈಯ್ಯಕ್ತಿಕ ಸಂವಹನೆ ಮೂಲಕ ಕೀಟಜನ್ಯ ರೋಗಗಳ ಬಗ್ಗೆ ಅರಿವು ಮೂಡಿಸಿದರು.

    ಕಾರ್ಯಕ್ರಮದಲ್ಲಿ ಡಾ.ಬಿ.ವಿ.ಗಿರೀಶ್ ತಾಲ್ಲೂಕು ವೈದ್ಯಾಧಿಕಾರಿ ಚಿತ್ರದುರ್ಗ, ಡಾ.ಮುಸ್ತಫಾ ನಗರ ಆರೋಗ್ಯ ಕೇಂದ್ರದ ವೈದ್ಯರು, ನಂದಿನಿ ಕಡಿ, ಎನ್.ಎಸ್.ಮಂಜುನಾಥ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಖಾಸಿಮ್ ಸಾಬ್, ಅಬುಸ್ವಾಲೇಹ, ಹನುಮಂತಪ್ಪ, ಮೂಗಪ್ಪ ಜಾನಕಿ , ಗಂಗಾಧರ, ಭಾಗೇಶ್, ಮಾರುತಿ ಶಭಾನ, ಪೂರ್ಣಿಮ ಆಶಾ ಕಾರ್ಯಕರ್ತರು, ನಾಗರೀಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap