ಬೆಂಗಳೂರು
ಬಿಬಿಎಂಪಿಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 17 ಸಾವಿರ ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ತಿಳಿಸಿದರು.
ನಗರದ ಅರಮನೆ ರಸ್ತೆಯ ಕೊಂಡಜ್ಜಿ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿದ್ದ, ಎಂ.ಎ.ಚೆಲಯ್ಯನವರ 75ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಬಿಬಿಎಂಪಿ ವ್ಯಾಪ್ತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರಾಗಬೇಕು ಎನ್ನುವುದು ನನ್ನ ಆಶಯ ಎಂದು ಹೇಳಿದರು
ನೀರಿನ ಸಂರಕ್ಷಣೆ, ಮಿತ ಬಳಕೆ, ಅರಣ್ಯೀಕರಣದ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರು ನೀರಿನ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಬಿಬಿಎಂಪಿ ವತಿಯಿಂದ ಈಗಾಗಲೇ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಜಲ ಸಂರಕ್ಷ ಣೆಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಭಾರತ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, ದೇಶ ವ್ಯಾಪ್ತಿಯ ಮಹಾನಗರ ಗಳಲ್ಲಿನ ಶಾಲಾ ಮಕ್ಕಳು ಈಗಾಗಲೇ ಭಾರತ ಸ್ಕೌಟ್ ಮತ್ತು ಗೈಡ್ಸ್ ಪಾಲುದಾರರು ಆಗುತ್ತಿದ್ದಾರೆ.ಇನ್ನೂ, ಈ ವಿದ್ಯಾರ್ಥಿಗಳು ಸಾಮಾಜಿಕ ಜಾಗೃತಿ ಮೂಡಿಸುತ್ತಾರೆ ಎಂದು ಹೇಳಿದರು.
ಎಂ.ಎ.ಚೆಲ್ಲಯ್ಯ ಮಾತನಾಡಿ, ನೀರು ಉಳಿಸಿ, ಪರಿಸರ ಸಂರಕ್ಷಿಸಿ ಅಭಿಯಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ಈಗಾಗಲೇ,ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ಈ ಅಭಿಯಾನದಲ್ಲಿ ಪಾಲ್ಗೊಂಡು, ಪ್ರತಿ ಮನೆಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ ಎಂದರು.ಕಲ್ಯಾಣ ಮಂಟಪ, ಸಮಾರಂಭದಲ್ಲಿ ಬರೋಬ್ಬರಿ 30ರಷ್ಟು ಆಹಾರ ನಷ್ಟ ವಾಗುತ್ತದೆ. ಈ ಬಗ್ಗೆ ವಿಶೇಷ ಜಾಗೃತಿ ಮೂಡಿಸಬೇಕು, ಜೊತೆಗೆ, ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ.ಗೊ.ರು.ಚನ್ನಬಸಪ್ಪ, ವಿಧಾನ ಪರಿಷತ್ತಿನ ಸದಸ್ಯ ಅ.ದೇವೇಗೌಡ, ಬಿಬಿಎಂಪಿ ಸದಸ್ಯ ಶಿವರಾಜ್, ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಪ್ರಮುಖರಿದ್ದರು.