ತಿಪಟೂರು
ಮಾನವರು ಸ್ವಾರ್ಥಿಗಳಾಗದೆ ತಮ್ಮಲ್ಲಿರುವ ಜ್ಞಾನ, ಆಧ್ಯಾತ್ಮಿಕ ವಿಚಾರಧಾರೆಗಳನ್ನು ಇನ್ನೊಬ್ಬರಿಗೆ ಹಂಚುವುದರಿಂದ ನಮ್ಮ ಜ್ಞಾನವು ಇನ್ನು ವಿಸ್ತಾರವಾಗುತ್ತಾ ಹೋಗುತ್ತದೆ. ಇಂತಹ ಕೆಲಸವನ್ನು ಕನಕದಾಸರು ಮಾಡಿ ಇಂದು ದಾಸಶ್ರೇಷ್ಠರಾಗಿದ್ದಾರೆಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ಬಯಲು ರಂಗಮಂದಿರದಲ್ಲಿ ಶುಕ್ರವಾರ ತಾಲ್ಲೂಕಿನ ಕುರುಬರ ಸಂಘದ ವತಿಯಿಂದ 532 ನೇ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿರುವ ಒಳ್ಳೆಯ ವಿಚಾರಗಳನ್ನು ಇನ್ನೊಬ್ಬರಿಗೆ ತಿಳಿಸಬೇಕು. ಅಂತಹ ಕೆಲಸವನ್ನು ದಾಸ ಶ್ರೇಷ್ಠ ಕನಕದಾಸರು ಮಾಡಿದರು. ಆದ್ದರಿಂದಲೇ ಅವರು ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆಂದು ತಿಳಿಸಿದರು.
ದಾಸನಾಗು ವಿಶೇಷನಾಗು :
ಉಪವಿಭಾಗಾಧಿಕಾರಿ ನಂದಿನಿ ಮಾತನಾಡಿ, ಕನಕದಾಸರು ರಚಿಸಿರುವ ದಾಸನಾಗು ವಿಶೇಷನಾಗು ಕೀರ್ತನೆಯಲ್ಲಿ ಎಷ್ಟು ವರ್ಷಗಳ ಕೊನೆಗೆ ಈ ಮಾನವ ಜನ್ಮ ದೊರೆತಿದೆ. ಇಂತಹ ಮಾನವ ಜನ್ಮವನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ ಎನ್ನುವಂತೆ ನಮ್ಮಲ್ಲಿರುವ ತಪ್ಪುಗಳನ್ನು ಗುರುತಿಸಿಕೊಂಡು ನಾನು ಮೊದಲು ಉತ್ತಮನಾಗಬೇಕು.
ಅದನ್ನು ಬಿಟ್ಟು ಅವರು ಸರಿಯಿಲ್ಲ ಇವರು ಸರಿಇಲ್ಲೆನ್ನುವುದು ತಪ್ಪು ಎಂದ ಅವರು, 12ನೇ ಶತಮಾನದಲ್ಲಿ ವಚನಗಳಿಂದ ಮಹಾಮನೆ ನಿರ್ಮಾಣವಾಯಿತು. ಆದರೆ ಅದನ್ನು ತಂಬುರಿ ತೆಗೆದುಕೊಂಡು ಮನೆ, ಮನಗಳಿಗೆ ತನ್ನ ಕೀರ್ತನೆಗಳಿಂದ ಹರಿನಾಮಸ್ಮರಣೆಯನ್ನು ಮಾಡಿ ಸಾಮಾಜಿಕ ವಿಡಂಬನೆಯ ಕೀರ್ತನೆಗಳನ್ನು ರಚಿಸಿ ಸಮಾಜ ಸುಧಾರಣೆಯತ್ತ ಸಾಗಿದ ಮಹನೀಯರು. ಇಂದು ನಾವು ಮಕ್ಕಳು ಸುಮ್ಮಲಿರಲೆಂದು ಮೊಬೈಲ್ ಕೊಡುತ್ತಿದ್ದೇವೆ.
ಇದು ಬಹಳ ಅಪಾಯಕಾರಿ. ಮಕ್ಕಳಿಗಾಗಿ ಸಮಯವನ್ನು ಮೀಸಲಿಟ್ಟು ಅವರಿಗೆ ಒಂದು ಕೀರ್ತನೆಯನ್ನು ಹೇಳಿ ಅದರ ತಾತ್ಪರ್ಯವನ್ನು ತಿಳಿಸಿ, ಇದರಿಂದ ಮಕ್ಕಳ ಮನಸ್ಸು ಹಗುರವಾಗುವುದರ ಜೊತೆಗೆ ನಿಮ್ಮ ಒತ್ತಡಗಳು ಕಡಿಮೆಯಾಗುತ್ತವೆಂದು ತಿಳಿಸಿದರು.ಜಿ.ಪಂ ಸದಸ್ಯ ಜಿ.ನಾರಾಯಣ್ ಮಾತನಾಡಿ, ದಾಸ ಶ್ರೇಷ್ಠರು ಹಾಕಿಕೊಟ್ಟ ದಾರಿಯಲ್ಲಿ ಇಂದು ನಾವುಗಳು ಸಾಗಬೇಕಿದೆ, ನೂರಾರು ವರ್ಷಗಳ ಹಿಂದೆಯೇ ಧಾರ್ಮಿಕ ಸುಧಾರಣೆ ಜೊತೆಗೆ ಸಾಮಾಜಿಕ ಸುಧಾರಣೆ ಮಾಡಿ ಜಾತಿ ಪದ್ದತಿಯ ನಿರ್ಮೂಲನೆಗೆ ಶ್ರಮಿಸಿದರು. ಜನರಾಡುವ ಭಾಷೆಯಲ್ಲಿ ಅನೇಕ ಕೀರ್ತನೆಗಳನ್ನು ರಚನೆ ಮಾಡಿ ಜನ ಸಾಮಾನ್ಯರ ಮನದಲ್ಲಿ ಉಳಿಯುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂದಿಗೂ ಕೂಡ ಇವರ ವಿಚಾರಧಾರೆ ಪ್ರಸ್ತುತ ಎಂದು ಹೇಳಿದರು.
ನಗರದ ಗ್ರಾಮದೇವತೆ ಕೆಂಪಮ್ಮ ದೇವಾಲಯದಿಂದ ಸರ್ವಾಲಂಕಾರಗೊಂಡಿದ್ದ ವಾಹನದಲ್ಲಿ ಬೀರಲಿಂಗೇಶ್ವರ ಸ್ವಾಮಿ ಮತ್ತು ಉಡುಪಿಯ ಮಂಟಪದ ಪ್ರತಿಕೃತಿಯಲ್ಲಿ ಕನಕದಾಸರ ವಿಗ್ರಹವನ್ನು ಪ್ರತಿಷ್ಠಾಪಿಸಿ ಜನರ ಹೃನ್ಮನಗಳನ್ನು ಸೆಳೆಯವಂತಿತ್ತು. ಇದರ ಜೊತೆಗೆ ವಿವಿಧ ಸಾಂಸ್ಕøತಿಕ ಕಲಾತಂಡಗಳೊಂದಿಗೆ ಕೀಲುಕುದರೆ, ಬೊಂಬೆಕುಣಿತ, ಡೊಳ್ಳುಕುಣಿತದೊಂದಿಗೆ ನಗರದ ರಾಜಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ ರಂಗಮಂದಿರವನ್ನು ಪ್ರವೇಶಿಸಿತು.
ಮಹಾಲಿಂಗಪ್ಪ ಕನಕದಾಸರ ಕುರಿತು ದೀರ್ಘವಾದ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಅಧ್ಯಕ್ಷ ಶಿವಸ್ವಾಮಿ, ಜಿ.ಪಂ.ಸದಸ್ಯರಾದ ಭಾಗ್ಯಮ್ಮ ಗೋವಿಂದಪ್ಪ, ಮಾಜಿ ಎಂ.ಎಲ್.ಸಿ ಡಾ.ಹುಲಿನಾಯ್ಕರ್, ಜನಸ್ಪಂದನ ಟ್ರಸ್ಟ್‍ನ ಅಧ್ಯಕ್ಷ ಸಿ.ಬಿ.ಶಶಿಧರ್, ಶಾಂತಕುಮಾರ್, ತಾ.ಕ.ಜ ಅಧ್ಯಕ್ಷ ಗಂಗಾಧರ್, ಲಿಂಗರಾಜು, ನಗರಸಭಾ ಸದಸ್ಯರು ತಾ.ಪಂ ಸದಸ್ಯರು ಸಮಾಜದ ಮುಖಂಡರು ಹಾಗೂ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ