ದಾವಣಗೆರೆ:`
ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿ, ಉದ್ಯಾನಗಳಲ್ಲಿ ನಿರ್ಮಾಣವಾಗುತ್ತಿರುವ ಜಿಮ್‍ಗಳಿಗೆ ಬಂದಿರುವ ಪರಿಕರಗಳನ್ನು ಶಾಸಕ ಎಸ್.ಎ.ರವೀಂದ್ರನಾಥ್ ವೀಕ್ಷಿಸಿ, ಪರಿಶೀಲನೆ ನಡೆಸಿದರು.
ಭಾನುವಾರ ಬೆಳಿಗ್ಗೆ ನಗರ ಸಂಚಾರ ನಡೆಸಿದ ಶಾಸಕ ಎಸ್.ಎ.ರವೀಂದ್ರನಾಥ್ ಅವರು ದಾವಣಗೆರೆಯ ವಿದ್ಯಾನಗರದ ಹೈಟೆಕ್ ಪಾರ್ಕ್‍ನಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ನೂತನ ಕಾಲೇಜ್ ಸಮೀಪ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು. ಅಲ್ಲದೆ, ಆಂಜಿನೇಯ ಬಡಾವಣೆಯ ಪಾರ್ಕ್‍ನಲ್ಲಿ ಅಳವಡಿಸಲಾದ ಜಿಮ್‍ನ ಸಲಕರಣೆಗಳು, ಡಾಂಗೆ ಪಾರ್ಕ್‍ನಲ್ಲಿ ಸುಮಾರು 60 ಲಕ್ಷ ರೂ.ಗಳಲ್ಲಿ ಮಲ್ಟಿಜಿಮ್‍ನ ಪರಿಕರಗಳನ್ನು ವೀಕ್ಷಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ತಾಕೀತು ಮಾಡಿದರು.
ಕೆಟಿಜೆ ನಗರದ 17 ಮತ್ತು 18ನೇ ವಾರ್ಡ್‍ನಲ್ಲಿನ ಬಾಕ್ಸ್ ಚರಂಡಿ, ಸರಸ್ವತಿ ನಗರದಲ್ಲಿ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿ, ಆವರಗೆರೆಯಲ್ಲಿ ನಿರ್ಮಾಣ ಆಗುತ್ತಿರುವ ರೂ. 40 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ ಕಾಮಗಾರಿಗಳನ್ನು ಸಹ ವೀಕ್ಷಿಸಿದರು.
ಇಂದಿರಾ ಕ್ಯಾಂಟಿನ್‍ಗೆ ಭೇಟಿ:
ಹೊಸ ಬಸ್ ನಿಲ್ದಾಣದ ಸಮೀಪದಲ್ಲಿರುವ ಇಂದಿರಾ ಕ್ಯಾಂಟಿನ್‍ಗೆ ತೆರಳಿದ ಶಾಸಕರು, ಅಲ್ಲಿನ ಸ್ವಚ್ಛತೆ ವೀಕ್ಷಿಸಿದರು. ಬಡವರು ಹೆಚ್ಚಾಗಿ ಬರುವ ಇಂಥ ಕ್ಯಾಂಟಿನ್‍ನಲ್ಲಿ ಗುಣಮಟ್ಟದ ಆಹಾರ ನೀಡಬೇಕು ಹಾಗೂ ಆಹಾರದಲ್ಲಿ ತರಕಾರಿ ಹೆಚ್ಚಾಗಿ ಬಳಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಡಿ.ಕೆ.ಕುಮಾರ್, ಬಿಜೆಪಿ ಮುಖಂಡರಾದ ಕಡ್ಲೇಬಾಳು ಧನಂಜಯ್ಯ, ಶಿವರಾಜ್ ಪಾಟೀಲ್, ಬಾತಿ ವೀರೇಶ್, ಸಂಕೋಳ್ ಚಂದ್ರಶೇಖರ್, ಕೆ.ಎನ್.ಕಲ್ಲೇಶ್, ಪಾಲಿಕೆ ಇಂಜಿನಿಯರ್‍ಗಳಾದ ಭಾರತಿ, ರವಿ, ಅಣಜಿ ನಾಗರಾಜ್, ಮಂಜುಳಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ