ಶ್ರೀ ಕೋಡಿ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವ

ತುರುವೇಕೆರೆ:

      ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಕೋಡಿ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಬಹಳ ವಿಜೃಂಭಣೆಯಿಂದ ನೆರವೇರಿತು.

       ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಶುಭ ಗೋದೋಳಿ ಲಗ್ನದಲ್ಲಿ ಶ್ರೀ ವೀರಭದ್ರಸ್ವಾಮಿಯವರ ಹಾಗೂ ಭದ್ರಕಾಳಿಯಮ್ಮನವರ ಕಲ್ಯಾಣೋತ್ಸವವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಭಾನುವಾರ ಮದ್ಯಾಹ್ನ 2 ಗಂಟೆಗೆ ಸರಿಯಾಗಿ ವಿರಕ್ತ ಮಠದ ಶ್ರೀ ಶ್ರೀ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿ ಹಾಗೂ ಮಾಗಡಿ ಜಡೆದೇವರ ಮಠಾಧ್ಯಕ್ಷರಾದ ಶ್ರೀ ಶ್ರೀ ಇಮ್ಮಡಿ ಬಸವರಾಜ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಲಿಂಗದ ವೀರರ ಕುಣಿತ, ಧ್ವಜ ಕುಣಿತದೊಂದಿಗೆ ಶ್ರೀ ವೀರಭದ್ರಸ್ವಾಮಿಯವರ ರಥೋತ್ಸವವು ವೈಭವಯುತವಾಗಿ ನೆರವೇರಿತು.

       ದೇವರ ಅರ್ಪಿಸಿದ್ದ ಹೂವಿನ ಹಾರವನ್ನು 30 ಸಾವಿರ ರೂ.ಗಳಿಗೆ ಶ್ರೀಮತಿ ಸುಜಾತ ಷಣ್ಮುಖಸ್ವಾಮಿಯವರು ಹರಾಜು ಮೂಲಕ ಪಡೆದುಕೊಳ್ಳುವ ಮೂಲಕ ಭಕ್ತಿಭಾವ ಮೆರೆದರು. ಆಗಮಿಕ ಕಲ್ಯಾಣಸ್ವಾಮಿ, ಚಂದ್ರಶೇಖರ್ ಹಾಗೂ ಟಿ.ಆರ್. ಮಂಜುನಾಥ್ ಧಾನಿಗಳಿಂದ ಶ್ರೀ ಕೋಡಿ ಬಸವೇಶ್ವರ ಸ್ವಾಮಿಗೆ ಧರಿಸಿದ್ದ ನೂತನ ಬೆಳ್ಳಿ ಮುಖವಾಡ ಭಕ್ತರ ಕಣ್ಮನ ತಣಿಸಿತು.

         ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಪಾನಕ, ಫಲಹಾರ, ರಸಾಯಣ, ಮಜ್ಜಿಗೆ ವಿತರಿಸಿದರೆ, ದೇವಸ್ಥಾನ ಆಡಳಿತ ಮಂಡಳಿಯಿಂದ ಬಂದಂತ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶ್ರೀ ಬಸವೇಶ್ವರ ಯುವಕ ಸಂಘ, ಶ್ರೀ ವೀರಶೈವ ಸಮಾಜ ಹಾಗೂ ಶ್ರೀ ಮಹಿಳಾ ಸಮಾಜದ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮನೋಜ್ಞವಾಗಿತ್ತು. ಸೋಮವಾರ ಉಯ್ಯಾಲೋತ್ಸವ, ಗೌರಿ ಗಜಾನನ ಉತ್ಸವ ಜರುಗಲಿದೆ.ಈ ಸಂಧರ್ಭದಲ್ಲಿ ಅನೇಕ ಗಣ್ಯರು, ಜನಪ್ರತಿನಿಧಿಗಳು, ಸೇರಿದಂತೆ ತುರುವೇಕೆರೆ ಪಟ್ಟಣದ ಸಾವಿರಾರು ಭಕ್ತರು ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link