ಚಳ್ಳಕೆರೆ
ತಾಲ್ಲೂಕಿನ ಪರಶುರಾಮಪುರ ಬ್ಯಾರೇಜ್ ಬಾಗಿನ ಅರ್ಪಿಸಲು ಆಗಮಿಸಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲುರವರು ಕೊರೋನಾ ವೈರಾಣು ನಿಯಂತ್ರಣದಲ್ಲಿ ಸರ್ಕಾರದ ನಿಯಮಗಳಲ್ಲೇ ಉಲ್ಲಂಘಿಸಿದ್ದಾರೆಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಾಜ್ಯದಲ್ಲಿ ಲಾಕ್‍ಡೌನ್ ನಿಯಮಗಳನ್ನು ಸರಳಗೊಳಿಸಿದ ನಂತರ ಪ್ರತಿನಿತ್ಯ ಕೊರೋನಾ ಪೀಡಿತ ಸಂಖ್ಯೆ ಬೆಳೆಯುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲೇ ಆರೋಗ್ಯ ಸಚಿವರೇ ಮಾಸ್ಕ್ ಧರಿಸದೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ನಿರ್ಲಕ್ಷ್ಯೆ ವಹಿಸಿದ್ದು ಸರಿಯಲ್ಲವೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗ್ರಾಮಕ್ಕೆ ಆಗಮಿಸಿದ ಸಚಿವ ಬಿ.ಶ್ರೀರಾಮುಲು, ಸಂಸದ ಎ.ನಾರಾಯಣಸ್ವಾಮಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿಯವರನ್ನು ಸಾವಿರಾರು ಕಾರ್ಯಕರ್ತರು ಎತ್ತಿನ ಗಾಡಿನಲ್ಲಿ ಮೆರವಣಿಗೆ ನಡೆಸಿದ್ದಲ್ಲದೆ, ಬಾರಿಗಾತ್ರದ ಸೇಬು ಹಾಗೂ ಮೊಸುಂಬೆ ಬೃಹದಾಕಾರದ ಹಾರವನ್ನು ಕ್ರೈನ್ ಮೂಲಕ ಸಚಿವರಿಗೆ ಅರ್ಪಿಸಿದ್ದು, ನೆರದಿದ್ದ ಸಾವಿರಾರಲ್ಲಿ ಸಾಮಾಜಿಕ ಅಂತರ ಮಾಯವಾಗಿದ್ದಲ್ಲದೆ, ಮಾಸ್ಕ್ ಧರಿಸಿರಲಿಲ್ಲ. ಈ ಬಗ್ಗೆ ನೆರೆದಿದ್ದ ಹಲವಾರು ಜನರು ಸಚಿವರ ಕಾರ್ಯಕ್ರಮದಲ್ಲಿಯೇ ನಿಯಮಗಳ ಉಲ್ಲಂಘನೆಯಾದಲ್ಲಿ ಕೊರೋನಾ ನಿಯಂತ್ರಣ ಹೇಗೆ ಸಾಧ್ಯವೆಂದು ಪ್ರಶ್ನಿಸಿದರಲ್ಲದೆ, ಬಾಗಿನ ಅರ್ಪಿಸುವ ಕಾರ್ಯಕ್ರಮದ ಮೂಲಕ ಭಾರತೀಯ ಜನತಾ ಪಕ್ಷ ಜನರ ಆರೋಗ್ಯವನ್ನು ನಿರ್ಲಕ್ಷಿಸುತ್ತಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
ಪರಶುರಾಮಪುರ ಗ್ರಾಮದ ಖಾಸಗಿ ಬಸ್ ನಿಲ್ದಾಣದ ಪ್ರಧಾನ ವೃತ್ತದಲ್ಲೇ ಈ ಕಾರ್ಯಕ್ರಮ ನಡೆಸಿದ್ದು, ಸುತ್ತಮುತ್ತಲಿನ ಸಾವಿರಾರು ಸಂಖ್ಯೆಯ ಜನರು ಕಾರ್ಯಕ್ರಮವನ್ನು ವೀಕ್ಷಿಸಿ ನಂತರ ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇರುವಾಗ ಸಚಿವರ ಈ ಕಾರ್ಯಕ್ರಮದ ಅವಶ್ಯಕತೆ ಇತ್ತೆ ಎಂಬ ಪ್ರಶ್ನೆಗೆ ಕಾರ್ಯಕ್ರಮದ ಆಯೋಜಕರೇ ಉತ್ತರ ನೀಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ