ನಡೆದಾಡುವ ದೇವರಿಲ್ಲದ ಒಂದು ವರ್ಷ

       ಕಾವಿಧಾರಿಗಳ ಮಧ್ಯೆ ನಕ್ಷತ್ರದಂತೆ ತೇಜೋಮಯವಾಗಿ ಪ್ರಜ್ವಲಿಸುತ್ತಿದ್ದ ಸಿದ್ಧಗಂಗೆಯ ನಡೆದಾಡುವ ದೇವರು ಮರೆಯಾಗಿ ಒಂದು ವರ್ಷ ಕಳೆದಿದೆ. ಶೂನ್ಯ ಭಾವದಿಂದ ಭಕ್ತಗಣ  ಪರಿತಪಿಸುತ್ತಿದೆ . ಹಳೆ ಮಠದ ಮಂಚ ಬಿಕೋ ಎನ್ನುತ್ತಿದೆ.  ತಮ್ಮ ಕಷ್ಟಗಳನ್ನು ಕೇಳುತ್ತಿದ್ದ , ಅದಕ್ಕೊಂದು ಪರಿಹಾರ ನೀಡುತ್ತಿದ್ದ ಹಸನ್ಮುಖ , ಅಭಯಹಸ್ತ ಕಾಣದೆ ಕಂಗಾಲಾಗಿದ್ದಾರೆ . ಪ್ರತಿ ಹುಣ್ಣಿಮೆ – ಅಮಾವಾಸ್ಯೆಗಳಲ್ಲಿ ಸುತ್ತಲಿನ ನೂರಾರು ಹಳ್ಳಿಗಳ ಭಕ್ತರ ಪಾಲಿಗೆ ಸಂಜೀವಿನಿ ಯಾಗಿದ್ದ ಪರಮ ಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಅಗಲಿಕೆ ದೊಡ್ಡದೊಂದು ಶೂನ್ಯ ನಿರ್ಮಿಸಿದೆ  .

         ಶ್ರೀಗಳವರ ಕಾರ್ಯ ನಿಷ್ಠೆ, ತಪೋಬಲ, ಸಮಯಪ್ರಜ್ಞೆ, ಭಕ್ತಿಮಾರ್ಗ, ಶಿಕ್ಷಣ ಕ್ರಾಂತಿ ವಿಶ್ವಮಾನವತತ್ವ ಇವುಗಳಿಗೆ ಕಲಶವಿಟ್ಟಂತೆ ಅವರ ಸರಳತೆ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು . ಒಮ್ಮೆ ನನ್ನ ಸಹೋದರಿ ಕುತೂಹಲದಿಂದ ಸಿದ್ಧಗಂಗಾ ಕ್ಷೇತ್ರ ಮತ್ತು ಶ್ರೀಗಳವರನ್ನು ನೋಡುವ ಆಸಕ್ತಿಯಿಂದ ನನ್ನೊಡನೆ ಬಂದಳು.  ಕಟ್ಟಾ ಕ್ರೈಸ್ತಾಭಿಮಾನಿಯಾದ ಅವಳ ಜೊತೆ ಮೂರು ವರ್ಷದ  ಮೊಮ್ಮಗಳಿದ್ದಳು.

    ಮಗುವಿಗೆ ವಿಪರೀತ ಜ್ವರ,  ಶೀತ ಬಾಧೆ ಇತ್ತಾದರೂ  ಸಿದ್ಧಗಂಗೆಯ ಲಕ್ಷಲಕ್ಷ ಜನರ ಹಸಿವು ತಣಿಸುವ ಪಾಕಶಾಲೆ ನೋಡುವ ತವಕ ಅವಳನ್ನು ಪ್ರೇರೇಪಿಸಿತ್ತು . ಶ್ರೀಗಳವರು ಎಂದಿನಂತೆ ಮಂಚದಮೇಲೆ ಯಂತ್ರ ಬರೆಯುವ ಕಾರ್ಯದಲ್ಲಿ ನಿರತರಾಗಿದ್ದರು. ನನ್ನ ತಂಗಿಗೆ ಏನನ್ನಿಸಿತೋ  ಅಯೋಜಿತವಾಗಿ ಪೂಜ್ಯರ ಪಾದಗಳಿಗೆ ನಮಿಸಿ, ಮಗುವಿನ ಹಣೆಗೆ  ಅವರ ಶ್ರೀ ಪಾದಗಳ  ಸ್ಪರ್ಶ ಮಾಡಿಸಿದಳು.

     ಪಕ್ಕದಲ್ಲಿ ತಟ್ಟೆಯಲ್ಲಿರಿಸಿದ್ಧ ವಿಭೂತಿ ಗಟ್ಟಿಯಿಂದ ವಿಭೂತಿಯನ್ನು ಹಸ್ತಗಳಿಗೆ ಹಚ್ಚಿಕೊಂಡು ಮಗುವಿನ ಮೈತುಂಬ ಲೇಪಿಸಿದಳು   ಆಶ್ಚರ್ಯದಿಂದ ನೋಡುವ ಸರದಿ ನನ್ನದಾಯಿತು.  ಈ ಎಲ್ಲಾ ಕಾರ್ಯಗಳನ್ನು ಯಾವುದೇ ಪೂರ್ವಯೋಜನೆ ಇಲ್ಲದೆ ಮಾಡಿಸಿದ್ದ ಆ ಶಕ್ತಿಗೆ ನಾನು ಬೆರಗಾದೆ. ನಂತರ ಅಡುಗೆಮನೆ, ಅಲ್ಲಿಯ ರಾಶಿ ರಾಶಿ ಅನ್ನ, ಪರ್ವತದಂತೆ ಪೇರಿಸಿಟ್ಟಿದ್ದ ರಾಗಿಮುದ್ದೆಗಳು, ಬೃಹತ್ ಗಾತ್ರದ  ಕೊಳಗಗಳಲ್ಲಿದ್ದ ಘಮಘಮಿಸುವ ಸಾಂಬಾರು ಇವುಗಳನ್ನು ನಂಬಲಸಾಧ್ಯವಾದ ದೃಶ್ಯದಂತೆ ಕಂಡು ಭಾವುಕಳಾದಳು .

     ಅವರಿವರ ಬಾಯಿಂದ ಕೇಳಿದ್ದ ವಿಷಯ ಸಾಕ್ಷಾತ್ತಾಗಿ ಕಂಡಾಗ ಅದ್ಭುತವೊಂದನ್ನು ವೀಕ್ಷಿಸುವಂತೆ ನೋಡಿ ಸಂಭ್ರಮಿಸಿದಳು. ಇಡೀ ದಿನ ಅದರ ಬಗ್ಗೆ ಮಾತನಾಡುತ್ತಲೇ ಇದ್ದಳು . ಕಾಕತಾಳಿಯವೆಂಬಂತೆ ಮಗುವಿನ ಜ್ವರ ಇಳಿದು ಅದೂ ಕೂಡ ಲವಲವಿಕೆಯಿಂದ ಓಡಾಡಿತು.  ನನ್ನ ಮನಸ್ಥಿತಿಯೂ ಅಯೋಮಯವಾಯಿತು.   ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ಇಂದಿಗೂ  ಅವಳು ಕಣ್ಣಿಗೆ ಕಟ್ಟಿದಂತೆ ಬಂದವರೆದುರು ವರ್ಣಿಸುತ್ತಾಳೆ . ಜಾತಿ ಧರ್ಮಗಳನ್ನು ಮೀರಿದ ಪ್ರಭಾವ ಶ್ರೀಮಠಕ್ಕೆ ಇದೆ. 

    48 ವರ್ಷಗಳ ಹಿಂದೆ ಶ್ರೀಮಠಕ್ಕೆ ಶಿವಣ್ಣನವರು ನನ್ನನ್ನು ಕರೆದುಕೊಂಡು ಹೋದಾಗ ಶ್ರೀಗಳವರು ಮಠದ ಮಕ್ಕಳೊಳಗೂಡಿ  ಹುಲ್ಲಿನ ಬಣವೆ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದರು. ನಂತರ ಹೊಸದಾಗಿ ನಿರ್ಮಾಣವಾಗುತ್ತಿದ್ದ ವಿದ್ಯಾರ್ಥಿನಿಲಯಕ್ಕೆ ಸೈಜುಗಲ್ಲುಗಳನ್ನು ವಿದ್ಯಾರ್ಥಿಗಳ ಕೈಗೆ ಹಸ್ತಾಂತರಿಸಿದ್ದುದನ್ನು ನೋಡಿದ್ದೇನೆ. ಜಾತ್ರೆಯ ಸಂದರ್ಭದಲ್ಲಿ ತಾವೇ ಸ್ವತಃ ಮುದ್ದೆಯ ಕೊಪ್ಪರಿಗೆಯಲ್ಲಿ ಹಿಟ್ಟು ಗೊಟಾಯಿಸುತ್ತಿದ್ದುದನ್ನು, ಬೆಂಕಿಯ ಮುಂದೆ ಅದರ ಶಾಖವನ್ನು ಮೀರಿದಂತೆ ಪ್ರಜ್ವಲಿಸುತ್ತಿದ್ದುದನ್ನು ಕಂಡಿದ್ದೇನೆ.

    ಪತ್ರೆವನದಲ್ಲಿದ್ದ ಜಿಂಕೆಯನ್ನು ಮೃದುವಾಗಿ ಮೈದಡುವುತ್ತಾ ಎಳೆ ಹುಲ್ಲಿನ ಚಿಗುರನ್ನು ಮಾತೃ ಹೃದಯದಿಂದ ತಿನ್ನಿಸುವುದನ್ನು,  ದನದ ಕೊಟ್ಟಿಗೆಯಲ್ಲಿ ಹಸುವಿನ, ಕರುವಿನ ಸ್ಪರ್ಶ ಮಾಡುತ್ತಾ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದುದ್ದನ್ನು ಕಾಣುವ ಸೌಭಾಗ್ಯ ನನಗೆ ದೊರಕಿತ್ತು.  ಪ್ರತಿಸಾರಿಯೂ ವಿಸ್ಮಯದಿಂದ ಶ್ರೀಗಳವರ ಚಟುವಟಿಕೆಗಳನ್ನು ಗಮನಿಸುತ್ತಿದ್ದೆ.

    ಕಚೇರಿಯಲ್ಲಿ ಇದ್ದಾಗ ಧ್ಯಾನಮುದ್ರೆಯಲ್ಲಿರುತ್ತಿದ್ದ ಅವರು ನನ್ನಂತಹ ಅಲ್ಪಮತಿಗಳಿಗೆ  ನಿದ್ರಿಸುವಂತೆ ಭಾಸವಾಗುತ್ತಿತ್ತು ಆದರೆ ಭಕ್ತರು ನಿವೇದಿಸಿಕೊಳ್ಳುತ್ತಿದ್ದ ಪ್ರತಿ ವಾಕ್ಯವನ್ನೂ ಆಲಿಸಿ ಅಂತಿಮವಾಗಿ ಕ್ಲುಪ್ತವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು.  ಬಂದವರೂ ಸಹ ದೇವರು ನುಡಿದಂತೆ ಎಂಬ ಭಾವನೆಯಿಂದ    ನಿರ್ಗಮಿಸುತ್ತಿದ್ದರು . ಬುದ್ಧಿಯವರು ಅಪ್ಪಣೆ ಕೊಡಿಸಿದ ಮೇಲೆ ಮತ್ತೆ ಚಕಾರ ಎತ್ತುವ ಹಾಗಿಲ್ಲ ಎಂಬ ಮಾತು ಜನಜನಿತವಾಗಿತ್ತು . ಹೀಗೆ ಸಾಮಾಜಿಕವಾಗಿ ಘರ್ಷಣೆಯಾಗುವ ಅನೇಕ ಸನ್ನಿವೇಶಗಳನ್ನು ಶಾಂತಿ ರೀತಿಯಿಂದ ಬಗೆಹರಿಸಿದ ವಿಶಿಷ್ಟ ನ್ಯಾಯಾಧೀಶರಾಗಿದ್ದರು ನಮ್ಮ ಶ್ರೀಗಳವರು .

        ಬಸವಣ್ಣನವರ ತತ್ವ, ಆದರ್ಶಗಳಿಗೆ ಹೊಸ  ಭಾಷ್ಯ  ಬರೆದವರು ಸಿದ್ಧಗಂಗೆಯ ಶ್ರೀಗಳವರು. ಬಸವಣ್ಣನವರ ಜೀವನ ಚರಿತ್ರೆಯ ನಾಟಕ ವೀಕ್ಷಿಸುವುದು ಎಂದರೆ ಅವರಿಗೆ ಅತ್ಯಂತ ಪ್ರಿಯವಾದ ವಿಷಯ. ತಡರಾತ್ರಿವರೆಗೂ ಎಚ್ಚರವಿದ್ದು ನಾಟಕ ಅವಲೋಕಿಸುತ್ತಿದ್ದರು.  ನಾಟಕ ಪ್ರದರ್ಶನ ಎಲ್ಲಿ ನಡೆದರೂ ಅಲ್ಲಿಗೆ ತಪ್ಪದೆ ಹೋಗಿ ಭಾಗವಹಿಸುತ್ತಿದ್ದರು ಸಮಾಜ ಪರಿವರ್ತನೆಯ ಹರಿಕಾರರಾಗಿ ನಾಟಕದಂತಹ ಮಾಧ್ಯಮದ ಮೂಲಕ ಸಮಾನತೆಯ ಬೀಜ ಬಿತ್ತಿದ ತತ್ವಜ್ಞಾನಿ ಇವರಾಗಿದ್ದರು .

     ಸ್ವತಃ  ಗ್ರಂಥ ರಚನೆ ಮಾಡಲು ಅವರಿಗೆ ಜೀವನಚಕ್ರದಲ್ಲಿ ಬಿಡುವು ದೊರೆಯದಿದ್ದಿರಬಹುದು, ಆದರೆ ವಿಶ್ವದ ಪ್ರಸಿದ್ಧ ಸಾಹಿತಿಗಳು ಅವರ ಬಗ್ಗೆ ಬರೆದು ದಣಿದರು . ಮೊಗೆದಷ್ಟು ನೀರು ದೊರಕುವಂತೆ ಬರೆದಷ್ಟೂ ಆಳ ವಿಸ್ತಾರ ಅವರ ಜೀವನ ಚರಿತ್ರೆ . ಅಕಳಂಕ ವ್ಯಕ್ತಿತ್ವದ ಸಿದ್ದಗಂಗಾಶ್ರೀಗಳವರಿಗೆ ನಾಡಿನ ಇತರೆ ಮಠ ಮಾನ್ಯರು ಅಗ್ರಸ್ಥಾನ ನೀಡಿದ್ದಾರೆ. 

    ಅಭಿನವ ಬಸವಣ್ಣನಂತೆ, “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ಎಂಬಂತೆ ಬಾಳಿದವರು. ಉದ್ದಾಮ ಪಂಡಿತರಾಗಿದ್ದ ಇವರ ಭಾಷಣದಲ್ಲಿ ಕನ್ನಡ-ಇಂಗ್ಲಿಷ್- ಸಂಸ್ಕೃತದ ಉಕ್ತಿಗಳು ಸಾಂದರ್ಭಿಕವಾಗಿ ಸರಾಗವಾಗಿ ಹೊರಹೊಮ್ಮಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಿತ್ತು. ಚತುರ ವಾಗ್ಮಿಗೆ ಇಷ್ಟೆಲ್ಲಾ ಅಧ್ಯಯನ ಮಾಡಲು ಸಮಯವಾದರೂ ಎಲ್ಲಿರುತ್ತಿತ್ತು ಎಂಬ ಪ್ರಶ್ನೆ ಮೂಡುತ್ತದೆ.  ದೇಶದ ಆಗುಹೋಗುಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತಿದ್ದರು. ಯಾವ ರಾಜಕೀಯ ಪ್ರಭಾವಕ್ಕೂ ಒಳಗಾದವರಲ್ಲ.  ರಾಜಕಾರಣಿಗಳ ಸ್ಪೂರ್ತಿಯ ಸೆಲೆ ಸಿದ್ಧಗಂಗೆಯಾಗಿದ್ದರೂ ತಾವರೆ ಎಲೆಯ ಮೇಲಿನ ನೀರಿನ ಬಿಂದುವಿನಂತೆ ಯಾವುದಕ್ಕೂ ಅಂಟಿಕೊಳ್ಳದೆ ತಟಸ್ಥವಾಗಿರುತ್ತಿದರು 

    ವಿಶ್ವವೇ ಬೆರಗಾಗುವಂತೆ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಉಚಿತ, ಶಿಕ್ಷಣ ,ಪ್ರಸಾದ, ವಸತಿ ವ್ಯವಸ್ಥೆ ಕಲ್ಪಿಸಿ ಬಡ ನಿರ್ಗತಿಕ ಮಕ್ಕಳ ಮಾತೃರೂಪಿಣಿ ಯಾಗಿದ್ದರು. ಇಂದು ಸಮಾಜದಲ್ಲಿ ಹೆಸರು ಮಾಡಿದ ಸಹಸ್ರಾರು ಜನರು ಶ್ರೀಮಠದ ಹಿರಿಯ ವಿದ್ಯಾರ್ಥಿಗಳು ಎಂಬುದು ಉಲ್ಲೇಖನಾರ್ಹ . ಶ್ರೀಗಳು ಪಾದಸ್ಪರ್ಶ ಮಾಡಿದ ಸ್ಥಳ ಪುನೀತವಾಗುತ್ತದೆ ಎಂಬುದಕ್ಕೆ ನಿದರ್ಶನ ದಾವಣಗೆರೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ.  ನೀನೊಲಿದರೆ ಕೊರಡು ಕೊನರುವುದಯ್ಯಾ ಎಂಬ ಮಾತು  ಶ್ರೀಗಳವರ ಕೃಪೆಗೆ ಪಾತ್ರರಾದ ಎಲ್ಲರ ಅಭಿಮತ .

     ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಬರೆದಂತೆ ಸದ್ದುಗದ್ದಲವಿರದ ಸಾಧನೆ ಸಿದ್ಧಗಂಗೆಯಲ್ಲಿ ಗದ್ದುಗೆ ಏರಿದೆ. ಶ್ರೀಗಳವರ ಅಗಲಿಕೆಯಿಂದಾದ ಶೂನ್ಯವನ್ನು ಅವರ ಉತ್ತರಾಧಿಕಾರಿ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರು ತುಂಬುವ ಹಾದಿಯಲ್ಲಿ  ಕ್ರಮಿಸುತ್ತಿದ್ದಾರೆ . ಶ್ರೀಗಳವರ ಆಶೀರ್ವಾದ ಅವರ ಮೇಲಿದೆ. ಇತಿಹಾಸದಲ್ಲಿ ಲೀನರಾದ ಸಂತ ಡಾ|| ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ದರ್ಶನ ಭಾಗ್ಯ ಪಡೆದ ನಾವೆಲ್ಲರೂ ಧನ್ಯರು .ಅವರ ಕಾಲದಲ್ಲಿ ಬದುಕಿದವರು ಎಂಬುದೇ ಅದೃಷ್ಟ.  ಬನ್ನಿ ಅವರ ಆರಾಧನೆ  ಮತ್ತು ಪಾದುಕಾ ದರ್ಶನಭಾಗ್ಯ ಪಡೆದುಕೊಳ್ಳೋಣ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಜನವರಿ 21ರ ಮಂಗಳವಾರ ಬೆಳಿಗ್ಗೆ 10:30ಕ್ಕೆ ಶ್ರೀಗಳವರ ಪ್ರಥಮ ಪುಣ್ಯಸ್ಮರಣೆಯಲ್ಲಿ ಪಾಲ್ಗೊಳ್ಳೋಣ.  ಪ್ರಸಾದ  ಸ್ವೀಕರಿಸಿ  ಪುನೀತರಾಗೋಣ .

ಜಸ್ಟಿನ್ ಡಿಸೋಜಾ ಶಿಕ್ಷಕಿ , ಸಿದ್ಧಗಂಗಾ ವಿದ್ಯಾಸಂಸ್ಥೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

                                                                                         

Recent Articles

spot_img

Related Stories

Share via
Copy link