ದಾವಣಗೆರೆ:
ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ದಾಖಲಿಸಿರುವ ಸುಳ್ಳು ಮೊಕದಮ್ಮೆ ಹಿಂಪಡೆಯದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ, ಭೋವಿ ಸಮಾಜದ ಹಿರಿಯ ಮುಖಂಡ ಡಿ.ಬಸವರಾಜ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡೂ ಚುನಾವಣೆಯಲ್ಲೂ ಚಿತ್ರದುರ್ಗ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಭೋವಿ ಸಮಾಜಕ್ಕೆ ಟಿಕೆಟ್ ನೀಡುತ್ತಾ ಬರಲಾಗಿತ್ತು. ಅದರಂತೆ ಈ ಬಾರಿಯೂ ಟಿಕೆಟ್ ಕೊಡಿಸುವಂತೆ ಶ್ರೀಗಳುಯಡಿಯೂರಪ್ಪನವರಿಗೆ ಹೇಳಿದಾಗ, ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಯಡಿಯೂರಪ್ಪ ಕೊನೆ ಕ್ಷಣದಲ್ಲಿ ನುಡಿದಂತೆ ನಡೆದುಕೊಳ್ಳದ ಕಾರಣ ಶ್ರೀಮಠದ ಆವರಣದಲ್ಲಿ ಭೋವಿ ಸಮಾಜದ ಮುಖಂಡರು ಸೇರಿ ಬಿಜೆಪಿ ವಿರುದ್ಧ ಮತ ಚಲಾಯಿಸಲು ಹಾಗೂ ಎರಡೂ ಪಕ್ಷಗಳ ವಿರುದ್ಧ ನೋಟಾ ಚಲಾಯಿಸಲು ತೀರ್ಮಾನಿಸಿದ್ದರು.
ಈ ಸಭೆಯನ್ನೇ ನೆಪವಾಗಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಚಿತಾವಣೆ ನಡೆಸಿ, ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ನಿಂದ ಸುಳ್ಳು ಮೊಕದ್ದಮ್ಮೆ ದಾಖಲಾಗುವಂತೆ ನೋಡಿಕೊಂಡಿದ್ದಾರೆಂದು ಆರೋಪಿಸಿದರು.
ದೇಶಾದ್ಯಂತ ಸಂಚರಿಸಿ ಅತ್ಯಂತ ಹಿಂದುಳಿದಿರುವ ಭೋವಿ ಸಮಾಜವನ್ನು ಸಂಘಟಿಸುತ್ತಿರುವ ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿರುದ್ಧ ಏಕ ಪಕ್ಷೀಯವಾಗಿ, ಸಮಜಾಯಿಸಿ ಕೇಳಿ, ನೋಟೀಸ್ ಸಹ ನೀಡದೇ ದೂರು ದಾಖಲಿಸಿರುವುದು ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವ ಕೆಲಸವಾಗಿದ್ದು, ಇದನ್ನು ನಾವು ಅತ್ಯಂತ ತೀವ್ರವಾಗಿ ಖಂಡಿಸುತ್ತೇವೆಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣವೇ ಚುನಾವಣಾ ಆಯೋಗ ಹಾಗೂ ಚಿತ್ರದುರ್ಗ ಜಿಲ್ಲಾ ಚುನಾವಣಾಧಿಕಾರಿಗಳು ಮಧ್ಯ ಪ್ರವೇಶಿಸಿ, ಮೊಕದ್ದಮ್ಮೆ ಹಿಂಪಡೆಯುವಂತೆ ನೋಡಿಕೊಳ್ಳಬೇಕು, ಶ್ರೀಗಳ ವಿರುದ್ಧ ದೂರು ದಾಖಲಿಸಲು ಕಾರಣವಾಗಿರುವವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.
ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರನ್ನು ಕಟಕಟೆಯಲ್ಲಿ ನಿಲ್ಲಿಸಲು ಕಾರಣವಾಗಿರುವ ಬಿಜೆಪಿಯ ವಿರುದ್ಧ ಶೋಷಿತ ಸಮುದಾಯಗಳು ಮತ ಚಲಾಯಿಸಬೇಕೆಂದು ಕರೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ಹೆಚ್.ಚಂದ್ರಪ್ಪ, ಆರ್.ಶ್ರೀನಿವಾಸ್, ಬಿ.ಹೆಚ್.ಶಿವಪ್ರಕಾಶ್, ಡಿ.ಶಿವಕುಮಾರ್, ಲಿಯಾಕತ್ ಅಲಿ, ಖಾಜಿ ಖಲೀಲ್, ಎಸ್.ಎನ್.ಬಸವರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ