ಗುಬ್ಬಿ
ಕೇಂದ್ರದ ಬಿಜೆಪಿ ಸರ್ಕಾರ ಬಡವರು ಮತ್ತು ರೈತ ಪರವಾದ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸುವಲ್ಲಿ ವಿಫಲವಾಗಿದ್ದು ಬರಿ ಸುಳ್ಳನ್ನೆ ಹೇಳಿಕೊಂಡು ಕಾಲಹರಣ ಮಾಡುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮ ಪಂಚಾಯ್ತಿ ಮತ್ತು ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜವರೇಗೌಡನಪಾಳ್ಯ, ತೊರೆಹಳ್ಳಿ, ಮಡೆನಹಳ್ಳಿ, ಚಿಕ್ಕೋನಹಳ್ಳಿ ಮುಂತಾದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳಿದ ಪ್ರಧಾನಿಗಳು ಯುವಕರಿಗೆ ಉದ್ಯೋಗ ಕಲ್ಪಿಸುವಂತಹ ಪೊಳ್ಳು ಭರವಸೆ ನೀಡಿ ಇದುವರೆಗೆ ಯಾವುದೇ ನಿರುದ್ಯೋಗಿಗಳಿಗೂ ಉದ್ಯೋಗ ಕಲ್ಪಿಸಿಲ್ಲ, ಆದ್ದರಿಂದ ಮತದಾರರು ಪ್ರಸಕ್ತ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತದಾನ ಮಾಡುವಂತೆ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಇದೂವರೆಗೂ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಇದೀಗ ಜನರ ಮುಂದೆ ಮತ ಕೇಳಲು ಹೇಗೆ ಹೋಗುತ್ತಾರೂ ಗೊತ್ತಿಲ್ಲ. ಜಿಲ್ಲೆಯ ಜನತೆ ಪ್ರಸಕ್ತ ಚುನಾವಣೆಯಲ್ಲಿ ಸರಿಯಾದ ಪಾಠಕಲಿಸುತ್ತಾರೆ ಎಂದು ತಿಳಿಸಿದ ಅವರು, ಸಮ್ಮಿಶ್ರ ಸರ್ಕಾರ ರಾಜ್ಯದ ಅಭ್ಯುದಯಕ್ಕೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಹಲವು ಜನಪರವಾದ ಕಾರ್ಯಕ್ರಮಗಳನ್ನು ರೂಪಿಸಿದೆ.
ರೈತರ ಸಾಲ ಮನ್ನಾ ಸೇರಿದಂತೆ ರೈತರು, ಕೃಷಿಕಾರ್ಮಿಕರು, ನಿರುದ್ಯೋಗ ಯುವಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಬದುಕು ಕಟ್ಟಿಕೊಡುವಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವತ್ತ ಕ್ಷೇತ್ರದ ಮತದಾರರು ಮುಂದಾಗುವಂತೆ ಮನವಿ ಮಾಡಿದರು.
ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ಮುಖಂಡರಾದ ಕೆ.ಆರ್.ವೆಂಕಟೇಶ್, ವೆಂಕಟೇಶ್‍ಗೌಡ, ವೆಂಕಟಸ್ವಾಮಯ್ಯ, ನವೀನ್, ನಾರಾಯಣ್ಣಪ್ಪ, ಶರತ್, ಚಂದ್ರು ಮುಂತಾದವರು ಭಾಗವಹಿಸಿದ್ದರು.