ಚಿಕ್ಕನಾಯಕನಹಳ್ಳಿ
ಕೆಲ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ತಮ್ಮ ಅಸ್ತಿತ್ವಕ್ಕಾಗಿ ದಾಖಲಾತಿ ಮಾಹಿತಿಯನ್ನು ತಪ್ಪಾಗಿ ನೀಡುತ್ತಿರುವುದರಿಂದ ತಾಲ್ಲೂಕಿನ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ಅಂತಹ ಶಾಲೆಗಳನ್ನು ಗುರುತಿಸಿ ತಪಾಸಣೆಗೆ ಒಳಪಡಿಸಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ ಅವರಿಗೆ ತಾಕೀತು ಮಾಡಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಏಪ್ರಿಲ್ 2019ರ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶದ ವಿಶ್ಲೇಷಣೆ ಸಭೆಯಲ್ಲಿ ಮಾತನಾಡಿ, ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲೆಗಳನ್ನು ನಿರಂತರ ತಪಾಸಣೆಗೆ ಒಳಪಡಿಸುವಂತೆ ಸಲಹೆ ನೀಡಿದರು.
ತಾಲ್ಲೂಕಿನಲ್ಲಿ ಈ ಬಾರಿ ಅನುದಾನ ರಹಿತ ಪ್ರೌಢಶಾಲೆಗಳು ಶೇಕಡ 95.17, ಸರ್ಕಾರಿ ಪ್ರ್ರೌಢಶಾಲೆಗಳು ಶೇಕಡ 82 ಹಾಗೂ ಅನುದಾನಿತ ಶಾಲೆಗಳು ಶೇಕಡ 74 ರಷ್ಟು ಫಲಿತಾಂಶ ದಾಖಲಿಸಿವೆ. ಫಲಿತಾಂಶ ವಿಶ್ಲೇಷಿಸಿದ ಶಾಸಕರು, ಅನುದಾನ ರಹಿತ ಶಾಲೆಗಳಲ್ಲಿ ಶಿಕ್ಷಕರು ರೂ.5ಸಾವಿರಕ್ಕೆ ಕೆಲಸ ಮಾಡುತ್ತಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆ ಶಿಕ್ಷಕರಿಗೆ ರೂ.50ಸಾವಿರ ಸಂಬಳ ಹೀಗಿದ್ದರೂ ಫಲಿತಾಂಶ ಕಡಿಮೆ ಏಕೆ ಎಂದು ಪ್ರಶ್ನಿಸಿದರು.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಅನುದಾನಿತ ಶಾಲೆಗಳು ಶಿಕ್ಷಕರ ಕೊರತೆಯ ಕಾರಣ ಹೇಳಬಾರದು. 20 ವರ್ಷಗಳ ಹಿಂದೆ ಅನುದಾನಿತ ಶಾಲೆಗಳ ಅವಶ್ಯಕತೆ ಇತ್ತು. ಈಗ ಸರ್ಕಾರ ಎಲ್ಲಾ ಕಡೆ ಸರ್ಕಾರಿ ಶಾಲೆ ನೀಡಿದೆ. ಇಂದು ಅನುದಾನಿತ ಶಿಕ್ಷಣ ಸಂಸ್ಥೆಗಳ ಅಗತ್ಯ ಇಲ್ಲ. ಶಾಲೆ ನಡೆಸಲು ಆಗದಿದ್ದರೆ ಮುಚ್ಚಿ ಎಂದು ಕಿಡಿಕಾರಿದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ರೂ.50ಲಕ್ಷ ಅನುದಾನ:
ಸರ್ಕಾರ ಈ ಬಾರಿ ತಾಲ್ಲೂಕಿಗೆ 1ರಂತೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಿದ್ದು ಹುಳಿಯಾರ್‍ನಲ್ಲಿ ಆರಂಭವಾಗಿರುವ ಪಬ್ಲಿಕ್ ಸ್ಕೂಲ್‍ಗೆ ರೂ.50ಲಕ್ಷ ಅನುದಾನ ಬಿಡುಗಡೆಯಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ 1ರಿಂದ 12ನೇ ತರಗತಿ ವರೆಗೆ ಒಂದೇ ಸಮಚ್ಚಯದಲ್ಲಿ ತರಗತಿಗಳು ನಡೆಯಬೇಕಿದೆ. ಪಬ್ಲಿಕ್ ಶಾಲೆಯ ಪ್ರಾಥಮಿಕ ವಿಭಾಗವನ್ನು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಹಾಗೂ ಕಾಲೇಜು ವಿಭಾಗವನ್ನು ಹುಳಿಯಾರು-ಕೆಂಕೆರೆ ಶಾಲೆಯಲ್ಲಿ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ. ಎರಡೂ ಶಾಲೆಗಳ ನಡುವಿನ ದೂರ 1.5 ಕಿಮೀ ಇದೆ. ಪ್ರಾಥಮಿಕ ಶಾಲೆಗೂ ಹೆಚ್ಚುವರಿ ಕೊಠಡಿಗಳನ್ನು ಸರ್ಕಾರಿ ಪ್ರೌಢಶಾಲೆ ಆವರಣದಲ್ಲೇ ನಡೆಸಲು ಅನುವು ಆಗುವಂತೆ ಹೆಚ್ಚುವರಿ 5 ಕೊಠಡಿಗಳಿಗೆ ಯೋಜನೆ ಕಳಿಸಿ ಎಂದು ಹುಳಿಯಾರು-ಕೆಂಕೆರೆ ಶಾಲೆ ಮುಖ್ಯೋಪಾಧ್ಯಾಯಿನಿ ಇಂದಿರಾ ಅವರಿಗೆ ಸೂಚಿಸಿದರು.
ಶಾಲಾವಾರು ಫಲಿತಾಂಶವನ್ನು ಮುಖ್ಯಶಿಕ್ಷಕರ ಸಮ್ಮುಖದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕಾತ್ಯಾಯಿನಿ, ಕ್ಷೇತ್ರ ಸಮನ್ವಯಾಧಿಕಾರಿ ಸಂಗಮೇಶ್ ಹಾಗೂ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ