ದಾವಣಗೆರೆ:
ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಪಕ್ಷದಿಂದ ಅಧಿಕೃತವಾಗಿ ಘೋಷಣೆ ಮಾಡುವುದೊಂದೇ ಬಾಕಿ ಇದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಭಾನುವಾರ ನಗರದ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದಿದ್ದ ಎಸ್.ಎಸ್.ಮಲ್ಲಿಕಾರ್ಜುನ ಇದೀಗ ಸ್ಪರ್ಧಿಸುವುದಾಗಿ ತಮ್ಮ ಬಳಿ ಹೇಳಿಕೊಂಡಿರುವುದಲ್ಲದೇ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಸಕ್ತಿ ತೋರಿದ್ದಾರೆ ಎಂದರು.
ಬೇರೆಕಡೆಯಿಂದ ಯಾರೋ ಅಭ್ಯರ್ಥಿಗಳು ಬಂದು ಇಲ್ಲಿ ಸ್ಪರ್ಧಿಸುವುದಿಲ್ಲ, ಮಲ್ಲಿಕಾರ್ಜುನ ಚುನಾವಣೆಗೆ ಸ್ಪರ್ಧಿಸುವರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದಾವಣಗೆರೆ ಟಿಕೆಟ್ ಕೊಡುವುದೂ ಮಲ್ಲಿಕಾರ್ಜುನ್‍ಗೆ ಮಾತ್ರ ಎಂಬುದು ಕಾರ್ಯಕರ್ತರಿಗೂ ಗೊತ್ತಿರುವ ವಿಷಯ. ನಮ್ಮ ಪಕ್ಷದ ಬಗ್ಗೆ ಜನರಿಗೂ ಅಭಿಮಾನವಿದೆ. ಕ್ಷೇತ್ರದಲ್ಲಿ ಚುನಾವಣಾ ಆಕಾಂಕ್ಷಿಗಳಾಗಿದ್ದವರ ಬೆಂಬಲವೂ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗಿದೆ ಎಂದರು.
ನಮ್ಮ ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿ 3 ಬಾರಿ ಗೆದ್ದಿದ್ದರೂ, ನಮ್ಮ ಶಕ್ತಿಯ ಬಗ್ಗೆಯೂ ನಮಗೆ ಗೊತ್ತಿದೆ. ನರೇಂದ್ರ ಮೋದಿ ಸುಳ್ಳು ಹೇಳುವ ಪ್ರಧಾನಿಯೆಂಬುದು ಎಲ್ಲರಿಗೂ ಗೊತ್ತು. ಏರ್ ಸ್ಟ್ರೈಕ್ ನಂತರ ಬಿಜೆಪಿಗೆ ಶೇ.10 ರಷ್ಟು ಬೆಂಬಲ ಹೆಚ್ಚಾಗಿದೆ. ಆದರೂ, ನಮ್ಮ ಪಕ್ಷವೇ ಇಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.