ಗುಣಮಟ್ಟ ಪರೀಕ್ಷಿಸಿದ ನಂತರವೇ ಟ್ಯಾಂಕರ್ ನೀರು ಪೂರೈಸಿ : ಸಿಇಓ

ತುಮಕೂರು

    ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಮುನ್ನ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಗುಣಮಟ್ಟ ಪರೀಕ್ಷಿಸಿದ ನಂತರವೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ನೀರು ಪೂರೈಕೆ ಮಾಡಿದ ಬಗ್ಗೆ ಚಿತ್ರ ಸಹಿತ ವರದಿ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಬರ ನಿರ್ವಹಣಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಬೆಳಿಗ್ಗೆ 8 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಪಿಡಿಓಗಳಿಗೆ ನಿರ್ದೇಶನ ನೀಡಿದರು.

    ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ ತಾಲೂಕಿನ ನೋಡೆಲ್ ಅಧಿಕಾರಿಗಳು ತಾಲೂಕು ಪಂಚಾಯಿತಿಗೆ ಭೇಟಿ ನೀಡಿ, ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಸಹಾಯವಾಣಿ ಮೂಲಕ ಸ್ವೀಕರಿಸಿರುವ ದೂರುಗಳನ್ನು ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕಲ್ಲದೆ, ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಸಫಲವಾಗಿರುವ ಕೊಳವೆಬಾವಿಗಳು ಹಾಗೂ ವಿಫಲವಾಗಿರುವ ಕೊಳವೆ ಬಾವಿಗಳೆಷ್ಟು ಎಂಬುದನ್ನು ಪರಿಶೀಲಿಸಿ ತಮಗೆ ವರದಿ ನೀಡಬೇಕು ಎಂದು ಸೂಚಿಸಿದರು.

    ದುರಸ್ಥಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣವೇ ಸರಿಪಡಿಸುವಂತೆ ಸೂಚಿಸಿದರಲ್ಲದೆ, ಪತ್ರಿಕೆಯಲ್ಲಿ ಪ್ರಕಟವಾಗುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕೂಡಲೇ ಬಗೆಹರಿಸಬೇಕು. ಅಲ್ಲದೆ ಈ ಕುರಿತು ಪತ್ರಿಕೆಗಳಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸಿಇಓ ಸೂಚಿಸಿದರು.

    ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಕೃಷ್ಣಪ್ಪ ಮಾತನಾಡಿ ಶಿರಾ ತಾಲೂಕಿನ ಹೊಳವನಹಳ್ಳಿ, ಇಂದ್ರನಗರ ಕಾಲೋನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಬಗ್ಗೆ ಸಹಾಯವಾಣಿ ಮೂಲಕ ದೂರು ದಾಖಲಾಗಿದ್ದು, ಸದರಿ ಗ್ರಾಮಗಳಿಗೆ ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು ಎಂದರಲ್ಲದೆ, ಆಯಾ ಗ್ರಾಮ ಪಂಚಾಯಿತಿಗಳ ಪಿಡಿಓ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ, ಎಇಇಗಳು ಸಭೆ ನಡೆಸಿ ನೀರಿನ ಸಮಸ್ಯೆಯ ಬಗ್ಗೆ ಚರ್ಚಿಸಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು. ಕೆಲವು ಗ್ರಾಮಗಳಲ್ಲಿ ಉಚಿತವಾಗಿ ನೀರು ಪೂರೈಕೆ ಮಾಡುತ್ತಿರುವ ರೈತರು ಹಾಗೂ ಮುಖಂಡರನ್ನು ಗುರುತಿಸಿ ಸನ್ಮಾನ ಮಾಡಬೇಕು ಎಂದು ಸಲಹೆ ನೀಡಿದರು.

    ಕುಡಿಯುವ ನೀರಿಗೆ ಮೊದಲಾದ್ಯತೆ ನೀಡಬೇಕು. ಪಾವಗಡ ತಾಲೂಕಿನ ವೈ.ಎನ್ ಹೊಸಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಪಂಚಾಯಿತಿಯಿಂದ ನೀಡಿರುವ ನೀರಿನ ಸಂಪರ್ಕಗಳಿಗೆ ಅನಧಿಕೃತ ಪೈಪ್ ಹಾಗೂ ಮೋಟಾರ್ ಅಳವಡಿಸಿಕೊಂಡಿರುವವರು ಒಂದು ವಾರದೊಳಗೆ ತೆರವುಗೊಳಿಸದಿದ್ದರೆ ದಂಡ ವಿಧಿಸಲಾಗುವುದು ಎಂದು ಕರಪತ್ರಗಳ ಮೂಲಕ ಎಚ್ಚರಿಕೆ ನೀಡಬೇಕು. ತಪ್ಪಿದ್ದಲ್ಲಿ ತಕ್ಷಣವೇ ನೋಟಿಸ್ ನೀಡಿ ದಂಡ ವಿಧಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ:-

     ಜಿ.ಪಂ. ಯೋಜನಾಧಿಕಾರಿ ಬಾಲರಾಜು ಮಾತನಾಡಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 100 ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಯೋಜಿಸಲಾಗಿದೆ. ಈ ಯೋಜನೆಯನ್ನು ಪಾವಗಡ ತಾಲೂಕಿನ ಕೆ.ಟಿ ಹಳ್ಳಿ, ಮಂಗಳವಾಡ, ಅರಸಿಕೆರೆ, ರೊಪ್ಪ, ನಾಗಲಮಡಿಕೆ, ಮದನಕಲ್ಲು; ಮಧುಗಿರಿ ತಾಲೂಕಿನ ಹೊಸಕೆರೆ; ಶಿರಾ ತಾಲೂಕಿನ ತಾವರೆಕೆರೆ, ಕೊಟ್ಟ, ಬುಕ್ಕಾಪಟ್ಟಣ, ನಾದೂರು, ಚಿಕ್ಕನಹಳ್ಳಿ; ತುರುವೇಕೆರೆ ತಾಲೂಕಿನ ಮಾವಿನಕೆರೆ, ಮಾಯಸಂದ್ರ, ಬಾಣಸಂದ್ರ, ಸಂಪಿಗೆ, ದಂಡಿನಶಿವರ; ಕೊರಟಗೆರೆ ತಾಲೂಕಿನ ತೋವಿನಕೆರೆ, ಅಂಚೆಹಳ್ಳಿ ಗ್ರಾಮಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸದರಿ ಗ್ರಾಮಗಳಲ್ಲಿರುವ ಜಿಲ್ಲಾ ಪಂಚಾಯಿತಿ ಸುಪರ್ದಿನಲ್ಲಿರುವ ಜಮೀನಿನಲ್ಲಿ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸಂಬಂಧಪಟ್ಟ ಪಿಡಿಓ, ಇಒ, ಎಇಇಗಳು ಸಹಕರಿಸಬೇಕು ಎಂದು ತಿಳಿಸಿದರು.ಈ ಸಭೆಯಲ್ಲಿ ಉಪಕಾರ್ಯದರ್ಶಿ ಡಾ|| ಪ್ರೇಮ್‍ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್, ಸೇರಿದಂತೆ ನೋಡಲ್ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap