ಎಸ್ಟಿ ವರ್ಗದ ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸಲು ಆಗ್ರಹ

ತುಮಕೂರು

    ಪರಿಶಿಷ್ಟ ಪಂಗಡ ಸಮುದಾಯಕ್ಕೆ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಶೇಕಡ 7.5ರಷ್ಟು ಮೀಸಲಾತಿ ಹೆಚ್ಚಿಸಿ ಜಾರಿ ಮಾಡಬೇಕು, ಈ ಸಂಬಂಧ ಮುಂಬರುವ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಎಸ್.ಆರ್.ಶಾಂತಲಾ ರಾಜಣ್ಣ ಒತ್ತಾಯಿಸಿದರು.

    ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ಸಂವಿಧಾನದಲ್ಲಿಯೇ ಶೇಕಡ 7.5ರಷ್ಟು ಮೀಸಲಾತಿಗೆ ಅವಕಾಶವಿದ್ದರೂ ಕರ್ನಾಟಕದಲ್ಲಿ ರಾಜಕೀಯ ಮೀಸಲಾತಿ ಹೊರತು ಪಡಿಸಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಪಂಗಡದವರಿಗೆ ಶೇಕಡ 7.5ರ ಮೀಸಲಾತಿಯನ್ನು ವಿಸ್ತರಿಸಿಲ್ಲ. ಇದರ ಜೊತೆಗೆ ಬೇರೆ ಬೇರೆ ಸಮುದಾಯಗಳನ್ನು ತಂದು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುತ್ತಿದೆ. ಎಷ್ಟು ಸಮುದಾಯಗಳನ್ನು ಬೇಕಾದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೂ ನಮ್ಮ ಅಭ್ಯಂತರವಿಲ್ಲ, ಆದರೆ ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿ, ವಾಲ್ಮೀಕಿ ಸಮುದಾಯಕ್ಕೆ ಶೇಕಡ 7.5ರಷ್ಟು ಮೀಸಲಾತಿ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

    ಕಳೆದ ವರ್ಷ ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ರಾಜನಹಳ್ಳಿಯಿಂದ ರಾಜಧಾನಿಗೆ ಪಾದಯಾತ್ರೆ ನಡೆಸಿ ಬೃಹತ್ ಹೋರಾಟವನ್ನು ರೂಪಿಸಲಾಗಿತ್ತು. ಅಂದು ಹಲವು ಮುಖಂಡರು ಪ್ರತಿಭಟನೆಗೆ ಬೆಂಬಲ ನೀಡಿ ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದರೂ, ಆದರೆ ಇದುವರೆಗೂ ಆ ಭರವಸೆ ಈಡೇರಿಲ್ಲ. ಹಾಗಾಗಿ ಅನಿವಾರ್ಯವಾಗಿ ಮತ್ತೊಮ್ಮೆ ಮಾಡು ಇಲ್ಲವೆ, ಮಡಿ ಹೋರಾಟಕ್ಕೆ ಧುಮಕಬೇಕಾಗಿದೆ. ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟವಾದ ನಿಲುವು ಪ್ರಕಟಿಸದಿದ್ದರೆ ತೀವ್ರ ಹೋರಾಟ ಅನಿವಾರ್ಯ ಎಂದು ಶಾಂತಲ ರಾಜಣ್ಣ ಹೇಳಿದರು.

    ವಾಲ್ಮೀಕಿ ಸಮುದಾಯದ ಮುಖಂಡರಾದ ಪುಟ್ಟರಾಮಯ್ಯ ಮಾತನಾಡಿ, ಶೇಕಡ 7.5 ಸಂವಿಧಾನ ಬದ್ದ ಮೀಸಲಾತಿಯಾಗಿದ್ದರೂ ಕಳೆದ 40 ವರ್ಷಗಳಿಂದ ನಮ್ಮನ್ನು ವಂಚಿಸಲಾಗುತ್ತಿದೆ. ಹಲವಾರು ಬಾರಿ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ನಿರ್ದೇಶನದಂತೆ ಈ ಮಾಧ್ಯಮಗೋಷ್ಠಿ ನಡೆಸಲಾಗುತ್ತಿದೆ. ಸರ್ಕಾರ ಮುಂಬರುವ ಅಧಿವೇಶನದಲ್ಲಿ ಕ್ರಮ ಕೈಗೊಳ್ಳದಿದ್ದರೆ, ಸ್ವಾಮೀಜಿಯವರು ನೀಡುವ ಆದೇಶದಂತೆ ವಾಲ್ಮೀಕಿ ಸಮುದಾಯ ಹೋರಾಟ ನಡೆಸಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap