ಬಿಜೆಪಿಯಿಂದ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ಬೆಂಗಳೂರು

     ರಾಜ್ಯದಲ್ಲಿ ನವೆಂಬರ್ 3 ರಂದು ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ತಾರಾ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆಮಾಡಿದ್ದು, ಫೈರ್ ಬ್ರಾಂಡ್ ಖ್ಯಾತಿಯ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನಯ ಪಟ್ಟಿಯಿಂದ ಕೈಬಿಡಲಾಗಿದೆ.

       ಚುನಾವಣೆಯಲ್ಲಿ ಗೆಲ್ಲಲೇಬೆಂಬ ಉದ್ದೇಶದಿಂದ ಬಿಜೆಪಿ ನಾಯಕರು ಎಚ್ಚರಿಕೆ ಹೆಜ್ಜೆ ಇಟ್ಟಿದ್ದು, ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

        ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನಂತಕುಮಾರ್ ಹೆಗಡೆ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹಿಂದೂಪರವಾದ ಅವರ ಪ್ರಚೋದನಕಾರಿ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿದ್ದು, ಅನಂತ ಕುಮಾರ್ ಹೆಗಡೆ ಅವರನ್ನು ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಮಾತ್ರ ಸೀಮಿತಗೊಳಿಸಲು ಬಿಜೆಪಿ ವರಿಷ್ಠರು ಉದ್ದೇಶಿಸಿದ್ದಾರೆ.

       ಉಪಚುನಾವಣೆಯಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ರಾಷ್ಟ್ರಮಟ್ಟದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದ ಅನಂತ್ ಕುಮಾರ್ ಹೆಗಡೆ ಬಾಯಿಗೆ ಬಿಜೆಪಿ ನಾಯಕರೇ ಬೀಗ ಹಾಕಿದ್ದಾರೆ. ರಾಜ್ಯದ 38 ಮಂದಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ.

      ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕರು ಅನಂತಕುಮಾರ್ ಹೆಗಡೆ ಅವರನ್ನು ಪ್ರಚಾರದಿಂದ ದೂರವಿಟ್ಟಿದ್ದಾರೆ. ಹೆಗಡೆ ಅವರು ನೀಡುವ ಹೇಳಿಕೆಗಳು ತೀವ್ರ ಆಕ್ರೋಶಕ್ಕೆ ಕಾರಣವಾಗುವುದಲ್ಲದೇ ಪಕ್ಷದ ಮತಬ್ಯಾಂಕ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

       ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಬದಲಿಸುವುದಾಗಿ ನೀಡಿದ್ದ ಹೇಳಿಕೆ ಪರಿಣಾಮ ಪರಿಶಿಷ್ಟ ಸಮುದಾಯದ ಮತಗಳು ಬಿಜೆಪಿಗೆ ಸೂಕ್ತ ಪ್ರಮಾಣದಲ್ಲಿ ದೊರೆತಿರಲಿಲ್ಲ. ಈ ಬಾರಿ ಅದು ಪುನರಾರ್ತನೆಯಾಗುವುದು ಬೇಡ ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

       ಮತ್ತೊಂದೆಡೆ ಬಿಜೆಪಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುತ್ತಿಲ್ಲ. ಒಬ್ಬೊಬ್ಬರದ್ದು ಒಂದೊಂದು ದಾರಿಯಾಗಿದ್ದು, ಪ್ರಚಾರದಲ್ಲಿ ಸೂಕ್ತ ಕಾರ್ಯತಂತ್ರ ಇಲ್ಲವಾಗಿದೆ. ಇದು ಪಕ್ಷದ ಗೆಲುವಿನ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.

       ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರ ಒಗ್ಗಟ್ಟಿನ ಪ್ರದರ್ಶನ ಆಗುತ್ತಿಲ್ಲ. ಇದು ಪ್ರಚಾರದ ಮೇಲೆ ಗಂಭೀರ ಪ್ರಭಾವ ಬೀರಿದೆ. ಚುನಾವಣಾ ಕಣದಲ್ಲಿ ನಾಯಕರ ರಣೋತ್ಸಾಹ ಕಂಡು ಬಂದಿಲ್ಲ.

        ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರಲು ಮಾತ್ರ ಒತ್ತು ನೀಡಿದ್ದಾರೆ. ಶಿವಮೊಗ್ಗದ 7 ವಿಧಾನಸಭೆ ಕ್ಷೇತ್ರಗಳ ಪೈಕಿ 6ರಲ್ಲಿ ಬಿಜೆಪಿ ಗೆದ್ದಿದ್ದರೂ ಮೈತ್ರಿ ಪಕ್ಷಗಳ ಹೊಸ ಸವಾಲು ಮುಖಂಡರ ಬಿಜೆಪಿ ನಾಯಕರ ನಿದ್ದೆಗೆಡಿಸಿದ್ದಾರೆ.

          ಮತ್ತೊಂದು ಪ್ರಮುಖ ಕ್ಷೇತ್ರ ಬಳ್ಳಾರಿಯಲ್ಲಿ ತಮ್ಮ ಸಹೋದರಿ ಶಾಂತಾ ಅವರನ್ನು ಗೆಲ್ಲಿಸಿಕೊಳ್ಳಲು ಶ್ರೀರಾಮುಲು ಸತತ ಶ್ರಮ ಪಡುತ್ತಿದ್ದಾರೆ. ಆದರೆ ಅವರಿಗೆ ಬಿಜೆಪಿಯ ಇತರೆ ಮುಖಂಡರಿಂದ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ. ಪಕ್ಷದ ಹಿರಿಯ ಮುಖಂಡರಾದ ಜಗದೀಶ್ ಶೆಟ್ಟರ್. ಆರ್.ಅಶೋಕ್ ಮುಂತಾದವರು ಕ್ಷೇತ್ರದತ್ತ ಮುಖ ಮಾಡಿಲ್ಲ.

           ಜಮಖಂಡಿಯಲ್ಲಿ ಕಳೆದ ಬಾರಿ ಬಂಡಾಯವಾಗಿ ಸ್ಪರ್ಧಿಸಿದ್ದ ಸಂಗಮೇಶ್ ನಿರಾಣಿ ವಿರುದ್ಧ ಶಿಸ್ತು ಕ್ರಮ ಹಿಂತೆಗೆದುಕೊಂಡ ಹಿನ್ನೆಲೆಯಲ್ಲಿ ಅವರು ಹಾಗೂ ಅವರ ಸಹೋದರ, ಮಾಜಿ ಸಚಿವ ಮುರುಗೇಶ್ ನಿರಾಣಿ ಪ್ರಚಾರ ಕಣಕ್ಕೆ ಧುಮುಕಿರುವುದರಿಂದ ಪ್ರಚಾರಕ್ಕೆ ರಂಗು ಬಂದಿದೆ. ಹಿರಿಯ ಮುಖಂಡ, ಮಾಜಿ ಸಚಿವ ಗೋವಿಂದಕಾರಜೋಳ ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇತರೆ ರಾಜ್ಯ ಮುಖಂಡರು ಇನ್ನೂ ಪ್ರಚಾರಕ್ಕೆ ಬಂದಿಲ್ಲ.

           ಕಳೆದ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಗೆದ್ದು ಅಧಿಕಾರ ಹಿಡಿಯಲಾಗದ ನಿರಾಸೆ ಕಾಡಿರುವುದೇ ಬಿಜೆಪಿ ಮುಖಂಡರ ನಿರುತ್ಸಾಹಕ್ಕೆ ಕಾರಣ ಎನ್ನಲಾಗಿದೆ. ಮಂಡ್ಯ ಹಾಗೂ ರಾಮನಗರ ಕ್ಷೇತ್ರಗಳಲ್ಲಿಯೂ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸುತ್ತಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap