ಮೇಕೆದಾಟು ಯೋಜನೆ : ಪರಿಸರ ನಿರಾಕ್ಷೇಪಣಾ ಪತ್ರ ಕೋರಿ ಕೇಂದ್ರಕ್ಕೆ ಪತ್ರ

ಬೆಂಗಳೂರು

      ಮೇಕೆದಾಟು ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕಾವೇರಿ ನೀರಾವರಿ ನಿಗಮ ನಿಯಮಿತ ‘ಪರಿಸರ ನಿರಾಕ್ಷೇಪಣಾ’ ಕೋರಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ನದಿಕಣಿವೆ ಮತ್ತು ಜಲವಿದ್ಯುತ್ ಯೋಜನೆಯ ನಿರ್ದೇಶಕರಿಗೆ ಪತ್ರ ಬರೆದಿದೆ.

       ಮೇಕೆದಾಟು ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆ ಬೆಂಗಳೂರು, ರಾಮನಗರ, ಚಾಮರಾಜನಗರ ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಹಾಗೂ ವಾರ್ಷಿಕ 400 ಮೆ ವ್ಯಾ ಜಲವಿದ್ಯುತ್ ಉತ್ಪಾದನೆಯ ವಿವಿಧೋದ್ದೇಶ ಯೋಜನೆಯಾಗಿದೆ.

      ರಾಜ್ಯದಲ್ಲಿ ಕೃಷ್ಣ, ಕಾವೇರಿ ಅಲ್ಲದೇ 13 ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿದ್ದರೂ ಸಹ ಬರ ಪರಿಸ್ಥಿತಿ, ಕುಡಿಯುವ ನೀರು ಹಾಗೂ ವಿದ್ಯುತ್ ಅಭಾವ ತಲೆದೋರಿದೆ.

     ಬೆಂಗಳೂರು ಹಾಗೂ ಕಾವೇರಿ ಕೊಳ್ಳದ ಪ್ರದೇಶಗಳಿಗೆ ಜಲಸಂರಕ್ಷಣೆ ಮಾರ್ಗವಾಗಿ ನೀರಿನ ಅಭಾವ ತಗ್ಗಿಸಲು ಮತ್ತು ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ, ಕಾವೇರಿ ನೀರಾವರಿ ನಿಗಮ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಯೋಜನೆ ರೂಪಿಸಿದೆ. ಶಿವನಸಮುದ್ರದಿಂದ ರಾಜ್ಯದ ಗಡಿವರೆಗೆ ಪ್ರಾಕೃತಿಕ ನದಿ ದಡ ಈ ಯೋಜನೆಗೆ ಬಳಸಲು ಉದ್ದೇಶಿಸಲಾಗಿದೆ.

      ಈ ಯೋಜನೆ ಯಶಸ್ವಿ ಅನುಷ್ಠಾನವಾದಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಅಗತ್ಯವಿರುವ ಪ್ರದೇಶಗಳಿಗೆ ನೀರು ಸೌಲಭ್ಯ ಒದಗಿಸಲು ನೀರಿನ ಕೆಳಮುಖ ಹರಿವಿಗೆ ಅನುಕೂಲವಾಗಿ 177.25 ಟಿಎಂಸಿ ನೀರು ಹರಿಬಿಡಲು ಸಾಧ‍್ಯವಾಗುತ್ತದೆ. ಈ ಪೈಕಿ ತಮಿಳುನಾಡಿಗೆ ಹರಿಯುವ 10 ಟಿಎಂಸಿ ನೀರು ಸೇರಿದೆ.

     ಈ ಯೋಜನೆಗೆ ಒಟ್ಟು 9 ಸಾವಿರ ಕೋಟಿ ರೂ. ಅಂದಾಜು ವೆಚ್ಚವಾಗಲಿದೆ. 5252.40 ಹೆಕ್ಟೇರ್ ಪ್ರದೇಶ ಅಗತ್ಯವಿದ್ದು, ಈ ಪೈಕಿ ನೀರಿನ ಹರಿವಿಗೆ 4996 ಹೆಕ್ಟೇರ್, 246.4 ಹೆಕ್ಟೇರ್ ಭೂಮಿ ಇತರ ನಿರ್ಮಾಣ ಚಟುವಟಿಕೆಗೆ ಬಳಸಲಾಗುತ್ತದೆ. 3181.9 ಹೆಕ್ಟೇರ್ ಪ್ರದೇಶ ಕಾವೇರಿ ವನ್ಯಜೀವಿ ಅಭಯಾರಣ್ಯಕ್ಕೆ ಸೇರಿದೆ. 1869.5 ಹೆಕ್ಟೇರ್ ಮೀಸಲು ಅರಣ್ಯಪ್ರದೇಶ ಮತ್ತು 201 ಹೆಕ್ಟೇರ್ ಪ್ರದೇಶ ಕಂದಾಯಭೂಮಿಯಾಗಿದೆ. ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ತಮಿಳುನಾಡು ಗಡಿಯಲ್ಲಿ 3.5 ಕಿ.ಮೀ ವ್ಯಾಪ್ತಿಯಲ್ಲಿ ಉದ್ದೇಶಿತ ಜಲವಿದ್ಯುತ್ ಯೋಜನೆ ಅನುಷ್ಠಾನವಾಗಲಿದೆ.

     ಹೀಗಾಗಿ ಈ ಉದ್ದೇಶಿತ ಯೋಜನೆಯನ್ನು ಪರಿಸರ ಪರಿಣಾಮ ಪರಿಶೀಲನೆ ಅಧಿಸೂಚನೆ 2006 ಮತ್ತು ನಂತರದ ತಿದ್ದುಪಡಿಗಳಡಿ ‘ಎ’ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿ ಈ ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯಿಂದ ಪರಿಸರ ನಿರಾಕ್ಷೇಪಣ ಅನುಮತಿ ಅಗತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap