ಶಿರಾ:
ಮಾನವ ಜನ್ಮ ಅಪರೂಪ ಅನ್ನುವ ನಂಬಿಕೆ ನಮ್ಮಲ್ಲಿದ್ದು ಇಂತಹ ಮಾನವ ಜನ್ಮದಲ್ಲಿ ದೇಶದ ಅಭಿವೃದ್ಧಿಗೆ ಎಲ್ಲರೂ ಪಣತೊಡಬೇಕಿದೆ ಯಷ್ಟೇ ಅಲ್ಲದೆ ಆರೋಗ್ಯ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಬೇಕಿದ್ದು ತಂಬಾಕು ಸೇವನೆಯಿಂದ ಮಾರಕ ರೋಗಗಳಿಗೆ ತುತ್ತಾಗ ಬೇಕಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ತಿಳಿಸಿದರು.
ಶಿರಾ ನಗರದ ಸೇಂಟ್ ಆನ್ಸ್ ಶಾಲೆಯಲ್ಲಿ ತಾ.ಕಾನೂನು ಸೇವಾ ಸಮಿತಿ ಹಾಗೂ ತಾ. ವಕೀಲರ ಸಂಘದ ವತಿಯಿಂದ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ಶುಕ್ರವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರು ದುಶ್ಚಟಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದು ಅಂತಹ ದುಶ್ಚಟಗಳಿಂದ ದೂರವಿರುವುದು ಅತ್ಯಗತ್ಯವಾಗಿದೆ. ತಂಬಾಕು ಸೇವನೆ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತಿದ್ದು ಅಂತಹ ರೋಗಗಳಿಂದ ದೂರವಿರಲು ತಂಬಾಕು ಸೇವನೆಯಿಂದ ದೂರವಿರುವುದು ಒಳಿತು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಕೆ.ಎಸ್.ಆಶಾ ಮಾತನಾಡಿ ರೋಗ ಮುಕ್ತ ಸಮಾಜ ನಿರ್ಮಾಣದ ದೃಷ್ಠಿಯಿಂದ ಮಕ್ಕಳು ತಮ್ಮ ಪೋಷಕರಿಗೆ ಆರೋಗ್ಯ ಸಂರಕ್ಷಣೆಯ ಬಗ್ಗೆ ತಿಳಿ ಹೇಳಬೇಕು ಎಂದರು.ಸೇಂಟ್ ಆನ್ಸ್ ಶಾಲಾ ಮುಖ್ಯಸ್ಥರಾದ ಸಿಸ್ಟರ್ ಸುಸಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಎಸ್.ಹೆಚ್.ಜಗದೀಶ್, ಉಪಾಧ್ಯಕ್ಷ ಎಸ್.ಸಿ.ಮಂಜುನಾಥ್, ಕಾರ್ಯದರ್ಶಿ ಸಣ್ಣ ಕರೇಗೌಡ, ಖಜಾಂಚಿ ದೊಡ್ಡಕಾಮಣ್ಣ, ಸಂಘಟನಾ ಕಾರ್ಯದರ್ಶಿ ಸಣ್ಣೀರಪ್ಪ, ವಕೀಲರಾದ ರಂಗನಾಥ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ವಕೀಲರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
