ಬೆಂಗಳೂರು
ಜೆಡಿಎಸ್ ಕಾಂಗ್ರೆಸ್ ಒಟ್ಟಾಗಿ ಫೈಟ್ ಮಾಡಿದರೆ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು. ಇಂದು ನಡೆದ ಸಭೆಯಲ್ಲಿ ಈ ಬಗ್ಗೆ ಒಮ್ಮತದ ಚರ್ಚೆಯಾಗಿದ್ದು ಹೈಕಮಾಂಡ್ ಮಟ್ಟದಲ್ಲಿ ಸೀಟು ಹಂಚಿಕೆ ಅಂತಿಮವಾಗಲಿದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಯ ನಂತರ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ಮಾತುಕತೆ ನಡೆದಿದೆ. ಉತ್ತಮ ನಿರ್ಧಾರ ಕೈಗೊಳ್ಳುವಲ್ಲಿ ನಾವು ಸಫಲರಾಗಿದ್ದೇವೆ. ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ನಾವು ಇಂದು ಕೂಡ ಫಲಪ್ರದ ಮಾತುಕತೆಯನ್ನು ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಡುವೆ ಅಂತಿಮ ಹಂತದ ಮಾತುಕತೆ ನಡೆಯಲಿದೆ ಅದಾದ ಬಳಿಕ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ ಎಂದರು.
ಸ್ಥಾನ ಹಂಚಿಕೆ ಸಂಬಂಧ ಈ ಹಿಂದೆ ಹಾಗೂ ಇಂದು ಸುದೀರ್ಘ ಚರ್ಚೆ ನಡೆದಿದೆ. ಇಂದೂ ಕೂಡ ಸೀಟು ಹಂಚಿಕೆ ಅಂತಿಮವಾಗಿಲ್ಲ. ಆದರೆ ಈ ಸಂಬಂಧ ಚರ್ಚೆ ಹೈಕಮಾಂಡ್ ಮಟ್ಟದಲ್ಲಿ ನಡೆದು ಪೂರ್ಣಗೊಳ್ಳಲಿದೆ. ನಾವು ಮುಖ್ಯವಾಗಿ ಈ ಚುನಾವಣೆಯಲ್ಲಿ ಗೆಲ್ಲಬೇಕು ಎಂಬುದೇ ಪ್ರಮುಖವಾಗಿದೆ ಎಂದರು.
ಇಂದು ನಾನು, ಡಿಸಿಎಂ ಪರಮೇಶ್ವರ್, ಕೆ.ಸಿ.ವೇಣುಗೋಪಾಲ್, ಕುಮಾರಸ್ವಾಮಿ, ಡ್ಯಾನಿಶ್ ಅಲಿ ಎಲ್ಲ ಚರ್ಚೆ ಮಾಡಿದ್ದೀವಿ.ಉತ್ತಮ ನಿಟ್ಟಿನಲ್ಲಿ ಚರ್ಚೆ ಆಗಿದೆ. ಉತ್ತಮ ಚರ್ಚೆ ಮಾಡಿದ್ದೇವೆ. ಆಳವಾದ ಚರ್ಚೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲಾಗಿದೆ.ಉಳಿದ ಕ್ಷೇತ್ರಗಳ ಬಗ್ಗೆ ಯೂ ಚರ್ಚೆ ಮಾಡಿದ್ದೇವೆ.ಹಾಲಿ ಸಂಸದರು ಇರುವ 12 ಕ್ಷೇತ್ರಗಳ ಬಗ್ಗೆಯೂ ದೀರ್ಘವಾಗಿ ಚರ್ಚೆ ಮಾಡಿದ್ದೇವೆ. ಇನ್ನೂ ಅಂತಿಮ ರೂಪ ಕೊಟ್ಟಿಲ್ಲ ಎಂದರು.
ಉಮೇಶ್ ಜಾಧವ್ ಮೇಲೆ ನಾನು ಈಗಾಗಲೇ ಸ್ಪೀಕರ್‍ಗೆ ಪಿಟಿಷನ್ ಕೊಟ್ಟಿದ್ದೇನೆ.ಪೂರಕ ದಾಖಲೆಗಳನ್ನೆಲ್ಲ ಹಿಂದೆಯೇ ಕೊಟ್ಟಿದ್ದೇನೆ. ಸ್ಪರ್ಧೆ ಮಾಡ್ತೀವಿ ಅನ್ನುವರಿಗೆ ಬೇಡ ಎನ್ನೋಕಾಗತ್ತಾ. ಅಷ್ಟೇ ನಂಬರ್ ಇಷ್ಟೇ ನಂಬರ್ ಎನ್ನೋದಿಲ್ಲ ಎಂದರು.
ಡ್ಯಾನಿಶ್ ಅಲಿ ಮಾತನಾಡಿ, ಎರಡೂ ಪಕ್ಷಗಳು ಸೀಟ್ ಶೇರಿಂಗ್ ಬಗ್ಗೆ ಚರ್ಚೆ ಮಾಡಿದ್ದೇವೆ. ಕಳೆದ ವಾರ ರೇವಣ್ಣ ಮತ್ತು ವಿಶ್ವನಾಥ್ ಜೊತೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದರು. ಆ ಮೀಟಿಂಗ್‍ನಲ್ಲಿ ನಡೆದ ವಿಚಾರಗಳನ್ನು ಇಂದು ಚರ್ಚೆ ಮಾಡಿದ್ದೇವೆ. ಇದಕ್ಕಿಂತ ಮುಂದಿನ ಹಂತವನ್ನು ನಾವು ಚರ್ಚೆ ಮಾಡಿದ್ದೇವೆ. ಇನ್ನೂ ಸ್ವಲ್ಪ ಚರ್ಚೆ ಆಗೋ ಅವಶ್ಯಕತೆ ಇದೆ.
ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಚರ್ಚೆಯನ್ನು ಮುಗಿಸಿ ಅಂತಿಮ ಗೊಳಿಸುತ್ತೇವೆ. ಹಲವು ಫಾರ್ಮುಲಾಗಳು ನಮ್ಮ ಮುಂದಿವೆ. ಬಿಜೆಪಿಯನ್ನು ಶಕ್ತಿ ಗುಂದಿಸುವುದಕ್ಕೆ ನಮ್ಮ ಬಳಿ ಸಾಕಷ್ಟು ಫಾರ್ಮುಲಾ ಇದೆ ಎಂದರು.