ಮಹಾರಾಷ್ಟ್ರ:
ದೇಶಾದ್ಯಂತ ಲಾಕ್ ಡೌನ್ ಇರುವಾಗ ವೇತನ ವಿಳಂಬ ಮಾಡಿದ ಕಾರಣ ಆಕ್ರೋಶಗೊಂಡ ನಿರ್ಮಾಣ ಸಂಸ್ಥೆಯ ಕಾರ್ಮಿಕರು ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಸೊಲ್ಲಾಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಕಲ್ಲು ತೂರಾಟದಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲೀಪ್ ಬಿಲ್ಡ್ಕಾನ್ ಕಚೇರಿಯ ಹೊರಗೆ ಈ ಘಟನೆ ನಡೆದಿದ್ದು, ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 166ರಲ್ಲಿ ಕಂಪನಿ ವಹಿಸಿಕೊಂಡಿದ್ದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಂಪನಿಯಿಂದ ಕಾರ್ಮಿಕರಿಗೆ ಆಹಾರ ನೀಡಲು ಸಾಧ್ಯವಿಲ್ಲ, ಅರ್ಧ ಸಂಬಳ ನೀಡುವುಗಾಗಿ ನಿರ್ಮಾಣ ಸಂಸ್ಥೆಯ ಮ್ಯಾನೇಜರ್ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಮಿಕರ ಗುಂಪೊಂದು ಪೂರ್ಣ ವೇತನ ನೀಡುವಂತೆ ಒತ್ತಾಯಿಸಿದೆ. ಕಂಪನಿ ಸಿಬ್ಬಂದಿ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ಆಗಮಿಸಿದ್ದೇವು. ಆದರೆ, ಪೊಲೀಸರು ಬಂದ ಕೂಡಲೇ ಕಾರ್ಮಿಕರು ಕಚೇರಿ ಹಾಗೂ ಪಾರ್ಕಿಂಗ್ ಮಾಡಲಾದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ಪೊಲೀಸರು ತಿಳಿಸಿದರು.
ಕಲ್ಲು ತೂರಾಟದಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಎರಡು ಪೊಲೀಸ್ ಕಾರುಗಳು ಸೇರಿದಂತೆ ಅನೇಕ ವಾಹನಗಳನ್ನು ಉದ್ರಿಕ್ತ ಗುಂಪು ಧ್ವಂಸಗೊಳಿಸಿವೆ. ಹೆಚ್ಚುವರಿ ಪೊಲೀಸ್ ತುಕಡಿಯನ್ನು ಕರೆಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ವಿವಿಧ ಸೆಕ್ಷನ್ ಗಳಡಿಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.