ಸರ್ಕಾರಿ ಜಾಗದ ಮರಗಿಡ ತೆರವು: ತಡೆಗೆ ಆಗ್ರಹ

ಗುಬ್ಬಿ

    ಸರ್ಕಾರಿ ಬೀಳು ಪ್ರದೇಶದಲ್ಲಿ ಅನುಭವಕ್ಕೆ ಬರುವ ನಿಟ್ಟಿನಲ್ಲಿ ಕೆಲವರು ಬೀಳು ಜಮೀನಿನಲ್ಲಿದ್ದ ಮರಗಿಡಗಳನ್ನು ಜೆಸಿಬಿ ಯಂತ್ರ ಬಳಸಿ ಅಚ್ಚಕಟ್ಟು ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಸ್ವತ್ತು ಅಕ್ರಮವಾಗಿ ತಮ್ಮದಾಗಿಸಿಕೊಳ್ಳುವ ಕೆಲಸಕ್ಕೆ ತಾಲ್ಲೂಕು ಆಡಳಿತ ಕೂಡಲೇ ತಡೆಯೊಡ್ಡಿ ಕ್ರಮವಹಿಸಬೇಕು ಎಂದು ಬಾಗೂರು ಗ್ರಾಮಸ್ಥರು ಭಾನುವಾರ ಗುಬ್ಬಿ ಪೊಲೀಸ್ ಠಾಣೆಗೆ ಹಾಗೂ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

    ತಾಲ್ಲೂಕಿನ ನಿಟ್ಟೂರು ಹೋಬಳಿ ಬಾಗೂರು ಗ್ರಾಮದ ಸರ್ವೆ ನಂಬರ್ 4, 9 ಮತ್ತು 11 ರಲ್ಲಿ ಸುಮಾರು 28 ಎಕರೆ ಪ್ರದೇಶ ಸರ್ಕಾರಿ ಬೀಳು ಪ್ರದೇಶವಾಗಿದೆ. ಹಿಂದಿನಿಂದಲೂ ಸರ್ಕಾರಿ ಸ್ವತ್ತಾಗಿರುವ ಈ ಜಮೀನಿನಲ್ಲಿ ಈ ಹಿಂದೆ ಬಗರ್‍ಹುಕುಂ ಮೂಲಕ ಕೆಲ ರೈತರಿಗೆ ಮಂಜೂರಾಗಿದೆ. ಆದರೆ ಉಳಿದ 28 ಎಕರೆಯಲ್ಲಿ 4 ಎಕರೆ ಅಚ್ಚಕಟ್ಟು ಮಾಡಿಕೊಳ್ಳುವ ಜತೆಗೆ ಅಲ್ಲಿನ ಮರಗಿಡಗಳ ಧ್ವಂಸ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಮೌಖಿಕವಾಗಿ ದೂರು ನೀಡಲಾಗಿತ್ತು. ಆದರೂ ಕ್ರಮವಹಿಸಲು ವಿಳಂಬವಾಗಿದೆ ಎಂದು ಸ್ಥಳೀಯರು ದೂರಿದರು.

    ಎರಡು ಜೆಸಿಬಿ ಯಂತ್ರ ಬಳಸಿ ಸರ್ಕಾರಿ ಬೀಳು ಪ್ರದೇಶಕ್ಕೆ ಅತಿಕ್ರಮಣ ಮಾಡಿದ್ದೂ ಅಲ್ಲದೇ ಅಲ್ಲಿನ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಲಾಗಿದೆ. ಬಗರ್‍ಹುಕುಂ ಮಂಜೂರು ಪಡೆಯಲು ನಿಯಮಾನುಸಾರ ಕ್ರಮವಹಿಸಬೇಕಿದೆ. ಅಲ್ಲಿ ಈ ಹಿಂದೆ ಮಂಜೂರಾದ ರೈತರು ಅನುಭವದಲ್ಲಿದ್ದಾರೆ. ಆದರೆ ಅರ್ಜಿ ನಮೂನೆ 57 ಸಲ್ಲಿಸಿದ ನಂತರ ಸ್ಥಳ ಗುರುತಿಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಸರ್ಕಾರಿ ಬೀಳು ಜಾಗವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳುವ ಕೆಲಸ ತಾಲ್ಲೂಕು ಆಡಳಿತ ಮಾಡಬೇಕು ಎಂದು ಸ್ಥಳೀಯ ದಯಾನಂದಸ್ವಾಮಿ ಮನವಿ ಮಾಡಿದರು.

     ನಿಟ್ಟೂರು ಹೋಬಳಿಯಲ್ಲಿ ಅತಿಕ್ರಮಣ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಜೊತೆಗೆ ಗೋಮಾಳ, ಗೋಕಟ್ಟೆ ಜಾಗಗಳು ಮಾಯವಾಗಿವೆ. ಈಗ ಸರ್ಕಾರಿ ಖರಾಬು, ಬೀಳು ಸ್ಥಳಗಳತ್ತ ಕಣ್ಣು ಬಿದ್ದಿದೆ. ಸರ್ಕಾರಿ ಜಾಗ ಅತಿಕ್ರಮಣ ಮಾಡುವವರಿಗೆ ಯಾರ ಬೆಂಬಲ ಸಿಕ್ಕಿದೆ ತಿಳಿದಿಲ್ಲ. ಸ್ಥಳೀಯರಿಗೆ ಅಚ್ಚರಿ ಮೂಡಿಸುವ ರೀತಿ ಬಾಗೂರು ಗ್ರಾಮದ ಸರ್ಕಾರಿ ಬೀಳು ಅಚ್ಚಕಟ್ಟು ನಡೆದಿರುವುದು ವಿಪರ್ಯಾಸ. ಈ ಬಗ್ಗೆ ತಾಲ್ಲೂಕು ಆಡಳಿತ ಕ್ರಮವಹಿಸಬೇಕು. ಕೂಡಲೇ ಸ್ಥಳಕ್ಕೆ ಹಾಜರಾಗಿ ಸರ್ಕಾರಿ ಸ್ಥಳ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಸ್ಥಳೀಯ ಗುರುಸಿದ್ದಯ್ಯ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಂಜುನಾಥ್, ರಘು, ವಿಜಯ್‍ಕುಮಾರ್, ಸಿದ್ದರಾಮಯ್ಯ, ರಾಜೇಶ್, ಯಡಿಯೂರಪ್ಪ, ಸಿದ್ದರಾಮಪ್ರಭು ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link