ಚಿತ್ರದುರ್ಗ:
ಎಲ್ಲವೂ ಸುಭಿಕ್ಷವಾಗಿದ್ದಾಗ ನಿಮ್ಮ ಕೆಲಸವೇನು? ಇದು ಪರೀಕ್ಷೆಯ ಕಾಲ ಅವರ ಮೇಲೆ ಇವರು, ಇವರ ಮೇಲೆ ಅವರು ಸಬೂಬು ಹೇಳಬೇಡಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಿ ನೀರಿಗಾಗಿ ಹಳ್ಳಿಯ ಮಹಿಳೆಯರು ನಗರಕ್ಕೆ ಬಂದು ಕಾಲಿ ಕೊಡಗಳನ್ನು ಪ್ರದರ್ಶಿಸಲು ಅವಕಾಶ ಕೊಡಬೇಡಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
2018-19 ನೇ ಸಾಲಿಗೆ ಬರ ನಿರ್ವಹಣೆ ಅಂಗವಾಗಿ ಚಿತ್ರದುರ್ಗ ತಾಲೂಕಿನ ಗ್ರಾಮಗಳಿಗೆ ಪ್ರತಿನಿತ್ಯವೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಸಂಬಂಧ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಗ್ರಾ.ಪಂ.ಪಿ.ಡಿ.ಓ. ಗ್ರಾಮ ಲೆಕ್ಕಾಧಿಕಾರಿ, ಕಂದಾಯಾಧಿಕಾರಿ, ಬೆಸ್ಕಾಂ ಹಾಗೂ ನೀರು ಸರಬರಾಜು ಇಂಜಿನಿಯರ್‍ಗಳ ಸಭೆಯಲ್ಲಿ ಶಾಸಕರು ಮಾತನಾಡಿದರು
ಗ್ರಾ.ಪಂ., ತಾ.ಪಂ., ಜಿ.ಪಂ. ಸದಸ್ಯರು ಹಾಗೂ ಅಧ್ಯಕ್ಷರುಗಳು ಅಧಿಕಾರಿಗಳೊಂದಿಗೆ ಹೊಂದಾಣಿಕೆಯಿಟ್ಟುಕೊಂಡು ಗ್ರಾಮಗಳಲ್ಲಿ ಜನರಿಗೆ ಮೊದಲು ಕುಡಿಯುವ ನೀರು ನೀಡಿ ಒಳ್ಳೆಯ ಹೆಸರು ತೆಗೆದುಕೊಂಡರೆ ಮುಂದಿನ ಚುನಾವಣೆಗಳಲ್ಲಿ ನಿಮ್ಮನ್ನು ಗೆಲ್ಲಿಸುತ್ತಾರೆ. ಜನ ವಿಕೋಪಕ್ಕೆ ಹೋಗಲು ಬಿಡಬೇಡಿ. ಮುಂದಿನ ಮಳೆಗಾಲ ಜೂನ್, ಜುಲೈವರೆಗೆ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಅದಕ್ಕಾಗಿ ಯುದ್ದೋಪಾದಿಯಲ್ಲಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಹದಿನಾಲ್ಕನೆ ಹಣಕಾಸು ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಬೇಡ. ಎಲ್ಲವನ್ನು ಸ್ಥಗಿತಗೊಳಿಸಿ ಮೊದಲು ಕುಡಿಯುವ ನೀರಿಗೆ ಆದ್ಯತೆ ಕೊಡಿ. ಪಾರ್ಲಿಮೆಂಟ್ ಚುನಾವಣೆಗೂ ಜನರಿಗೆ ಕುಡಿಯುವ ನೀರು ನೀಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಕುಡಿಯುವ ನೀರಿನ ವಿಚಾರವಾಗಿ ನಿರ್ಲಕ್ಷೆ ಬೇಡ. ಗಂಭೀವಾಗಿ ತೆಗೆದುಕೊಳ್ಳಿ. ನಮ್ಮನ್ನು ಗೆಲ್ಲಿಸಿರುವುದಕ್ಕಾದರೂ ಜನ ಸೇವೆ ಮಾಡಿ ಋಣ ತೀರಿಸಿಕೊಳ್ಳೋಣ. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಯಾರನ್ನು ಕೇಳುವುದಿಲ್ಲ ಸೋಲಿಸುತ್ತಾರೆ ಎಂದು ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಎಚ್ಚರಿಸಿದರು.
ಕುಡಿಯುವ ನೀರಿಗಾಗಿ ನಗರದಲ್ಲಿ ಬೋರ್‍ವೆಲ್‍ಗಳನ್ನು ಕೊರೆಸಲು 2.15 ಕೋಟಿ ರೂ.ಗಳನ್ನು ನೀಡಿದ್ದೇನೆ. ಇಪ್ಪತ್ತು ಬೋರ್‍ಗಳನ್ನು ಕೊರೆಯಲಾಗಿದೆ. ಇನ್ನು ಮೂವತ್ತು ಬೋರ್‍ಗಳನ್ನು ಕೊರೆಸಬೇಕಾಗಿದೆ. ಚೌಕಾಸಿಯಿಲ್ಲದೆ ಒಂದೊಂದು ಬೋರ್‍ಗೆ ನಾಲ್ಕು ಲಕ್ಷ ರೂ.ಗಳನ್ನು ನೀಡಿದ್ದೇನೆ ಕುಡಿಯುವ ನೀರಿನ ವಿಚಾರದಲ್ಲಿ ಮಾತ್ರ ತಾತ್ಸಾರ ಮಾಡಬೇಡಿ. ಕ್ಷೇತ್ರದ ಜನರಿಗೆ ಉತ್ತರ ಕೊಡಬೇಕಾದವನು ನಾನು ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಚಿತ್ರದುರ್ಗ ತಾಲೂಕಿನಲ್ಲಿ ಜಾನುವಾರುಗಳ ಮೇವಿಗೆ ಎಲ್ಲಿಯೂ ಸಮಸ್ಯೆಯಿಲ್ಲ. ನೀರು ನೀಡಿ ಜನ-ಜಾನುವಾರುಗಳನ್ನು ಉಳಿಸಿಕೊಳ್ಳಿ. ಬೇಸಿಗೆ ಕಾಲದಲ್ಲಿಯೇ ನಿಮ್ಮ ನಿಜವಾದ ಸಾಮಥ್ರ್ಯವನ್ನು ತೋರಿಸಬೇಕು. ಎಲ್ಲವನ್ನು ಶಾಸಕರು, ಸಂಸದರು, ಮಂತ್ರಿಗಳೆ ಬಂದು ನೋಡಲು ಆಗಲ್ಲ. ಸ್ಥಳೀಯವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕಾಗಿಯೇ ನಿಮ್ಮನ್ನು ಜನ ಗೆಲ್ಲಿಸಿಕೊಂಡಿರುವುದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಹಗಲು ರಾತ್ರಿ ಕೆಲಸ ಮಾಡಿ ಬರವನ್ನು ನಿಭಾಯಿಸಿ ಎಂದು ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಶಾಸಕರು ಕರೆ ನೀಡಿದರು.
ಕುಡಿಯುವ ನೀರಿನ ಘಟಕಗಳಲ್ಲಿ ಎರಡು ಸಾವಿರ ಕೋಟಿ ರೂ.ಗಳನ್ನು ಹಾಳು ಹೊಂಡದಲ್ಲಿ ಹಾಕಿದಂತಾಗಿದೆ. ಹದಿನೆಂಟು ಸಾವಿರ ಘಟಕಗಳಲ್ಲಿ ಶೇ.80 ರಷ್ಟು ಘಟಕಗಳು ಕೆಟ್ಟು ನಿಂತಿವೆ. ಇದಕ್ಕಿಂತಲೂ ದೊಡ್ಡ ಹಗರಣ ಮತ್ತೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಓಬೇನಹಳ್ಳಿ ಗ್ರಾಮದಲ್ಲಿ ಅನಗತ್ಯ ವಸ್ತುಗಳನ್ನು ಖರೀಧಿ ಮಾಡಿರುವುದಿಂದ ಹದಿನಾಲ್ಕು ಯೋಜನೆ ಹಣಕಾಸಿಗೆ ಅನುಮೋದನೆ ಕೊಡಬೇಡಿ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು.
ಬೇಸಿಗೆ ಆರಂಭವಾಗಿರುವುದರಿಂದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇದು ಪರೀಕ್ಷೆಯ ಕಾಲವಿದ್ದಂತೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಒಡನಾಟವಿಟ್ಟುಕೊಂಡು ಮೇಲಾಧಿಕಾರಿಗಳನ್ನು ಭೇಟಿ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಕುಡಿಯುವ ನೀರಿನ ಸಮಸ್ಯೆ ನೀಗಿಸಿ. ಜಿಲ್ಲಾ ಮಂತ್ರಿಗಳೊಡನೆ ಮಾತುಕತೆ ನಡೆಸಿ ತುರ್ತು ಸಭೆ ಕರೆಯುವುದು ಒಳ್ಳೆಯದು ಎಂದು ಶಾಸಕರು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಹೆಚ್.ಹನುಮಂತಪ್ಪ, ತಾ.ಪಂ.ಅಧ್ಯಕ್ಷ ನಿಂಗರಾಜ್, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ವೇದಿಕೆಯಲ್ಲಿದ್ದರು.