ಸುಳ್ಳು ಆರೋಪ ನಿಲ್ಲಿಸುವಂತೆ ಸಂಜನಾಗೆ ಕೋರಿದ ರವಿ ಶ್ರೀವತ್ಸ

ಬೆಂಗಳೂರು

       ಗಂಡ ಹೆಂಡತಿ ಚಿತ್ರದ ಶೂಟಿಂಗ್ ವೇಳೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ಆರೋಪವು ಸುಳ್ಳಿನ ಕಂತೆಯಾಗಿದ್ದು, ಸುಳ್ಳು ಆರೋಪ ಮಾಡಿರುವ ಸಂಜನಾ ಶುಕ್ರವಾರ ಮಧ್ಯಾಹ್ನ 1 ಗಂಟೆಯ ಒಳಗಡೆ ಕ್ಷಮೆ ಕೇಳಬೇಕೆಂದು ನಿರ್ದೇಶಕ ರವಿ ಶ್ರೀವತ್ಸ ಗಡುವು ನೀಡಿದ್ದಾರೆ.

       ಸಂಜನಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಸುದ್ದಿಗೋಷ್ಠಿ ನಡೆಸಿದ ರವಿ ಶ್ರೀವತ್ಸ, ಮೊದಲು ಒಂದು ಕಿಸ್‍ಯಿಂದ 10 ಕಿಸ್, 10 ಕಿಸ್‍ಯಿಂದ 30 ಕಿಸ್ ಮಾಡಿಸಿದ್ದರು ಎನ್ನುವ ಸಂಜನಾ ಆರೋಪಕ್ಕೆ, ಕಿಸ್ ದೃಶ್ಯವನ್ನಿಟ್ಟು ನಾನು ಈ ಸಿನಿಮಾ ಮಾಡಿಲ್ಲ. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರಿದ್ದರು. ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಇದ್ದರು. ಇವರೆಲ್ಲಾ ಇರುವಾಗ ನಾನು ಹೇಗೆ ಕಿಸ್ ಮಾಡಿಸಲಿ. ಸಂಜನಾ ಪತ್ರಿಕೆಯೊಂದರಲ್ಲಿ ನನಗೆ ಮೊದಲು ಕಿಸ್ ಮಾಡುವಾಗ ಸ್ವಲ್ಪ ನರ್ವಸ್ ಆದೆ. ನಂತರ ಕಿಸ್ ಸೀನ್ ಮಾಡುವಾಗ ನನಗೆ ನರ್ವಸ್ ಹೋಯಿತು ಎಂದು ಹೇಳಿದ್ದನ್ನು ರವಿ ಶ್ರೀವತ್ಸ ಉಲ್ಲೇಖಿಸಿದರು.

      `ಗಂಡ- ಹೆಂಡತಿ’ ಸಿನಿಮಾಗಾಗಿ ನಾನು ಮೊದಲು ರಕ್ಷಿತಾ ಪ್ರೇಮ್ ಅವರಿಗೆ ಆಹ್ವಾನ ನೀಡಿದ್ದೆವು. ಈ ಸಿನಿಮಾಗಾಗಿ ಶೈಲೇಂದ್ರ ಬಾಬು ಅವರು ನಿರ್ಮಾಪಕರಾಗಿದ್ದರು. ಆಗ ಕಲಾವಿದರು ಯಾರು ಎಂದು ಅವರು ಕೇಳಿದ್ದಾಗ ನಾನು ರಕ್ಷಿತಾ ಅವರ ಹೆಸರು ಹೇಳಿದೆ. ನಂತರ ನಾನು ರಕ್ಷಿತಾ ಅವರನ್ನು ಸಂಪರ್ಕಿಸಿದಾಗ ಅವರು ನಾನು ಮದುವೆಯಾಗುತ್ತಿದ್ದೇನೆ. ಈ ರೀತಿಯ ಸಿನಿಮಾ ಮಾಡುವುದು ಸರಿಯಲ್ಲ ಎಂದು ಹೇಳಿ ಈ ಚಿತ್ರಕ್ಕೆ ನಾಯಕಿಯಾಗಲು ನಿರಾಕರಿಸಿದ್ದರು. ನಂತರ ಈ ಸಿನಿಮಾಗಾಗಿ ಹೊಸಬರ ಆಯ್ಕೆಗೆ ತೀರ್ಮಾನಿಸಿದೆವು.

      ಹಿಂದಿಯ `ಮರ್ಡರ್’ ಸಿನಿಮಾದಲ್ಲೂ ಕೂಡ ಹೊಸಬರು ನಟಿಸಿದ್ದರು. ಹಾಗಾಗಿ ನಾವು ಕನ್ನಡದಲ್ಲೂ ಹೊಸಬರಿಗೆ ಅವಕಾಶ ನೀಡಲು, ಮಲ್ಲಿಕಾ ಶೆರಾವತ್ ಪಾತ್ರಕ್ಕೆ ಸಂಜನಾ ಅವರನ್ನು ಆಯ್ಕೆ ಮಾಡಿದ್ದೆವು. ನಂತರ ನಾವು ಸಂಜನಾ ಅವರನ್ನು ಕತೆ ಹೇಳಿದೆ. ಅಲ್ಲದೇ ಮರ್ಡರ್ ಸಿನಿಮಾದ ಸಿಡಿಯನ್ನು ಹಾಕಿ ಅವರನ್ನು ತೋರಿಸಿ ಈ ರೀತಿಯಲ್ಲೇ ನಾನು ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದೆ. ಅಲ್ಲದೇ ಈ ಚಿತ್ರದ ಎರಡನೇ ಭಾಗದಲ್ಲಿ ಅವರಿಗೆ ನಾನು ತಾಳಿಯ ಮಹತ್ವದ ಬಗ್ಗೆ ತಿಳಿಸಿದ್ದೆ.

ಬೆತ್ತಲೆ ತೋರಿಸಿಲ್ಲ:

      ನಾನು ಈ ಚಿತ್ರದಲ್ಲಿ ಬೆತ್ತಲೆಯ ಸೀನ್ ತೋರಿಸಿಲ್ಲ. ಆಗ ಅವರು ನನಗೆ 16 ವರ್ಷ ಎಂದು ಹೇಳಿದ್ದರು. ಗಂಡ-ಹೆಂಡತಿ ಸಂಜನಾ ಅವರ ಮೊದಲ ಸಿನಿಮಾ ಅಲ್ಲ. ಈ ಹಿಂದೆ ಅವರು ಜೂನಿಯರ್ ಆರ್ಟಿಸ್ಟ್ ಆಗಿ ನಟನೆ ಮಾಡಿದ್ದರು. ಗಂಡ-ಹೆಂಡತಿ ಸಂಜನಾ ಅವರ 5ನೇ ಸಿನಿಮಾ, ಈ ಸಿನಿಮಾಗಾಗಿ ಮಲ್ಲಿಕಾ ಶರವಾತ್ ಪಾತ್ರಕ್ಕಾಗಿ 150ಕ್ಕೂ ಹೆಚ್ಚು ಜನರ ಆಡಿಶನ್ ನಡೆದಿತ್ತು. ಆಡಿಶನ್ ವೇಳೆ ಪಾಸಾದವರಿಗೆ ಮರ್ಡರ್ ಸಿನಿಮಾ ರಿಮೇಕ್ ಎಂದು ಹೇಳಿದ್ದಾಗ ಅವರು ಅಭಿನಯಿಸಲ್ಲ ಎಂದು ಹೇಳಿದ್ದರು. ಆದರೆ ಸಂಜನಾ ಒಪ್ಪಿಕೊಂಡಿದ್ದರು.

        ಯಾವುದೇ ಮಕ್ಕಳು ಹೊರಗೆ ಬರುತ್ತಾರೆಂದರೆ ತಮ್ಮ ಜೊತೆ ತಂದೆ- ತಾಯಿಯನ್ನು ಕರೆದುಕೊಂಡು ಬರುತ್ತಾರೆ. ಆದರೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಸಂಜನಾ ಅವರ ತಂದೆ ಬಂದಿರಲಿಲ್ಲ. ನಂತರ ಚಿತ್ರದ ಬಿಡುಗಡೆಯಾದ ಮೊದಲ ದಿನ ಸಂಜನಾ ಅವರ ತಂದೆ ಹಾಜರಾಗಿದ್ದರು. ಆದರೆ ಸಂಜನಾ, ನನ್ನ ತಂದೆ ಸಿನಿಮಾ ನೋಡಲು ಆಗಲಿಲ್ಲ. ನಂತರ ನನ್ನ ತಂದೆ ಸಿನಿಮಾ ನೋಡಿ ತಲೆ ತಗ್ಗಿಸಿ ಚಿತ್ರಮಂದಿರದಿಂದ ಹೊರ ಬಂದರು ಎಂದು ಹೇಳುತ್ತಾರೆ. ಈ 12 ವರ್ಷದಲ್ಲಿ ಅವರ ತಂದೆ ನನಗೆ ಕರೆ ಮಾಡಿ ನನ್ನ ಮಗಳನ್ನು ಯಾಕೆ ಈ ರೀತಿ ಬಳಸಿಕೊಂಡಿದ್ದೀರಾ ಎಂದು ಇದೂವರೆಗೆ ಕರೆ ಮಾಡಿ ಪ್ರಶ್ನೆ ಮಾಡಿಲ್ಲ ಎಂದರು.

ಗಂಡ- ಹೆಂಡತಿಯ ಬಾಂಧವ್ಯ:

       ನಾನು ಸೆಕ್ಸ್ ಸಿನಿಮಾ ಮಾಡುವುದ್ದಕ್ಕೆ ಇಲ್ಲಿ ಬಂದಿಲ್ಲ. ನಾನು ಇಲ್ಲಿ ಗಂಡ- ಹೆಂಡತಿಯ ಬಾಂಧವ್ಯವನ್ನು ತೋರಿಸಲು ಪ್ರಯತ್ನಪಟ್ಟಿದ್ದೇನೆ. ನಾನು ಹೆದರಿಸಿ ಕೆಲಸ ಮಾಡಿಲ್ಲ. ಚಿತ್ರದ ಮೊದಲ ದಿನದ ಫೋಟೋಶೂಟ್ ವೇಳೆ ಅವರು ಸಂಜನಾ ಬೋಲ್ಡ್ ಆಗಿ ನಟಿಸಿದ್ದರು. ಈ ವೇಳೆ ಚಿತ್ರದ ಸಹ ನಿರ್ದೇಶಕರು ನನಗೆ ಸಂಜನಾ ಹೇಗೆ ನಟಿಸಿದ್ದಾರೆ ನೋಡಿ ಎಂದು ಹೇಳಿದ್ದರು. ಸಂಜನಾ ಅವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಅವರಿಗೆ ಕನ್ನಡ ಹೇಳಿಕೊಟ್ಟು ಆಕೆಯನ್ನು ತಿದ್ದಿದ್ದೇವೆ.

        ಬ್ಯಾಂಕಾಕ್ ಶೂಟಿಂಗ್ ಬಳಿಕವೂ ಬೆಂಗಳೂರಿನಲ್ಲೂ ಕಿಸ್ಸಿಂಗ್ ದೃಶ್ಯದ ಶೂಟಿಂಗ್ ಮಾಡಿದ್ದಾರೆ ಎನ್ನುವ ಸಂಜನಾ ಆರೋಪಕ್ಕೆ, ಬ್ಯಾಂಕಾಕ್ ಶೂಟಿಂಗ್ ಹೋಗಿದ್ದಾಗ ಸಂಜನಾ ರಾತ್ರಿಯೆಲ್ಲಾ ಶಾಪಿಂಗ್ ಹೋಗುತ್ತಿದ್ದರು. ನಂತರ ಬೆಳಗ್ಗೆ ಬಂದಿದ್ದಾಗ ಅವರ ಕಣ್ಣು ಕೆಂಪಾಗಿತ್ತು. ಅವರು ಈ ಸ್ಥಿತಿಯಲ್ಲಿರುವಾಗ ನಾನು ಅವರಿಂದ ಹೇಗೆ ಕಿಸ್ಸಿಂಗ್ ಸೀನ್ ಮಾಡಿಸಲಿ? ಆ ಸಮಯದಲ್ಲೇ ನಾನು ಅವರಿಗೆ ಬೈದಿದ್ದೆ. ಆರಂಭದಲ್ಲಿ ಸಂಜನಾಗೆ ಗಂಡ- ಹೆಂಡತಿ ಸಿನಿಮಾದ ಮೂಲಕ ಪಬ್ಲಿಸಿಟಿ ಬೇಕಿತ್ತು. ಈಗ ಮೀಟೂ ಅಭಿಯಾನದ ಚಿತ್ರದ ವಿರುದ್ಧ ಹೇಳಿಕೆ ನೀಡಿ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಅರೋಪಿಸಿದರು.

10 ಕೋಟಿ ಆಸ್ತಿ ಒಡತಿ:

         ಸಂಜನಾ ಅವರ ಹತ್ತಿರ ಈಗ ಕೋಟಿ ರೂ. ಆಸ್ತಿ ಇದೆ. ಅದಕ್ಕೆಲ್ಲಾ ಐಟಿ ರಿರ್ಟನ್ಸ್ ಸಲ್ಲಿಸಿದ್ದಾರಾ. ಅವರು ಈಗ ಜಾಗ್ವಾರ್ ಕಾರಿನಲ್ಲಿ ಓಡಾಡುತ್ತಾರೆ. ನಾನು ಈಗ ಮಾರುತಿ ಬೆಲೆನೋ ಕಾರಿನಲ್ಲಿ ಓಡಾಡುತ್ತಿದ್ದೇನೆ. ಅವರು ಐಶಾರಾಮಿ ಮನೆಯಲ್ಲಿ ಇರುತ್ತಾರೆ. ನಾನು 8 ಸಾವಿರ ಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ಈಗ ಅವರು ತಮಿಳು, ತೆಲುಗು, ಮಲೆಯಾಳಂ ಎಲ್ಲ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈಗ ಅವರನ್ನು ಗಂಡ- ಹೆಂಡತಿ ಸಂಜನಾ ಎಂದು ಗುರುತಿಸುತ್ತಾರೆ. ಸಂಜನಾ ಅವರಿಗೆ ಕನ್ನಡ ಬಿಟ್ಟರೆ ಬೇರೆ ಚಿತ್ರರಂಗವಿದೆ. ನಮಗೆ ಕನ್ನಡ ಚಿತ್ರರಂಗ ಮಾತ್ರ ಇದೆ. ಈಗ ನನ್ನ ವಿರುದ್ಧ ಆರೋಪಿಸಿದ್ದನ್ನು ನಾಳೆ ಸಂಜನಾ ಬೇರೆ ಚಿತ್ರರಂಗದ ನಿರ್ದೇಶಕರನ್ನು ಮಾಡಬಹುದು ಎಂದು ಕಳವಳ ವ್ಯಕ್ತಪಡಿಸಿದರು.

       ಅಕ್ಟೋಬರ್ 16 ವರೆಗೂ ಸಂಜನಾ ನನಗೆ ಮೆಸೇಜ್ ಮಾಡಿದ್ದಕ್ಕೆ ಸಾಕ್ಷಿಗಳಿದೆ. ನನ್ನ ಹುಟ್ಟುಹಬ್ಬಕ್ಕೆ ನೀವು ಬನ್ನಿ. ಈ ದುಬಾರಿ ಹೋಟೆಲ್‍ಗೆ ನೀವು ಒಬ್ಬರೇ ಬರುತ್ತೀರಾ ಅಥವಾ ನಿಮ್ಮ ಸ್ನೇಹಿತರ ಜೊತೆ ಬರುತ್ತೀರಾ. ನಾನು ಸೀಟ್ ಬುಕ್ ಮಾಡಬೇಕೆಂದು ಹೇಳಿದ್ದರು. ನಂತರ ಸಂಜನಾ ಹಿಂದಿಯ `ಜಿಸ್ಮ್’ ಸಿನಿಮಾ ಮಾಡೋಣ ಎಂದು ಹೇಳಿದ್ದರು. ಆಗ ನಾನು ಗಂಡ- ಹೆಂಡತಿ ಸಿನಿಮಾ ಮಾಡಿದೆ ಸಾಕು ಎಂದು ಹೇಳಿದೆ ಎಂದು ವಿವರಿಸಿದ್ದಾರೆ.

ಮೀಟೂ ದುರುಪಯೋಗ:

        ಈ ನಡುವೆ ಸಾಹಿತಿ ಹಾಗೂ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಸ್ಯಾಂಡಲ್‍ವುಡ್ ನಟಿ ಸಂಜನಾ ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಮೊಟ್ಟ ಮೊದಲಿಗರು ಎಂದು ಕಿಡಿಕಾರಿದ್ದಾರೆ.

          ಮೀಟೂ ಅಭಿಯಾನದ ಮೂಲಕ ಹೊರಬರುತ್ತಿರುವವರ ನಾಯಕಿಯರ ಬಾಯಿಯನ್ನು ಕೆಲವು ಸಂಘಟನೆಗಳ ಮುಖಂಟೆಉ ಬಾಯಿ ಮುಚ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ನಿರ್ದೇಶಕರ ಸಂಘವನ್ನು ಕೂಡ ಉಲ್ಲೇಖ ಮಾಡಲಾಗುತ್ತಿದೆ. ಆದರೆ ನಿರ್ದೇಶಕರ ಸಂಘ ಮೀಟೂ ಅಭಿಯಾನವನ್ನು ಸ್ವಾಗತಿಸುತ್ತದೆ. ಶೋಷಣೆಗೆ ಒಳಗಾಗಿರುವ ಮಹಿಳೆಯ ಧ್ವನಿಯನ್ನು ಅಡಗಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ಅವರು ಹೇಳಿದರು.

          ಯಾವುದೇ ನಿರ್ದೇಶಕನಿಗೆ ಸಮಸ್ಯೆಯಾದರೆ ಅವರು ನಿರ್ದೇಶಕರ ಸಂಘಕ್ಕೆ ಬಂದು ದೂರು ನೀಡುತ್ತಾರೆ. ಮೀಟೂ ಅಭಿಯಾನ ಮಾಧ್ಯಮಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದರ ಮೂಲಕ ನಿಮ್ಮ ಸಮಸ್ಯೆಗೆ ಬಗೆಹರಿಯುವುದಿಲ್ಲ. ಆಯಾ ಸಂಘಗಳಿಗೆ ಹೋಗಿ ನಿಮಗೆ ಆದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿ ಅದು ನಿಮಗೆ ಆಗದಿದ್ದರೆ ಕಾನೂನಿನ ಮೊರೆ ಹೋಗಿ. ಆದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ ಎಂದು ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap