ಸಾಗುವಳಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ವಿರೋಧಿಸಿ ಡಿಸಿ, ತಹಶೀಲ್ದಾರ್ ಅಣಕು ಶವಯಾತ್ರೆ

ದಾವಣಗೆರೆ:

     ದಲಿತ ಸಾಗುವಳಿದಾರನಿಗೆ ಸೇರಿದ ಗೋಮಾಳದ ಜಮೀನಿನಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವ ಜಿಲ್ಲಾಡಳಿತದ ಕ್ರಮ ವಿರೋಧಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಹಾಗೂ ಹರಪನಹಳ್ಳಿಯ ಹಿಂದಿನ ತಹಶೀಲ್ದಾರ್ ಅವರುಗಳ ಅಣಕು ಶವಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

    ನಗರದ ಪಿಬಿ ರಸ್ತೆಯಲ್ಲಿರುವ ಶನಿಮಹಾತ್ಮ ದೇವಸ್ಥಾನದ ಎದುರಿನಿಂದ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹಾಗೂ ಹರಪನಹಳ್ಳಿಯ ಹಿಂದಿನ ತಹಶೀಲ್ದಾರ್ ಗುರುಬಸವರಾಜ್ ಅವರುಗಳ ಅಣಕು ಶವಯಾತ್ರೆ ಆರಂಭಿಸಿದ ದ.ಸಂ.ಸ ಕಾರ್ಯಕರ್ತರು ಡಿಸಿ ಕಚೇರಿಗೆ ತೆರಳಿ, ಜಿಲ್ಲಾಡಳಿತದ ದಲಿತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಅಣಕು ಶವಸಂಸ್ಕಾರ ಮಾಡುವ ಮೂಲಕ ಸಂತ್ರಸ್ತ ದಲಿತ ಕುಟುಂಬಕ್ಕೆ ನ್ಯಾಯ ಕಲ್ಪಿಸಬೇಕೆಂದು ಆಗ್ರಹಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಚ್.ಮಲ್ಲೇಶ್, ಹರಪನಹಳ್ಳಿ ತಾಲೂಕಿನ ಅರಸಿಕೆರೆ ಹೋಬಳಿಯ ಉಚ್ಚಂಗಿದುರ್ಗದ ಸ.ನಂ.441/ಎ2ರ ಗೋಮಾಳದ ಜಮೀನಿನಲ್ಲಿ ಕಳೆದ ಸುಮಾರು 45 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ದುಗ್ಗತ್ತಿ ಉಚ್ಚೆಂಗೆಪ್ಪ ಹಿರಿಯರು ಬಂದಿದ್ದು, ಆ ಬಂಜರು ಭೂಮಿಯನ್ನು ಉಚ್ಚೆಂಗೆಪ್ಪ ಕೃಷಿ ಯೋಗ್ಯವನ್ನಾಗಿ ಮಾಡಿಕೊಂಡಿದ್ದರು.

     ಅದೇ ಜಮೀನಿನಲ್ಲಿ ಅಕ್ರಮ ಕಲ್ಲು, ಬಂಡೆ, ಸಿಡಿಮದ್ದು ಕ್ವಾರಿ ನಡೆಸಲಾಗಿತ್ತು. ಸ್ಪೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಬಡಸಾಗುವಳಿದಾರ ಉಚ್ಚೆಂಗೆಪ್ಪನಿಗೆ ಹಿಂದೆ ಜಿಲ್ಲಾ ಸೆಷನ್ಸ್ ನ್ಯಾಯಾಲಯದ 5 ವರ್ಷ ಶಿಕ್ಷೆ ಸಹ ವಿಧಿಸಿತ್ತು. ತನ್ನದಲ್ಲದ ತಪ್ಪಿಗೆ ದುಗ್ಗತ್ತಿ ಉಚ್ಚೆಂಗೆಪ್ಪ ಬಳ್ಳಾರಿ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಂದಿದ್ದಾರೆ.

     ಉಚ್ಚೆಂಗಪ್ಪ ಸಾಗುವಳಿ ಮಾಡುತ್ತಿರುವ ಬಗ್ಗೆ ಇಷ್ಟೆಲ್ಲಾ ಪುರಾವೆಗಳಿದ್ದರೂ, ಜಿಲಾಧಿಕಾರಿ ಡಿ.ಎಸ್.ರಮೇಶ್ ಸ್ವಹಿತಾಸಕ್ತಿಯಿಂದ ಹರಪನಹಳ್ಳಿಯ ಹಿಂದಿನ ತಹಶೀಲ್ದಾರ್ ಗುರುಬಸವರಾಜ್ ಅವರಿಂದ ಅವರಿಗೆ ಬೇಕಾದಂತೆ ವರದಿ ಪಡೆದು, ಪರಿಶಿಷ್ಟ ಜಾತಿಗೆ ಸೇರಿದ ದುಗ್ಗತ್ತಿ ಉಚ್ಚೆಂಗಪ್ಪ ಸಾಗುವಳಿಯೇ ಮಾಡಿಲ್ಲ ಎಂಬುದಾಗಿ ನೆಪ ಹೇಳಿ, ಬೇರೆ, ಬೇರೆ ರೈತರು ಹೊಂದಿದ್ದ 7.20 ಎಕರೆ ಭೂಮಿಯನ್ನು ನಂದಿ ಸ್ಟೋನ್ ಕ್ರಷರ್‍ನವರಿಗೆ ಗಣಿಗಾರಿಕೆ ನಡೆಸಲು ಅನುಮತಿ ನೀಡಿ, ಉಚ್ಚೆಂಗಪ್ಪನವರಿಗೆ ಘನಘೋರ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.

      ಈ ಅನ್ಯಾಯವನ್ನು ಸರಿಪಡಿಸಬೇಕು. ಇಲ್ಲವೇ, ಸಂಕಷ್ಟದಲ್ಲಿದ್ದ ಉಚ್ಚೆಂಗೆಪ್ಪ ಮತ್ತು ಆತನ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಈ ನೋಂದ ಕುಟುಂಬವು ಕಳೆದ 334 ದಿನಗಳಿಂದ ನಗರದ ಜಿಲ್ಲಾಡಳಿತ ಭವನದ ಎದುರು ನಿರಂತರ ಹೋರಾಟ ನಡೆಸಿದರೂ ಜಿಲ್ಲಾಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು.

      ದಲಿತ ಕುಟುಂಬದ ದುಗ್ಗತ್ತಿ ಉಚ್ಚೆಂಗೆಪ್ಪ ಹಿರಿಯರ ಕಾಲದಿಂದಲೂ ಸಾಗುವಳಿ ಮಾಡಿಕೊಂಡ ದಾಖಲೆ ನೀಡಿ, ಕಲ್ಲು ಗಣಿಗಾರಿಕೆ ಆರೋಪದಲ್ಲಿ ಉಚ್ಚೆಂಗೆಪ್ಪ ಶಿಕ್ಷೆ ಅನುಭವಿಸಿದ್ದ ದಾಖಲೆ ಹೀಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರೂ ಅದನ್ನು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಪರಿಗಣಿಸಿಲ್ಲ. ಇನ್ನೂ ಮುಂದಾದರೂ ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪರ್ಯಾಯ ಭೂಮಿ ಮಂಜೂರಾತಿ ಮಾಡಿಕೊಡುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು. 

       ಪ್ರತಿಭಟನೆಯಲ್ಲಿ ದ.ಸಂ.ಸ ಜಿಲ್ಲಾ ಸಂಚಾಲಕ ಡಿ.ಹನುಮಂತಪ್ಪ, ಮುಖಂಡರಾದ ಪಿ.ತಿಪ್ಪೇರುದ್ರಪ್ಪ, ಹೆಚ್.ಸಿ.ಮಲ್ಲಪ್ಪ, ಜಿ.ಎಸ್.ಲೋಕೇಶ್, ಅಂಜಿನಪ್ಪ ನೀಲಗುಂದ, ಬಡ ಸಾಗುವಳಿದಾರ ದುಗ್ಗಾವತಿ ಉಚ್ಚೆಂಗೆಪ್ಪನ ಪತ್ನಿ ಮಂಜಮ್ಮ, ಪುತ್ರಿಯರಾದ ದುಗ್ಮ್ಮ, ರೇಣುಕಮ್ಮ, ಸುಜಾತಮ್ಮ ಮತ್ತಿತರರು ಪಾಲ್ಗೊಂಡಿದ್ದರು.

 

Recent Articles

spot_img

Related Stories

Share via
Copy link
Powered by Social Snap