ಲಂಬಾಣಿಗರ ಗುಳೆ, ಸಾಮೂಹಿಕ ವಲಸೆ ತಡೆಗಟ್ಟಲು ಒತ್ತಾಯಿಸಿ ಪತ್ರ ಚಳುವಳಿ

ಹರಿಹರ

     ರಾಜ್ಯದಲ್ಲಿ ಲಂಬಾಣಿ ಜನಾಂಗದ ಜನರು ಪ್ರತಿ ವರ್ಷ ಗುಳೆ ಹಾಗೂ ಸಾಮೂಹಿಕ ವಲಸೆ ಓಗುತ್ತಿದ್ದಾರೆ. ಇದನ್ನು ತಡೆಗಟ್ಟಲು ತಾಲೂಕು ಸಮಾಜದ ವತಿಯಿಂದ ಪತ್ರ ಚಳುವಳಿ ನಡೆಸಿ, ತಹಶೀಲ್ದಾರ್ ರೆಹಾನ್ ಪಾಷಾ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸಿ ಮಾತನಾಡಿದ ತಾಲೂಕು ಸಮಾಜದ ಗೌರವಾಧ್ಯಕ್ಷ ಬಿ.ಮೋತ್ಯನಾಯ್ಕ, ದೇಶದಲ್ಲಿ ಸುಮಾರು ಆರೇಳು ಕೋಟಿಯಷ್ಠು ಲಂಬಾಣಿಗರು ಚದುರಿ ಜೀವಿಸುತ್ತಿದ್ದಾರೆ. ಕರ್ನಾಟಕದಲ್ಲಿ ಮೂವತ್ತು ಲಕ್ಷದಷ್ಠು ಬಂಜಾರರು ಇರುವುದನ್ನು ಇತ್ತೀಚಿನ ಸಮಿಕ್ಷೇಗಳು ದೃಢಪಡಿಸಿವೆ. ಸ್ವಾತಂತ್ರ್ಯದ ಏಳು ದಶಕಗಳು ಉರುಳಿದರು ಲಂಬಾಣಿಗರಂತೂ ಸ್ವತಂತ್ರ ನೆಲೆಯಿಲ್ಲದೆ ಬದುಕುತ್ತಿದ್ದಾರೆ. ಲಂಬಾಣಿ ಜನರು ಪ್ರತಿ ವರ್ಷ ಗುಳೆ ಹಾಗೂ ಸಾಮೂಹಿಕ ವಲಸೆ ಓಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪತ್ರ ಚಳುವಳಿ ನಡೆಸುತ್ತಿದ್ದೇವೆ ಎಂದರು.

      ನಾವು ಬದುಕುತ್ತಿರುವ ತಾಂಡಗಳು ಇಂದಿಗೂ ಕಂದಾಯ ಗ್ರಾಮಗಳಾಗಿಲ್ಲ. ತಾಂಡಗಳ ಮನೆಯ ಹಕ್ಕು ಪತ್ರ ಇವರಿಗಿನ್ನೂ ಸಿಕ್ಕಿಲ್ಲ. ರಸ್ತೆ, ಶುದ್ಧ ಕುಡಿಯುವ ನೀರು, ಆಸ್ಪತ್ರೆ, ಸುಸಜ್ಜಿತ ಶಾಲೆ, ಉಳುಮೆ ಯೋಗ್ಯ ಭೂಮಿ, ಕೌಶಲ್ಯ ಅಧಾರಿತ ಉದ್ಯೋಗಗಳು ಇವರಿಂದ ಮರೀಚಿಕೆ ಯಾಗಿವೆ. ಅಲ್ಲೊಂದು ಇಲ್ಲೊಂದು ಉದ್ಯೋಗ ಅವಕಾಶ ಬಿಟ್ಟರೆ ಬಹುಸಂಖ್ಯಾತ ಲಂಬಾಣಿ ಸಮುದಾಯ ಇಂದಿಗೂ ಅನಕ್ಷರತೆ ಮತ್ತು ನಿರುದ್ಯೋಗದ ಸವಾಲು ಎದುರಿಸುತ್ತಿದ್ದೇವೆ ಎಂದು ಹೇಳಿದರು.

      ಬಡತನದಿ ತುತ್ತು ಕೂಳಿಗಾಗಿ ಪ್ರದೇಶದಿಂದ ಪ್ರದೇಶಕ್ಕೆ ಗುಳೆ ಹೊರಡುವುದು ಸಾಮಾನ್ಯವಾಗಿದೆ. ಗುಳೆ ಬಂಜಾರ ಜನಾಂಗವನ್ನು ಹೀನಾಯ ಸ್ಥಿತಿಗೆ ತಳ್ಳುತ್ತಿದೆ. ಗುಳೆ ಹೋದ ಪ್ರದೇಶದಲ್ಲಿ ನಾಗರಿಕ ಸೌಲಭ್ಯಗಳು ಸಿಗುತ್ತಿಲ್ಲ. ನೀರು, ಶೌಚಾಲಯ, ಸುಸಜ್ಜಿತ ವಸತಿ ಸೌಕರ್ಯಗಳಿಲ್ಲದೆ ಇವರು ಬದುಕಬೇಕಿದೆ. ಗುಳೆಯ ಕಾರಣ ಮಕ್ಕಳು ಶಾಲಾ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ ಎಂದರು.

       ತಾ.ಪಂ.ಮಾಜಿ ಸದಸ್ಯ ಅರ್ಜಾನಾಯ್ಕ ಯಲವಟ್ಟಿ ಮಾತನಾಡಿ, ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಎಥೇಚ್ಚವಾಗಿ ನಡೆದಿರುವ ಪ್ರಕರಣಗಳು ವರದಿಯಾಗಿವೆ. ಬಡತನದ ಕಾರಣಕ್ಕೆ ಮಕ್ಕಳು, ಯುವತಿಯರನ್ನು ಮಾರಾಟ ಮಾಡಿದ ಪ್ರಕರಣಗಳು ಈ ಸಮುದಾಯದಲ್ಲಿವೆ. ಸ್ಥಳೀಯವಾಗಿ ಉದ್ಯೋಗ ಸಿಗದ ಕಾರಣ ದೂರದ ಗೋವಾ, ಮಹಾರಾಷ್ಟ್ರ, ಕೇರಳ, ಮಹಾನಗರಗಳಾದ ಬೆಂಗಳೂರು. ಮಂಗಳೂರು, ಬಾಂಬೆ, ಹೈದ್ರಾಬಾದ್ ಗಳಿಗೆ ಗುಳೆ ಹೋಗುವುದು ಸರ್ವೇ ಸಾಮಾನ್ಯವಾಗುತ್ತಿದೆ ಎಂದರು.

         ಈ ಬೇಸಿಗೆಯಲ್ಲಂತೂ ಬಹುತೇಕ ತಾಂಡಗಳ ಮನೆಗಳ ಬಾಗಿಲು ಬಂದ್ ಮಾಡಿಕೊಂಡು ಹೋಗಿದ್ದಾರೆ. ಗುಳೆ ಹೊರಟಾಗ ಅಪಘಾತಗಳು ನಡೆದು ಸಾಲು ಸಾಲು ಸಾವುಗಳಾಗಿದ್ದಾವೆ. ಇತ್ತೀಚಿಗೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಿರದಹಳ್ಳಿ ತಾಂಡ ಕೂಲಿ ಕಾರ್ಮಿಕರನ್ನು ಮಹಾರಾಷ್ಟ್ರದಲ್ಲಿ ಗೃಹ ಬಂಧನದಲ್ಲಿಟ್ಟಿದ್ದರು. ವಿಜಯಪುರ ಜಿಲ್ಲೆಯ ಮಧಬಾವಿ ತಾಂಡದಿಂದ ಗುಳೆ ಹೊರಟಿದ್ದ ಇಪ್ಪತ್ತಕ್ಕೂ ಹೆಚ್ಚು ಜನ ಖಾಂಡಲಾ ಘಾಟ್ ಬಳಿ ನಡೆದ ಲಾರಿ ಅಪಘಾತದಲ್ಲಿ ಸಾವಿಗೀಡಾದರು. ಈಗಲೂ ಗೋವಾದಲ್ಲಿ ಹೊಟ್ಟೆಪಾಡಿಗಾಗಿ ಗುಳೆ ಹೋಗಿರುವವರನ್ನು ಅಲ್ಲಿನ ಸರ್ಕಾರ ಒಕ್ಕಲೆಬ್ಬಿಸುತ್ತಿದೆ.

          ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಲಂಬಾಣಿಗರ ಗುಳೆ ಬವಣೆಯನ್ನು ಪರಿಹರಿಸುವಲ್ಲಿ ಸರ್ಕಾರದ ಪ್ರಯತ್ನ ಗಂಭೀರವಾಗಿಲ್ಲ. ಸಮಾಜ ಕಲ್ಯಾಣ ಇಲಾಖೆ ಈ ಸಮುದಾಯದ ನೈಜ ಸಮಸ್ಯೆಗಳನ್ನು ಅಲಿಸಿ, ಪರಿಹರಿಸುವಲ್ಲಿ ವಿಫಲವಾಗಿದೆ. ಈ ಇಲಾಖೆಯಿಂದ ಸಿಗಬಹುದಾದ ಉದ್ಯೋಗ, ಇತ್ಯಾದಿ ಸೌಲಭ್ಯಗಳನ್ನು ನೈಜ ಪಲಾನುಭವಿಗಳಿಗೆ ತಲುಪಿಸುವಲ್ಲಿ ಮುತುವರ್ಜಿವಹಿಸುತ್ತಿಲ್ಲ.
ಕರ್ನಾಟಕ ತಾಂಡ ಅಭಿವೃದ್ದಿ ನಿಗಮವಿದೆ ಎಂಬ ಪರಿಜ್ಞಾನವು ಹೆಚ್ಚು ಜನರಿಗೆ ತಿಳಿದಿಲ್ಲ. ಈ ನಿಗಮದ ಕಾರ್ಯ ನಿಧಾನದ ಸರಿ ಪರಿಚಯವಾಗಿಲ್ಲ. ವಲಸೆ ತಡೆಗಟ್ಟುವುದು ಮತ್ತು ಸ್ಥಳೀಯವಾಗಿ ಉದ್ಯೋಗ ಗಳನ್ನು ಸೃಷ್ಠಿಸುವುದು ನಿಗಮದ ಆದ್ಯತೆಯ ಕೆಲಸವಾಗಬೇಕು. ರಾಜ್ಯದ ಲಂಬಾಣಿಗರ ಸ್ಥಿತಿಗತಿಗಳ ಸಂಪೂರ್ಣ ಮಾಹಿತಿ ನಿಗಮದಲ್ಲಿ ಇಂದಿಗೂ ಲಭ್ಯವಿಲ್ಲ. ನಿಗಮಕ್ಕೆ ಅಗತ್ಯ ಹಣಕಾಸು ನೀಡದೆ ಮೂಲೆಗುಂಪು ಮಾಡಲಾಗಿದೆ.

          ಈ ವೇಳೆ ಸಂಘದ ಅಧ್ಯಕ್ಷ ಕೃಷ್ಣನಾಯ್ಕ ಯಲವಟ್ಟಿ, ಪ್ರಧಾನ ಕಾರ್ಯದರ್ಶಿ ಮಂಜನಾಯ್ಕ ಹೆಚ್, ಖಜಾಂಚಿ ಶಿವಾನಂದ್ ಚೌಹ್ಹಾಣ್, ಏಕತಾ ವೇದಿಕೆಯ ಅಧ್ಯಕ್ಷ ಮಂಜ್ಯಾನಾಯಕ್, ಮುಖಂಡರಾದ ಜಗದೀಶ್ ನಾಯ್ಕ ಕೋಮರನಹಳ್ಳಿ, ಎಲ್.ಪರಮೇಶ್ ನಾಯ್ಕ ಕೋಮರನಹಳ್ಳಿ, ಬಾಬು ರಾಠೋಡ್, ಶಶಿನಾಯ್ಕ, ಬಿ.ಎಲ್. ಶಾಂತರಾಜ್, ಹೆಚ್.ಎಲ್. ಮಾರುತಿ, ಹೆಚ್. ಕುಮಾರ್ ನಾಯ್ಕ, ರಮೇಶ್ ನಾಯ್ಕ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap