ತುಮಕೂರು:
ನೀವು ಒಂದು ಪಕ್ಷ ಗಿಡಮರ ಬೆಳೆಸದಿದ್ದರೂ ಪರವಾಗಿಲ್ಲ, ಆದರೆ ಪ್ಲಾಸ್ಟಿಕ್‍ನ್ನು ಮಾತ್ರ ಬಳಸಬೇಡಿ. ಇಂದು ಎಲ್ಲಾ ಹೋರಾಟಗಳೂ ಪರಿಸರದ ಉಳಿವಿಗಾಗಿಯೆ ನಡೆಯುತ್ತಿವೆ ಎಂದು ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮಿಗಳು ತಿಳಿಸಿದರು. ಅವರು ನಗರದ ಶ್ರೀ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ನಡೆದ ಶ್ರೀ ಗುರುಕುಲ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ದಶಮಾನೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಇರುವೆ, ಜೇನು, ಕಾಗೆ, ಕೋಳಿಗಳು ಸಹಕಾರ ಸೌಹಾರ್ದಕ್ಕೆ ಒಳ್ಳೆಯ ಉದಾಹರಣೆ. ಮನುಷ್ಯ ದುಡಿಮೆ, ಗಳಿಕೆ, ಉಳಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಇಂದಿನ ದಿನಮಾನಗಳಲ್ಲಿ ಮುಪ್ಪಿನಲ್ಲಿ ಮಕ್ಕಳನ್ನು ಅವಲಂಬಿಸಲಾಗದು. ಹಾಗಾಗಿ ಶೇ. 60 ರಿಂದ 65 ರಷ್ಟು ಜನತೆ ಮುಪ್ಪಗಾಗಿ ಕೂಡಿಡುವ ಹವ್ಯಾಸದಲ್ಲಿ ತೊಡಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಹೆಣ್ಣು ಮಕ್ಕಳು ಉಳಿತಾಯಕ್ಕೆ ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು ಹೆಣ್ನೂಮಕ್ಕಳಿಗೆ ಸಾಲವನ್ನು ಕೊಟ್ಟು ಅವರನ್ನು ಸ್ವಾವಲಂಬಿಯಾಗಿಸಿದ್ದಾರೆ ಎಂದು ತಿಳಿಸಿದರು.
ಭಾರತೀಯರು ಚಂದ್ರಲೋಕದಲ್ಲಿ ಸಾಲ ಕೊಟ್ಟರೂ ಬಿಡುವುದಿಲ್ಲ ಎಂಬ ಮಾತಿದೆ. ಆದರೆ ತೆಗೆದುಕೊಂಡ ಸಾಲವನ್ನು ಅಷ್ಟೇ ಪ್ರಾಮಾಣಿಕವಾಗಿ ಹಿಂದಿರುಗಿಸುವ ಹವ್ಯಾಸ ಬಹಳ ಮುಖ್ಯವಾದುದು. ಸಚಿವ ಮಾಧುಸ್ವಾಮಿ ಸರಳತೆಗೆ ಹೆಸರಾಗಿದ್ದಾರೆ.ಇಂದಿನ ರಾಕಕಾರಣದಲ್ಲಿ ಒಂದು ಮುತ್ತಿನಂತೆ ಇದ್ದಾರೆ. ನಾಳೆಯನ್ನು ಕಂಡವರಿಲ್ಲ. ಮಾಧುಸ್ವಾಮಿ ಮುಖ್ಯಮಂತ್ರಿಯಾದರೂ ಆಶ್ಚರ್ಯವಿಲ್ಲ.
ಜ್ಯೋತಿಗಣೇಶ್ ಮೇಲೆ ಮೃದುವಾಗಿ ಕಂಡರೂ, ಒಳಗೆ ಹಿಡಿದ ಕೆಲಸ ಸಾಧಿಸುವ ಕಾಠಿಣ್ಯತೆ ಇದೆ ಎಂದು ತಿಳಿಸಿ ವೃಕ್ಷಮಿತ್ರ ಪ್ರೊ.ಸಿದ್ದಪ್ಪನವರ ಶ್ರಮ ಮೌಲ್ಯಯುತವಾದುದು. ತುಮಕೂರು ನಗರದಲ್ಲಿ 11 ಸಾವಿರ ಬೇವಿನ ಮರಗಳನ್ನು ಬೆಳೆಸಿರುವುದು ಸುಲಭದ ಮಾತಲ್ಲ ಎಂದು ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಾನೂನು ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸಹಕಾರ ತತ್ವವು ಮಹಾತ್ಮ ಗಾಂಧೀಜಿಯ ಕನಸಿನ ಕೂಸು. ನೀವು ಸಿರಿವಂತರನ್ನು ಬಿಟ್ಟು ಸಾಮಾನ್ಯ ಮನುಷ್ಯನ ಏಳಿಗೆಗಾಗಿ ಸಹಾಯ ಮಾಡಿ. ಡಿ.ಎಂ. ನಂಜುಂಡಪ್ಪನವರು ಒಮ್ಮೆ ಬ್ಯಾಂಕ್ ನಲ್ಲಿ ಠೇವಣಿ ಇಡುವವರು ಮಧ್ಯವರ್ಗದ ಜನತೆ. ಆದರೆ ಅದನ್ನು ಬಳಸುವವರು ಶ್ರೀಮಂತರು ಎಂದು ಒಮ್ಮೆ ಹೇಳಿದ್ದರು.
ಇಂದಿನ ಕೆನರಾ, ಸಿಂಡಿಕೇಟ್ ಬ್ಯಾಂಲ್ ಗಳು ಈ ಹಿಂದೆ ಪೊಂಗಲ್ ನಾಯಕ್ ಬ್ಯಾಂಕ್ ಹೆಸರಲ್ಲಿ ಕೇವಲ ತಲಾ ಐದೈದು ಪೈಸೆ ಠೇವಣಿಯಲ್ಲಿ ಬೆಳೆದು ಬಂದದ್ದನ್ನು ಯಾರೂ ಮರೆಯಬಾರದು. ಈ ದಿಶೆಯಲ್ಲಿ ವೀರೇಂದ್ರಹೆಗ್ಗಡೆಯವರ ಕಾರ್ಯ ಸ್ತುತ್ಯಾರ್ಹವಾದುದು. ಸಹಕಾರಿ ಸೌಹಾರ್ದ ಕಾನೂನು ತರಲು ಹೊರಟಾಗ ನಾವು ವಿಧಾನ ಸೌಧದಲ್ಲಿ ವಿರೋಧಿಸಿದ್ದವು. ಇಂದು ನೋಡಿದರೆ ಅದರ ಪ್ರಾಮುಖ್ಯತೆ ಮನದಟ್ಟಾಗುತ್ತಿದೆ ಎಂದರು.
ನಗರ ಶಾಸಕ ಜೆ.ಬಿ.ಜ್ಯೋತಿಗಣೇಶ್ ಮಾತನಾಡಿ, 2001ರಲ್ಲಿ ವೀರಶೈವ ಸಹಕಾರ ಬ್ಯಾಂಕ್ ಸಾಲ ಕೊಡದಿದ್ದರೆ ನಾವು ಸಿಐಟಿ ಎಂಜಿನಿಯರಿಂಗ್ ಸಂಸ್ಥೆ ಕಟ್ಟಲಾಗುತ್ತಿರಲಿಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳು ತಿಮಿಂಗಿಲಗಳಿಗೆ ಮಾತ್ರವ ಸಾಲ ನೀಡುತ್ತವೆ ಎಂದು ತಿಳಿಸಿದರು.
ಸನ್ಮಾನಿತ ಸಿದ್ದಪ್ಪನವರು ಮಾತನಾಡಿ, ಒಂದು ಬೇವಿನ ಮರ ಒಂದು ಗಂಟೆಗೆ 20 ಸಾವಿರ ಜನಕ್ಕೆ ಆಕ್ಸಿಜನ್ ನೀಡುತ್ತದೆ. ಅದೇ ಆಕ್ಸಿಜನ್‍ಗೆ ಆಸ್ಪತ್ರೆಯಲ್ಲಿ ಒಂದು ಗಂಟೆಗೆ 2 ಸಾವಿರ ರೂ. ತೆರಬೇಕು. ಗಿಡ-ಮರ, ಮಣ್ಣನ್ನು ಮುಟ್ಟುವ್ಯದರಿಂದಲೆ ಶೇ.32 ರಷ್ಟು ಅರೋಗ್ಯ ವೃದ್ಧಿಸುತ್ತದೆ . 5 ವರ್ಷ ಆಯಸ್ಸು ಹೆಚ್ಚುತ್ತದೆ ಎಂದು ತಿಳಿಸಿದರು. ಸೌಹಾರ್ದದ ಅಧ್ಯಕ್ಷ ಜಿ.ಮಲ್ಲಿಕಾರ್ಜುನಯ್ಯ ಮತ್ತು ವಿದ್ಯಾರ್ಥಿ ನಿಲಯದ ಅಧ್ಯಕ್ಷ ಜಿ.ಎನ್.ಬಸವರಾಜಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಸೌಹಾರ್ದದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ