ನವದೆಹಲಿ
ಪಕ್ಷದ ಹಿರಿಯ ಮುಖಂಡ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಜಾದ್ ಅವರು ಶ್ರೀನಗರಕ್ಕೆ ಪ್ರವೇಶಿಸದಂತೆ ತಡೆಯುವ ಕಾಶ್ಮೀರ ಆಡಳಿತದ ಕ್ರಮ ಕಾನೂನುಬಾಹಿರ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ.
‘ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಹೇಳುವಂತೆ ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದರೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಅವರು ಕಾಶ್ಮೀರ ಪ್ರವೇಶಿಸುವುದನ್ನು ತಡೆಯುತ್ತಿರುವು ದಾದರೂ ಏಕೆ ? ಇದು ಕಾನೂನುಬಾಹಿರ. ಬಿಜೆಪಿ ಸರ್ಕಾರ ಮತ್ತೆ ದೇಶದ ಜನರಿಗೆ ಸುಳ್ಳು ಹೇಳುತ್ತಿದೆ ಎಂದು ಇದು ತೋರಿಸುತ್ತದೆ.’ ತನ್ನ ಅಧಿಕೃತ ಟ್ವಿಟ್ಟರ್ ಪೋಸ್ಟ್ನಲ್ಲಿ ಕಾಂಗ್ರೆಸ್ ಹೇಳಿದೆ. ಪಕ್ಷದ ಮುಖಂಡ ಮತ್ತು ಮುಂಬೈ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಿಲಿಂದ್ ದಿಯೋರಾ ಸಹ ಕಾಶ್ಮೀರ ಆಡಳಿತದ ಕ್ರಮವನ್ನು ಟೀಕಿಸಿದ್ದಾರೆ.
‘ರಾಜ್ಯಸಭೆ ವಿರೋಧ ಪಕ್ಷದ ನಾಯಕರ ವಿರುದ್ಧದ ಈ ಕ್ರಮವನ್ನು ನಾನು ಖಂಡಿಸುತ್ತೇನೆ.’ ಎಂದು ದಿಯೋರಾ ಹೇಳಿದ್ದಾರೆ. ಕೇಂದ್ರ ಸರ್ಕಾರ ಚುನಾಯಿತ ನಾಯಕರನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಿರುವುದುಅತ್ಯಂತ ದುರದೃಷ್ಟಕರ ಮತ್ತು ಇದು ಸ್ವೀಕಾರಾರ್ಹವೂ ಅಲ್ಲ. ಕಾಶ್ಮೀರ ಜನರ ನಾಗರಿಕ ಸ್ವಾತಂತ್ರ್ಯವನ್ನು ಪುನರ್ ಸ್ಥಾಪಿಸಬೇಕು. ಬಳಿಕ ಸರ್ವ ಪಕ್ಷದ ನಿಯೋಗ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ನಾಯಕರೊಂದಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಭೆ ನಡೆಸಲು ಆಗಮಿಸಿದ್ದ ಗುಲಾಮ್ ನಬಿ ಆಜಾದ್ ಅವರನ್ನು ಗುರುವಾರ ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗುಲಾಮ್ ಅಹ್ಮದ್ ಮಿರ್, ಆಜಾದ್ ಅವರೊಂದಿಗಿದ್ದರು. ಆಜಾದ್ ಮತ್ತು ಮಿರ್ ಅವರನ್ನು ವಿಮಾನ ನಿಲ್ದಾಣದಿಂದ ಹೊರ ಬರುವುದಕ್ಕೆ ತಡೆಯಲಾಯಿತು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಣಿವೆಗೆ ಬುಧವಾರ ಭೇಟಿ ನೀಡಿದ ಬಗ್ಗೆ ಆಜಾದ್ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ‘ ಹಣದೊಂದಿಗೆ ಯಾರೊಬ್ಬರನ್ನೂ ಕಣಿವೆಗೆ ಕರೆತರಬಹುದು.’ ಎಂದು ಆಜಾದ್ ಹೇಳಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಸೋಮವಾರ ವಶಕ್ಕೆ ಪಡೆದ ಕೆಲವೇ ದಿನಗಳಲ್ಲಿ ಆಜಾದ್ ಅವರನ್ನು ತಡೆದ ಘಟನೆ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








