ನೇರ ಮಾರುಕಟ್ಟೆ ವ್ಯವಸ್ಥೆಯಿಂದ ಗುಲಾಮಗಿರಿ

ದಾವಣಗೆರೆ:

     ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ಮಾರಕವಾಗಿರುವ ನೇರ ಮಾರುಕಟ್ಟೆ ವ್ಯವಸ್ಥೆಯು ದೇಶವನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಕಾನ್ ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್‍ನ ಕಾರ್ಯದರ್ಶಿ ವೀರೇಂದ್ರ ಸಿಂಗ್ ವಾಲಿಯಾ ತಿಳಿಸಿದ್ದಾರೆ.

      ರಾಷ್ಟ್ರಾದ್ಯಂತ ಸಂಚರಿಸುತ್ತಿರುವ ಸಂಪೂರ್ಣ ಕ್ರಾಂತಿ ರಥಯಾತ್ರೆ ಭಾನುವಾರ ಸಂಜೆ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಇಲ್ಲಿನ ರಿಲಯನ್ಸ್ ಮಾರ್ಟ್ ಎದುರು ನಡೆದ ಪ್ರತಿಭಟನೆಯಲ್ಲಿ ವ್ಯಾಪಾರಿಗಳು ಹಾಗೂ ವಿತರಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಚಲಿತವಿರುವ ನೇರ ಮಾರುಕಟ್ಟೆ ವ್ಯವಸ್ಥೆಯು ವ್ಯಾಪಾರಸ್ಥರಿಗೆ ಹಲವಾರು ಸಮಸ್ಯೆ ತಂದೊಡ್ಡುತ್ತಿದೆ. ಗ್ರಾಹಕರು ಎಚ್ಚೆತ್ತುಕೊಳ್ಳದಿದ್ದರೆ ಈಸ್ಟ್ ಇಂಡಿಯಾ ಕಂಪನಿಯ ರೀತಿಯಲ್ಲಿ ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ತರಹದ ಕಂಪನಿಗಳು ದೇಶದಲ್ಲಿ ಗುಲಾಮಗಿರಿಯನ್ನು ಸೃಷ್ಟಿಸಲಿವೆ ಎಂದು ಆರೋಪಿಸಿದರು.

      ಭಾರತವು ಚೀನಾ ನಂತರದ ಅತಿದೊಡ್ಡ ಮಾರುಕಟ್ಟೆ ಹೊಂದಿದ್ದು, ಸುಮಾರು 30-35 ಕೋಟಿ ಜನರು ಸಣ್ಣ ಮತ್ತು ಅತಿಸಣ್ಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ನೇರ ಮಾರುಕಟ್ಟೆ ವ್ಯವಸ್ಥೆಯಿಂದ ಇವರೆಲ್ಲರೂ ಬೀದಿಪಾಲಾಗುವ ಕಾಲ ದೂರ ಇಲ್ಲ ಎಂದರು.

      ದಾವಣಗೆರೆ ಜಿಲ್ಲಾ ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್ ಸಹ ಕಾರ್ಯದರ್ಶಿ ಗುಬ್ಬಿ ಬಸವರಾಜ ಮಾತನಾಡಿ, ದೊಡ್ಡ ವ್ಯಾಪಾರಿಗಳಿಂದ ಸಣ್ಣಪುಟ್ಟ ಅಂಗಡಿಯವರು ತೊಂದರೆ ಅನುಭವಿಸುವಂತಾಗಿದೆ. ಇದೇ ರೀತಿ ಮುಂದುವರೆದರೆ ನಾವೂ ಸಹ ವಿದೇಶಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಆದಷ್ಟು ಬೇಗ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರು ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ವಸ್ತು, ಉತ್ಪನ್ನಗಳನ್ನು ಖರೀದಿಸದೆ, ಸಮೀಪದ ಅಂಗಡಿಗಳಲ್ಲಿ ಖರೀದಿ ನಡೆಸಬೇಕು ಎಂದು ಮನವಿ ಮಾಡಿದರು.

      ಸಂಪೂರ್ಣ ಕ್ರಾಂತಿ ರಥಯಾತ್ರೆಯನ್ನು ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸ್ವಾಗತಿಸಿದ ಕಾಸಲ್ ಎ.ಮಂಜುನಾಥ್ ಮಾತನಾಡಿ, ವ್ಯಾಪಾರಿಗಳು, ವಿತರಕರು ಒಂದಾಗದಿದ್ದರೆ ಮುಂದಾಗುವ ಅನಾಹುತಗಳಿಗೆ ನಾವೇ ಹೊಣೆಯಾಗಬೇಕಾಗುತ್ತದೆ. ನೇರ ಮಾರುಕಟ್ಟೆ ವ್ಯವಸ್ಥೆ ವಿರುದ್ಧ ಸಣ್ಣ ಹಾಗೂ ಮಧ್ಯಮ ವ್ಯಾಪಾರಿಗಳ ಬೃಹತ್ ಪ್ರತಿಭಟನೆ ಡಿ.19ರಂದು ನವದೆಹಲಿಯ ಜಂತರ್ ಮಂತರ್‍ನಲ್ಲಿ ನಡೆಯಲಿದ್ದು, ಇದಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕೆಂದು ಕೋರಿದರು.

      ಈ ಸಂದರ್ಭದಲ್ಲಿ ಕಾನ್ ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್‍ನ ನಿರ್ದೇಶಕ ಅಮರೇಶ್ ಸಿಂಗ್ ಕಾರಿಯಾ, ಬಳ್ಳಾರಿ ಜಿಲ್ಲಾ ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್ ಅಧ್ಯಕ್ಷ ಕಿಶೋರ್, ಸಹ ಕಾರ್ಯದರ್ಶಿ ಗುರುಪ್ರಸಾದ್, ಸಂತೋಷ್ ಕುಮಾರ್, ಕೈಲಾಶ್, ಬಸವರಾಜ, ದಾವಣಗೆರೆ ಡಿಸ್ಟ್ರಿಬ್ಯೂಟರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಅನಂತರಾಮ ಶೆಟ್ರು, ಬದರಿನಾಥ, ಮಂಜುನಾಥ, ಪ್ರದೀಪ, ಕೆ.ಆರ್.ಮಂಜುನಾಥ, ವಿನಯ್ ಆಚಾರ್ಯ, ರುಚಿತ ಪಿ.ಜೈನ್, ಸೂರಜ್, ನಾಗರಾಜ ರೆಡ್ಡಿ, ಚಂದ್ರಮೋಹನ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap