ಒಂದು ತಿಂಗಳಲ್ಲಿ ಬಲಿಯಾಗಿವೆ 150 ಕ್ಕೂ ಹೆಚ್ಚು ಕುರಿಗಳು..!
ತುಮಕೂರು
ವಿಶೇಷ ವರದಿ : ಸಾ.ಚಿ.ರಾಜಕುಮಾರ
ಸತತ ಬರಗಾಲದಿಂದ ಕೃಷಿ ಚಟುವಟಿಕೆಗಳಿಂದ ಬಹಳ ದೂರವೇ ಉಳಿದಿರುವ ರೈತಾಪಿ ವರ್ಗ ಕೃಷಿಗೆ ಪರ್ಯಾಯ ಅಥವಾ ಪೂರಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ನೆಲ ಕಚ್ಚಿರುವ ಈ ಸಂದರ್ಭದಲ್ಲಿ ಕೆಲವರಿಗೆ ಹೈನುಗಾರಿಕೆ ಮತ್ತು ಪಶು ಸಾಕಾಣಿಕೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ. ಆದರೂ ಹಲವು ಅವಘಡಗಳು ರೈತಾಪಿ ವರ್ಗವನ್ನು ಬಾಧಿಸುತ್ತಿವೆ. ಮನೆಯ ಸಮೀಪದ ಕೊಟ್ಟಿಗೆಗಳಿಗೆ ನುಗ್ಗಿದ ಚಿರತೆಗಳು ದನ-ಕರುಗಳನ್ನು ಸಾಯಿಸುತ್ತಿವೆ.
ಕಾಡು ಪ್ರಾಣಿಗಳ ಜೊತೆಗೆ ನಾಯಿಗಳ ಹಾವಳಿ ಗ್ರಾಮೀಣ ಪ್ರದೇಶದ ರೈತರನ್ನು ಕಂಗೆಡಿಸುತ್ತಿವೆ. ಕುರಿಗಳನ್ನು ಸಾಕಿ ಜೀವ ನೋಪಾಯದ ದಾರಿ ಮಾರ್ಗ ಕಂಡು ಕೊಂಡಿರುವವರು ಈಗ ಮತ್ತೊಂದು ಸಂಕಟಕ್ಕೆ ಸಿಲುಕಿದ್ದಾರೆ. ಯಾವಾಗ ನಾಯಿಗಳ ಹಿಂಡು ದಾಳಿ ಮಾಡುವುವೋ ಎಂಬ ಆತಂಕ ಶುರುವಾಗಿದೆ. ಈಗಾಗಲೇ ಸಾಕಷ್ಟು ಕಡೆಗಳಲ್ಲಿ ನಾಯಿಗಳ ದಾಳಿಗೆ ಕುರಿಗಳು ಬಲಿಯಾಗಿದ್ದು, ಕುರಿಗಾಹಿಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ತಲೆದೋರಿದೆ.
ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ತುಮಕೂರು ಜಿಲ್ಲೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಕುರಿಗಳು ನಾಯಿಗಳ ದಾಳಿಗೆ ತುತ್ತಾಗಿವೆ. ಇವುಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಕುರಿಗಾಹಿಗಳು ಏನೂ ಮಾಡಲಾಗದಂತಹ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಎಲ್ಲಿಂದ ಇಂತಹ ಕ್ರೂರ ನಾಯಿಗಳು ಬರುತ್ತಿವೆ? ಹೇಗೆ ದಾಳಿ ನಡೆಸುತ್ತವೆ ಎಂಬುದೇ ಸೋಜಿಗದ ಸಂಗತಿಯಾಗಿದೆ.
ನಾಯಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಳವಾಗಲು, ಕುರಿಗಳ ರಕ್ತ ಹೀರಲು ಪ್ರಾರಂಭಿಸಿರುವ ಕಾರಣ ಹುಡುಕುತ್ತಾ ಹೊರಟಾಗ ಹಲವು ಸತ್ಯಗಳು ಬಯಲಾಗುತ್ತವೆ. ಮೊದಲನೆಯದಾಗಿ ರಾತ್ರೋರಾತ್ರಿ ನಗರ ಪ್ರದೇಶದಿಂದ ನಾಯಿಗಳನ್ನು ತಂದು ಹಳ್ಳಿಗಳ ಕಡೆಗೆ ಬಿಡಲಾಗುತ್ತಿದೆ. ಎರಡನೆಯದು ಈಗ ಎಲ್ಲ ಕಡೆಗಳಲ್ಲಿಯೂ ಕೋಳಿ ಅಂಗಡಿಗಳು ತಲೆ ಎತ್ತಿವೆ. ಇದರ ತ್ಯಾಜ್ಯ ಮತ್ತು ಮಾಂಸದ ರುಚಿ ಕಂಡುಕೊಳ್ಳುವ ನಾಯಿಗಳು ಅನಿವಾರ್ಯವಾಗಿ ಸಾಧು ಪ್ರಾಣಿಗಳಾದ ಕುರಿಗಳ ಮೇಲೆ ದಾಳಿ ನಡೆಸುತ್ತಿವೆ.
ಸಾಮಾನ್ಯವಾಗಿ ಎಲ್ಲೆ ಹೋದರೂ ಕುರಿ ಸಾಕಿರುವವರು ನಾಯಿಗಳನ್ನೂ ಸಾಕಿರುತ್ತಾರೆ. ಇವುಗಳು ಯಾವತ್ತೂ ಮನುಷ್ಯನಿಗಾಗಲಿ ಅಥವಾ ಕುರಿ, ಮೇಕೆಗಳಿಗಾಗಲಿ ಹಾನಿಕಾರಕವಲ್ಲ. ಬದಲಿಗೆ ಅವುಗಳೊಂದಿಗೆ ಹೊಂದಿಕೊಂಡು ಸ್ನೇಹಿಗಳಾಗಿ ಬದುಕುತ್ತಾ ಬಂದಿವೆ. ಮಾಲೀಕ ಹೋದ ಕಡೆಗಳಲ್ಲೆಲ್ಲಾ ಅವುಗಳೂ ಹೋಗುತ್ತವೆ. ಕುರಿ, ಮೇಕೆಗಳನ್ನು ಹಿಂಬಾಲಿಸುತ್ತವೆ. ಅಪರಿಚಿತರು ಬಂದರೆ ಬೊಗಳುತ್ತವೆ. ಇದು ವಾಸ್ತವ. ಹೀಗಿರುವಾಗ ನಾಯಿಗಳು ಕುರಿ ಮಂದೆಗಳ ಮೇಲೆ ದಾಳಿಯಿಟ್ಟು ರಕ್ತ ಕುಡಿಯುತ್ತಿರುವುದು ಕುರಿಗಾಹಿಗಳಿಗೆ ಸೋಜಿಗವೂ ಆಗಿದೆ. ಆದರೆ ತನ್ನದೇ ನಾಯಿಗಳು ಈ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಕಳೆದ ಈ ಒಂದು ತಿಂಗಳ ಅವಧಿಯಲ್ಲಿ ನಡೆದಿರುವ ನಾಯಿ ದಾಳಿ ಪ್ರಕರಣ ಗಮನಿಸಿದರೆ ಅತಿ ಹೆಚ್ಚು ಪ್ರಕರಣಗಳು ಶಿರಾ ತಾಲ್ಲೂಕಿನಲ್ಲಿಯೇ ಕಂಡುಬರುತ್ತಿವೆ. ಇಡೀ ಜಿಲ್ಲೆಯಲ್ಲಿ ಗೊಲ್ಲ ಸಮುದಾಯದವರು ಹೆಚ್ಚು ವಾಸಿಸುವ ತಾಣ ಶಿರಾ ಕ್ಷೇತ್ರ. ಶಿರಾ, ಹಿರಿಯೂರು ಮತ್ತು ಚಿಕ್ಕನಾಯಕನಹಳ್ಳಿ ಪ್ರದೇಶಗಳಲ್ಲಿ ಗೊಲ್ಲ ಸಮುದಾಯದವರು ಕುರಿ ಸಾಕಾಣಿಕೆಯನ್ನು ಮೂಲ ಮತ್ತು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಈ ಕಸುಬಿನಲ್ಲಿ ಬದಲಾವಣೆಯಾಗಿದ್ದರೂ ಅನೇಕರು ತಮ್ಮ ಹಿಂದಿನ ಕಸುಬನ್ನು ಬಿಟ್ಟಿಲ್ಲ. ಹೀಗಾಗಿ ಈ ಸಮುದಾಯ ಕುರಿ ಸಾಕಾಣಿಕೆಯನ್ನೇ ತನ್ನ ಬದುಕನ್ನಾಗಿ ಮಾಡಿಕೊಂಡಿದೆ. ಹೀಗಾಗಿ ಅತಿ ಹೆಚ್ಚು ನಷ್ಟ ಹೊಂದುತ್ತಿರುವವರು ಈ ಪ್ರಾಂತ್ಯದವರೇ ಆಗಿದ್ದಾರೆ. ಗೊಲ್ಲ ಸಮುದಾಯ ಮಾತ್ರವಲ್ಲದೆ ಇತರೆ ಜನಾಂಗವೂ ಕುರಿ ಸಾಕಾಣಿಕೆಯಲ್ಲಿ ತೊಡಗಿದೆ. ಅವರ ಕುರಿಗಳೂ ಸಹ ನಾಯಿಗಳ ದಾಳಿಗೆ ಒಳಗಾಗುತ್ತಿವೆ.
ಜುಲೈ ತಿಂಗಳ ದಾಳಿ ಪ್ರಕರಣಗಳು:
ಜುಲೈ 3 ರಂದು ಶಿರಾ ತಾಲ್ಲೂಕು ಬಂದಕುಂಟೆ ಗೊಲ್ಲರಹಟ್ಟಿಯ ರಾಜಣ್ಣ ಮತ್ತು ತಿಮ್ಮಣ್ಣ ಎಂಬುವರಿಗೆ ಸೇರಿದ 40 ಕುರಿಮರಿಗಳನ್ನು ನಾಯಿಗಳ ಹಿಂಡು ಕಚ್ಚಿ ಸಾಯಿಸಿವೆ. ಜು.8 ರಂದು ಚೌಳಿಹಟ್ಟಿಯ ರಾಮಲಿಂಗಪ್ಪ ಎಂಬುವರಿಗೆ ಸೇರಿದ 16 ಕುರಿಗಳನ್ನು ಬಲಿ ತೆಗೆದುಕೊಂಡಿವೆ. ಇವುಗಳಲ್ಲಿ ಅದೇ ದಿನ 10 ಕುರಿಗಳು ಸಾವನ್ನಪ್ಪಿದ್ದವು. ತಡಕಲೂರು ಪಾಳ್ಯದ ನಾಗರಾಜು ಎಂಬುವರಿಗೆ ಸೇರಿದ 25 ಕುರಿಗಳನ್ನು ಜು.20 ರಂದು ನಾಯಿಗಳ ಹಿಂಡು ಬಲಿ ತೆಗೆದುಕೊಂಡಿವೆ. ಕಾರೆಹಳ್ಳಿಯಲ್ಲಿ 15 ಕುರಿಗಳು ಬಲಿಯಾಗಿವೆ. ಇವು ಲೆಕ್ಕಕ್ಕೆ ಸಿಗುವ ಉದಾಹರಣೆಗಳಷ್ಟೇ. ಲೆಕ್ಕಕ್ಕಿ ಸಿಗದ ಅದೆಷ್ಟೋ ಪ್ರಕರಣಗಳು ಇವೆ.
ವಿಚಿತ್ರವೆಂದರೆ, ಇದೇ ಜುಲೈ ತಿಂಗಳಿನಲ್ಲಿ ಮಧುಗಿರಿ ತಾಲ್ಲೂಕು ಚಿನ್ನೇನಹಳ್ಳಿಯಲ್ಲಿ ಸೀಳು ನಾಯಿಯೊಂದು ಮನುಷ್ಯನ ಮೇಲೆರಗಿದೆ. ಹುಚ್ಚುನಾಯಿಗಳ ಹಾವಳಿಯನ್ನು ಹಿಂದೆ ಕೇಳಿದ್ದೆವು. ಈಗ ನಾಯಿಗಳು ಮನುಷ್ಯನ ಮೇಲೂ ಎರಗುತ್ತಿವೆ. ಚಿನ್ನೇನಹಳ್ಳಿಯ ದೊಡ್ಡತಿಮ್ಮಯ್ಯ ನಿದ್ರೆಗೆ ಜಾರಿದ್ದಾಗ ಜು.18 ರಂದು ನಾಯಿಯೊಂದು ತಲೆಯ ಭಾಗವನ್ನು ಕಚ್ಚಿ ಗಾಯಗೊಳಿಸಿದೆ. ಇದು ಇತ್ತೀಚಿನ ಒಂದು ಉದಾಹರಣೆಯಷ್ಟೇ. ಇಂತಹ ಹತ್ತು ಹಲವು ಗಂಭೀರ ಪ್ರಕರಣಗಳು ನಡೆಯುತ್ತಲೇ ಬಂದಿವೆ.
ತುಮಕೂರಿನ ಸಪ್ತಗಿರಿ ಬಡಾವಣೆಯಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆ ನಾಯಿಗಳು ಬಾಲಕನೊಬ್ಬನನ್ನು ಅಟ್ಟಿಸಿಕೊಂಡು ಹೋಗಿ ಗಾಯಗೊಳಿಸಿತ್ತು. ಆ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ. ತುಮಕೂರು ನಗರ ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿ ಇದು ಸಾಮಾನ್ಯ ಎನ್ನುವಂತಾಗಿದೆ. ನಾಯಿಗಳ ಹಿಂಡು ರಾತ್ರಿ ವೇಳೆ ಮನುಷ್ಯರನ್ನು ಅಟ್ಟಿಸಿಕೊಂಡು ಹೋಗುತ್ತವೆ. ಇವುಗಳ ನಿಯಂತ್ರಣಕ್ಕೆ ಈವರೆಗೂ ಯಾವುದೇ ಕ್ರಮಗಳು ಜರುಗಿದಂತೆ ಕಂಡುಬರುತ್ತಿಲ್ಲ.
ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ನಾಯಿಗಳ ಹಾವಳಿ ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಕಾಣಿಸಿಕೊಂಡಿದೆ. ಹಿಂದೆಲ್ಲಾ ಊರುಗಳಲ್ಲಿ ಮನೆಗಳಲ್ಲೇ ನಾಯಿಗಳನ್ನು ಸಾಕುತ್ತಿದ್ದರು. ದನಗಳ ಜೊತೆಗೆ ನಾಯಿ, ಬೆಕ್ಕು ಇತ್ಯಾದಿಗಳು ಸಾಕು ಪ್ರಾಣಿಗಳಾಗಿದ್ದವು. ಇವೆಲ್ಲ ಮನುಷ್ಯ ಸ್ನೇಹಿ ಮತ್ತು ಸಂಘಜೀವಿಗಳಂತೆ ಬದುಕುತ್ತಿದ್ದವು. ಅವುಗಳು ಸತ್ತರೆ ರೈತರು ಮಮ್ಮಲ ಮರುಗುತ್ತಿದ್ದರು. ರಾತ್ರಿವೇಳೆ ಇರಲಿ ಹಗಲಿನ ಹೊತ್ತು ಅಪರಿಚಿತರು ಬಂದರೆ ಅಷ್ಟು ಸುಲಭವಾಗಿ ಗ್ರಾಮದೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಊರಿನ ನಾಯಿಗಳೆಲ್ಲಾ ಒಂದಾಗುತ್ತಿದ್ದವು. ಬಂದವರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದವು. ಆತ ಪರಿಚಿತ ಎಂದು ಗೊತ್ತಾದರೆ ಮಾತ್ರವೇ ಬೊಗಳುವುದನ್ನು ನಿಲ್ಲಿಸುತ್ತಿದ್ದವು.
ಈಗಿನ ಪರಿಸ್ಥಿತಿಯೇ ಬೇರೆ. ಮನೆಗಳಲ್ಲಿ ನಾಯಿಗಳನ್ನು ಸಾಕುತ್ತಿಲ್ಲ. ಬದಲಿಗೆ ಬೀದಿನಾಯಿಗಳು ಹೆಚ್ಚಾಗಿವೆ. ಇವುಗಳು ಯಾರ ಅಂಕೆಗೂ ಸಿಗುತ್ತಿಲ್ಲ. ಹಾದಿಬೀದಿಗಳಲ್ಲಿ ಸಿಕ್ಕುವುದನ್ನೇ ತಿಂದುಕೊಂಡು ದಷ್ಟಪುಷ್ಟವಾಗಿ ಬೆಳೆಯುತ್ತಿವೆ. ಸಂತತಿ ದುಪ್ಪಟ್ಟಾಗುತ್ತಿದೆ. ಎಲ್ಲಿಂದಲೋ ಬಂದು ಮತ್ತಷ್ಟು ಸೇರಿಕೊಳ್ಳುತ್ತಿವೆ. ಕೆಲವು ಪ್ರದೇಶಗಳಿಗೆ ಹೋದರೆ ಬೀದಿನಾಯಿಗಳ ಹಿಂಡು ಹೇಗೆ ಸುತ್ತುತ್ತದೆ ಎಂಬುದನ್ನು ಅವಲೋಕಿಸಬಹುದು.
ನಗರಗಳಲ್ಲಿ ಜನರ ಕಾಟ ತಾಳಲಾರದೆ ಇಲ್ಲಿನ ನಾಯಿಗಳನ್ನು ಹಳ್ಳಿಗಳ ಕಡೆಗೆ ಸಾಗಿಸುವ ಪ್ರಯತ್ನ ನಡೆಯುತ್ತಿದೆ. ವಾಹನಗಳಲ್ಲಿ ನಾಯಿಗಳನ್ನು ತುಂಬಿಕೊಂಡು ಬಿಟ್ಟು ಬರಲಾಗುತ್ತದೆ. ಈ ನಾಯಿಗಳು ಅಲ್ಲಿಯೇ ಸಂಚರಿಸುತ್ತಾ ಬದುಕಲು ಆರಂಭಿಸುತ್ತವೆ. ಈಗಾಗಲೇ ನಗರಗಳಲ್ಲಿ ಮಾಂಸದ ರುಚಿ ಕಂಡುಕೊಂಡಿರುವ ಈ ನಾಯಿಗಳು ಮಾಂಸದ ಅಂಗಡಿಗಳು ಇರುವ ಕಡೆಗಳಲ್ಲಿ ವಾಸನೆ ಹಿಡಿದು ಹೊರಡುತ್ತವೆ.
ಅಲ್ಲಿ ಸಿಗುವ ತ್ಯಾಜ್ಯವೇ ಇವುಗಳಿಗೆ ಆಹಾರ. ಹೀಗೆ ಆಹಾರ ಹುಡುಕಿಕೊಂಡು ಗುಂಪು ಗುಂಪಾಗಿ ಸಂಚರಿಸುತ್ತವೆ. ಕುರಿಗಳು ಇರುವ ಜಾಗವನ್ನು ಹುಡುಕಿ ಅಲ್ಲಿನ ಮಾಲೀಕರು ಇಲ್ಲದ ಸಮಯ ನೋಡಿಕೊಂಡು ಮಂದೆಗಳ ಮೇಲೆ ದಾಳಿ ಇಡುತ್ತವೆ. ಈವರೆಗಿನ ದೃಶ್ಯಗಳನ್ನು ಮತ್ತು ಪ್ರಕರಣಗಳನ್ನು ಗಮನಿಸಿದರೆ ಎಲ್ಲಿಯೂ ಕುರಿಗಳನ್ನು ಮಾಂಸಕ್ಕಾಗಿ ಉಪಯೋಗಿಸಿರುವ ಉದಾಹರಣೆಗಳು ಕಂಡು ಬಂದಿಲ್ಲ. ರಕ್ತವನ್ನಷ್ಟೇ ಕುಡಿದು ಹೋಗುತ್ತಿವೆ.
ಕುತ್ತಿಗೆಯ ಭಾಗಕ್ಕೆ ಮತ್ತು ಹೊಟ್ಟೆಯ ಭಾಗಕ್ಕೆ ಕಚ್ಚಿ ರಕ್ತ ಹೀರುತ್ತವೆ. ನಂತರ ಅಲ್ಲಿಂದ ಹೊರಟು ಹೋಗುತ್ತವೆ. ನಾಯಿಗಳ ಈ ದಾಳಿಗೆ ತುತ್ತಾದ ಕುರಿಗಳು ರಕ್ತಸ್ರಾವವಾಗಿ ಅಲ್ಲಿಯೇ ಸಾವನ್ನಪ್ಪಿದರೆ ಕೆಲವು ಒಂದೆರಡು ದಿನ ಸಾವು ಬದುಕಿನ ನಡುವೆ ಹೋರಾಡಿ ಪ್ರಾಣ ಬಿಡುತ್ತವೆ. ಇವುಗಳಿಗೆ ಕಿರುಚಿಕೊಳ್ಳಲು, ಓಡಿಹೋಗಲು ಶಕ್ತಿ ಇರುವುದಿಲ್ಲ. ಸಾಮಾನ್ಯವಾಗಿ ಚಿಕ್ಕ ಮರಿಗಳನ್ನೇ ಹುಡುಕಿ ರಕ್ತ ಹೀರುತ್ತವೆ. ಮೇಕೆಗಳ ತಂಟೆಗೆ ಹೋಗುವುದಿಲ್ಲ. ಅವುಗಳು ಕುರಿಗಳಿಗಿಂತ ಚುರುಕು ಎಂಬುದು ಗೊತ್ತು. ಅದಕ್ಕಾಗಿಯೇ ಅಮಾಯಕರಂತೆ ಕಾಣುವ ಕುರಿಮರಿಗಳ ಮೇಲೆ ದಾಳಿ ಇಡುತ್ತವೆ.
ಪ್ರಾಣಿಗಳನ್ನು ಕೊಲ್ಲಬಾರದು ಎಂಬ ಕಾನೂನು ಹಲವರ ಕೈಕಟ್ಟಿ ಹಾಕಿದೆ. ಅಂದರೆ ಬೀದಿ ನಾಯಿಗಳನ್ನು ಕೊಲ್ಲಬೇಕು ಎಂದಲ್ಲ. ಕಾನೂನೇ ಹೇಳುವಂತೆ ಅವುಗಳ ರಕ್ಷಣೆ ಮಾಡಬೇಕು. ಎಲ್ಲಿಯಾದರೂ ಸ್ಥಳ ಹುಡುಕಿ ಅವುಗಳನ್ನು ಒಂದು ಕಡೆ ಬಿಟ್ಟು ರಕ್ಷಣೆ ಮಾಡಬೇಕು. ಸರ್ಕಾರ ಮತ್ತು ಅಧಿಕಾರಿಗಳು ಕ್ರಿಯಾಶೀಲರಾದರೆ ಇದೇನು ದೊಡ್ಡ ಕೆಲಸವೇನಲ್ಲ. ಇದರ ಜೊತೆಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮೂಲಕವೂ ಸಂತತಿಯನ್ನು ಕಡಿಮೆ ಮಾಡಲು ಸಾಧ್ಯವಿದೆ. ಆದರೆ ಇಂತಹ ಪ್ರಯತ್ನಗಳು ಪ್ರಾಮಾಣಿಕವಾಗಿ ನಡೆಯುತ್ತಿವೆಯೆ ಎಂಬುದು ಪ್ರಶ್ನಾರ್ಹವಾಗಿದೆ.
ನಗರ ಪ್ರದೇಶಗಳಿಂದ ಹಿಡಿದು ಗ್ರಾ.ಪಂ.ಗಳ ತನಕ ಇಂತಹ ಯೋಜನೆಗಳನ್ನೇ ವರದಾನವಾಗಿ ಮಾಡಿಕೊಳ್ಳುವ ಸಂದರ್ಭಗಳೂ ಇವೆ. ಹತ್ತು ನಾಯಿಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿ ಐವತ್ತರ ಲೆಕ್ಕ ತೋರಿಸುವ ಹಾಗೂ ಕ್ರಮವನ್ನೇ ಜರುಗಿಸದೆ ಲೆಕ್ಕದಲ್ಲಿ ದಾಖಲಾತಿ ತೋರುವ ನಿಪುಣರಿಗೆ ನಮ್ಮಲ್ಲೇನೂ ಕೊರತೆ ಇಲ್ಲ. ಇದರ ಜಾಡು ಹಿಡಿದು ಹೊರಟರೆ ಅದೆಷ್ಟು ಅಕ್ರಮಗಳು ಹೊರ ಬೀಳುತ್ತವೆಯೋ?
ಪ್ರಾಣಿ ದಯಾ ಸಂಘದವರು ಕೆಲವೊಮ್ಮೆ ಕಾಣಿಸಿಕೊಳ್ಳುತ್ತಾರೆ. ಪ್ರಾಣಿಗಳಿಗೆ ಹಾನಿಯಾದಾಗ ಅವುಗಳನ್ನು ಹಿಡಿಯಲು ಹೋದಾಗ ಬೊಬ್ಬೆ ಒಡೆಯುತ್ತಾರೆ. ಅದೇ ಕಾಡು ಪ್ರಾಣಿಗಳು ಮನುಷ್ಯನ ಮೇಲೆ ಎರಗಿದಾಗ ಅವನ ರಕ್ಷಣೆ ಹೇಗೆ ಎಂಬ ಬಗ್ಗೆ ಯಾರೂ ಮಾತನಾಡುವುದಿಲ್ಲ. ಪರ್ಯಾಯ ವ್ಯವಸ್ಥೆಗಳನ್ನು ಸೂಚಿಸುವುದಿಲ್ಲ. ಪ್ರಾಣಿಗಳ ರಕ್ಷಣೆಯ ಬಗ್ಗೆ ಎಲ್ಲರಿಗೂ ಆಸಕ್ತಿ ಇದೆ. ಆದರೆ ಅದೇ ಪ್ರಾಣಿಗಳಿಂದ ಹಾನಿಯಾಗುವುದಾದರೆ ಪರ್ಯಾಯ ಮಾರ್ಗಗಳು ಬೇಕಲ್ಲವೆ? ಹಾನಿಕಾರಕ ಪ್ರಾಣಿಗಳನ್ನು ಸಂರಕ್ಷಿಸಿ ದೂರ ಇಡುವ ಪ್ರಯತ್ನಗಳು ಆಗಬೇಕಲ್ಲವೆ? ಈ ಬಗ್ಗೆ ಚಿಂತಿಸುತ್ತಿಲ್ಲ ಏಕೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಲೇ ಇವೆ.
ಪ್ರಾಣಿಗಳಿಗೆ ಪರಿಹಾರ: ಕುರಿ, ಮೇಕೆ ಇತ್ಯಾದಿಗಳು ಕಾಡು ಪ್ರಾಣಿಗಳ ದಾಳಿಗೆ ಒಳಗಾದರೆ, ನೈಸರ್ಗಿಕ ವಿಕೋಪಕ್ಕೆ ತುತ್ತಾದರೆ ಅಥವಾ ಆಕಸ್ಮಿಕ ಸಾವಿಗೀಡಾದರೆ ಅಂತಹ ಪ್ರಾಣಿಗಳಿಗೆ ಪರಿಹಾರ ನೀಡಲು ಅವಕಾಶವಿದೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಮತ್ತು ಮರಿಗಳಿಗೆ, ಮೇಕೆಗಳಿಗೆ ಇಂತಿಷ್ಟು ಎಂದು ಪರಿಹಾರ ನಿಗದಿ ಪಡಿಸಲಾಗಿದೆ. ಮೂರು ತಿಂಗಳವರೆಗಿನ ಮರಿಗಳಿಗೆ 2500 ರೂ., ಮೂರು ತಿಂಗಳ ಮೇಲ್ಪಟ್ಟ ಕುರಿಗಳಿಗೆ 5000 ರೂ. ನೀಡಲು ಅವಕಾಶವಿದೆ. ಕೊನೆಯ ಪಕ್ಷ ಈ ಪರಿಹಾರವಾದರೂ ನತದೃಷ್ಟ ಕುರಿಗಾಹಿಗಳಿಗೆ ಸಿಗುವುದಲ್ಲ ಎಂಬುದೇ ನೆಮ್ಮದಿಯ ವಿಷಯ. ಆದರೆ ವಾಸ್ತವವಾಗಿ ಮಾರುಕಟ್ಟೆಯ ಬೆಲೆಯೇ ಬೇರೆ ಇದೆ, ಇಷ್ಟು ಸಾಕಾಗದು ಎಂಬ ಮೊರೆ ಕುರಿಗಾಹಿಗಳಲ್ಲಿದೆ.
5 ಸಾವಿರ ರೂ.ಗಳ ಪರಿಹಾರ..!!
ನಾಯಿಗಳ ಹಾವಳಿಗೆ ತುತ್ತಾದ ಕುರಿಗಳಿಗೆ ಪರಿಹಾರ ನೀಡಲು ಇಲಾಖೆಯಲ್ಲಿ ಅವಕಾಶವಿದೆ. 3 ತಿಂಗಳ ಮರಿಗಳಾದರೆ 2500 ರೂ., 3 ತಿಂಗಳ ಮೇಲ್ಪಟ್ಟ ಕುರಿಗಳಿಗೆ 5 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಕುರಿಗಾಹಿಗಳು ಘಟನೆ ನಡೆದ ಕೂಡಲೇ ಸ್ಥಳೀಯ ಪಶುವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅವರು ಮರಣೋತ್ತರ ಪರೀಕ್ಷೆ ನಡೆಸಿ ದಾಖಲಾತಿಗಳೊಂದಿಗೆ ನಮಗೆ ಕಳುಹಿಸಿಕೊಡುತ್ತಾರೆ. ಸರ್ಕಾರದ ನಿಯಮಾವಳಿ ಪ್ರಕಾರ ಪರಿಹಾರ ನೀಡಲಾಗುವುದು.
ಡಾ.ಕೆ.ನಾಗಣ್ಣ, ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ತುಮಕೂರು.
ಕುರಿಮರಿಗಳನ್ನು ಒಂದು ಕಡೆ ಬಿಟ್ಟು ಹೋಗಿದ್ದೆ. ಸಂಜೆ ಬರುವುದರೊಳಗಾಗಿ ನನ್ನ 28 ಕುರಿಮರಿಗಳನ್ನು ನಾಯಿಗಳು ಕಚ್ಚಿ ಕೊಂದು ಹಾಕಿದ್ದವು. ಕುರಿಗಳ ದೇಹ ತಿನ್ನುವುದಿಲ್ಲ. ರಕ್ತ ಮಾತ್ರ ಹೀರುತ್ತವೆ. ಕುರಿಗಳನ್ನೇ ಸಾಕಿ ಬದುಕುವ ಕಾಯಕ ನಮ್ಮದು. ಇಷ್ಟೊಂದು ಕುರಿಮರಿಗಳನ್ನು ನಾಯಿಗಳು ಸಾಯಿಸಿರುವುದರಿಂದ ಈ ಕಾಯಕವೇ ಬೇಡ ಎನ್ನಿಸಿಬಿಟ್ಟಿದೆ. ಒಂದು ಮರಿಗೆ ಕನಿಷ್ಠ 4 ಸಾವಿರ ರೂ.ಗಳು, ಕುರಿಗೆ 10 ಸಾವಿರ ರೂ.ಗಳು ಇದೆ. ಇಷ್ಟು ನಷ್ಟವಾಗಿದೆ. ಸಂಬಂಧಿಸಿದವರಿಗೆ ತಿಳಿಸಿದ್ದೇನೆ.
ರಾಜಣ್ಣ, ಬಂದಕುಂಟೆ ಗೊಲ್ಲರಹಟ್ಟಿ, ಶಿರಾ ತಾ.
ಸ್ಥಳೀಯವಾಗಿ ಗ್ರಾಮಗಳಲ್ಲೇ ಇರುವ ನಾಯಿಗಳಿಂದ ಕುರಿಗಾಹಿಗಳಿಗೆ ತೊಂದರೆಯಾಗುತ್ತಿಲ್ಲ. ಈ ನಾಯಿಗಳು ಮರಿಗಳನ್ನು ಕಚ್ಚುತ್ತಿಲ್ಲ. ಆದರೆ ಬೇರೆ ಊರುಗಳಿಂದ, ನಗರಗಳಿಂದ ನಾಯಿಗಳನ್ನು ತಂದು ಬಿಡಲಾಗುತ್ತಿದೆ. ಇವುಗಳ ಸಂತತಿ ಹೆಚ್ಚುತ್ತಿದೆ. ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಅಲ್ಲದೆ, ಕುರಿಗಾಹಿಗಳಿಗೆ ನೀಡುವ ಪರಿಹಾರದ ಪ್ರಮಾಣವೂ ಹೆಚ್ಚಾಗಬೇಕು.