ತುಮಕೂರು
ತುಮಕೂರು ನಗರಾದ್ಯಂತ ಬಹುತೇಕ ಎಲ್ಲ ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಅತಿ ಹೆಚ್ಚಾಗಿದ್ದು, ಸಾರ್ವಜನಿಕರು ಭಯದಿಂದ ತತ್ತರಿಸುವಂತಾಗಿದೆ. ಇದರಿಂದ ತುಮಕೂರು ಮಹಾನಗರ ಪಾಲಿಕೆಯು ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಆಗುವಂತಾಗಿದೆ.
ಬೀದಿನಾಯಿಗಳು ಹಿಂಡುಹಿಂಡಾಗಿ ಕಂಡುಬರುತ್ತಿದ್ದು, ದಾರಿಹೋಕರು ಕಂಗೆಡುತ್ತಿದ್ದಾರೆ. ನಗರದ ಅನೇಕ ಬಡಾವಣೆಗಳ ರಸ್ತೆಗಳಲ್ಲಿ ಜನರು ನಡೆದಾಡಲು ಹೆದರುತ್ತಿದ್ದಾರೆ. ಅನೇಕ ಜನರು ನಾಯಿಗಳ ಹಿಂಡು ನೋಡಿ ಗಾಬರಿಯಿಂದ ಓಡುವಾಗ, ಬಿದ್ದು ಗಾಯಗೊಂಡವರಿದ್ದಾರೆ. ಕೆಲವರು ನಾಯಿಗಳಿಂದ ಕಚ್ಚಿಸಿಕೊಂಡು ಔಷದೋಪಚಾರಕ್ಕೊಳಗಾಗಿದ್ದಾರೆ.
ಮುಂಜಾನೆ ವಾಯುವಿಹಾರಕ್ಕೆ ತೆರಳುವ ಅನೇಕ ಜನರು ಈಗ ಬೀದಿನಾಯಿಗಳಿಗೆ ಹೆದರಿಕೊಂಡು ವಾಯುವಿಹಾರ ಮಾಡಲು ಹಿಂಜರಿಯುವಂತಾಗುತ್ತಿದೆ. ಅದೇ ರೀತಿ ಸಂಜೆ ವೇಳೆ ಸಹ ಅನೇಕ ಬಡಾವಣೆಗಳಲ್ಲಿ ವಾಯುವಿಹಾರಿಗಳು ಆತಂಕಪಡುತ್ತಿದ್ದಾರೆ. ರಾತ್ರಿ ವೇಳೆ ಸ್ಥಳೀಯ ಹಾಗೂ ಪರಸ್ಥಳಗಳಿಂದ ಮನೆಗೆ ಹಿಂತಿರುಗುವವರೂ ಸಹ ಈಗ ಬೀದಿನಾಯಿಗಳಿಗೆ ಹೆದರುವಂತಾಗಿದೆ ಎಂಬ ದೂರುಗಳು ನಗರಾದ್ಯಂತ ವ್ಯಾಪಕವಾಗಿ ಕೇಳಿಬರುತ್ತಿದೆ.
ಹಿರಿಯ ನಾಗರಿಕರು, ಅದರಲ್ಲೂ ಮಹಿಳೆಯರು ನಗರದ ಅನೇಕ ಬಡಾವಣೆಗಳ ರಸ್ತೆಗಳಲ್ಲಿ ನಡೆದಾಡಲು ಆತಂಕ ಪಡುತ್ತಿದ್ದಾರೆ. ಇನ್ನು ಮುಂಜಾನೆ ಮತ್ತು ರಾತ್ರಿ ವೇಳೆ ಟ್ಯೂಷನ್ ಇತ್ಯಾದಿಗೆ ನಡೆದುಕೊಂಡು ಅಥವಾ ಸೈಕಲ್‍ಗಳಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಹೋಗಿಬರುವ ವಿದ್ಯಾರ್ಥಿಗಳು ಬೆನ್ನಟ್ಟಿಬರುವ ಬೀದಿನಾಯಿಗಳ ಕಾಟದಿಂದ ತತ್ತರಿಸುತ್ತಿದ್ದಾರೆ. ಇವರು ಮನೆಗೆ ಸುರಕ್ಷಿತವಾಗಿ ಹಿಂತಿರುಗುವವರೆಗೂ ಪೋಷಕರಿಗೂ ಆತಂಕ ತಪ್ಪಿದ್ದಲ್ಲ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ರಾತ್ರಿ ವೇಳೆ ಅಥವಾ ಮುಂಜಾನೆ ವಿದ್ಯುಚ್ಛಕ್ತಿ ಇಲ್ಲದಿದ್ದರಂತೂ ಬೀದಿನಾಯಿಗಳ ಬಗೆಗಿನ ಆತಂಕ ದಾರಿಹೋಕರಲ್ಲಿ ಮತ್ತಷ್ಟು ಹೆಚ್ಚುತ್ತಿದೆ.
ಪಾಲಿಕೆಗೆ ಹಿಡಿಶಾಪ ಬೀದಿನಾಯಿಗಳ ಹಾವಳಿಯಿಂದ ತತ್ತರಿಸುತ್ತಿರುವ ಸಾರ್ವಜನಿಕರು, ಪ್ರತಿನಿತ್ಯ ಮಹಾನಗರ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೀದಿನಾಯಿಗಳನ್ನು ನಿಯಂತ್ರಿಸುವಲ್ಲಿ ಪಾಲಿಕೆಯು ಸಕಾಲಿಕವಾಗಿ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ದೂರುತ್ತಿದ್ದಾರೆ.
2 ಬಿಲ್‍ಗಳ ಬಾಕಿ? ಹಿಂದೆಲ್ಲ ಬೀದಿನಾಯಿಗಳನ್ನು ಹಿಡಿಯುವವರು ನಾಯಿಗಳನ್ನು ಹಿಡಿದು ಸ್ಥಳದಲ್ಲೇ ಸಾಯಿಸಿ, ವಾಹನಗಳಿಗೆ ತುಂಬಿಕೊಂಡು ಸಾಗಿಸುತ್ತಿದ್ದರು. ಆದರೆ ಈಗ ಅವೆಲ್ಲ ಸಾಧ್ಯವಿಲ್ಲ. ಸುಪ್ರಿಂ ಕೋರ್ಟ್ ನಿರ್ದೇಶನದ ಅನುಸಾರ ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು. ಬಳಿಕ ಅವುಗಳನ್ನು ಅವು ಮೊದಲಿದ್ದ ಸ್ಥಳದಲ್ಲೇ ಬಿಟ್ಟು ಬಿಡಬೇಕು” ಎಂದು ಸಾರ್ವಜನಿಕ ಹೋರಾಟಗಾರರು ಹೇಳುತ್ತಿದ್ದಾರೆ. “ನಾವು ಈ ಬೀದಿನಾಯಿ ಹಾವಳಿ ವಿಷಯವಾಗಿ ಪಾಲಿಕೆಯಲ್ಲಿ ಒಂದಿಷ್ಟು ಕೆದಕಿದ್ದೇವೆ. ನಮಗೆ ತಿಳಿದುಬಂದ ಮಾಹಿತಿ ಪ್ರಕಾರ ಈ ಹಿಂದೆ ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ ಗುತ್ತಿಗೆದಾರರಿಗೆ ಎರಡು ಬಿಲ್‍ಗಳ ಮೊತ್ತವನ್ನು ಈವರೆಗೆ ಪಾವತಿ ಮಾಡಿಲ್ಲವಂತೆ. ಹೀಗಾದರೆ ನಾಯಿಗಳನ್ನು ಹಿಡಿಯಲು ಯಾರು ತಾನೇ ಬರುತ್ತಾರೆ? ಹಿಂದಿನ ಜನಪ್ರತಿನಿಧಿಗಳೂ ಈ ವಿಷಯದಲ್ಲಿ ನಿಗಾ ವಹಿಸಲಿಲ್ಲ. ಈಗ ಏನಾಗುತ್ತದೆಂಬುದನ್ನು ಕಾದು ನೋಡಬೇಕು” ಎನ್ನುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








